ರುದ್ರಭೂಮಿಯ ಕಾವಲುಗಾರ ಒಡ್ಡಿದ ಸವಾಲು ಸ್ವೀಕರಿಸಿದ ಹುಲಿಕಲ್ ನಟರಾಜ್

0

ಸುಳ್ಯದ ಸ್ಮಶಾನಕ್ಕೆ ಬರುತ್ತಾರೆಯೇ ಹುಲಿಕಲ್ ನಟರಾಜ್ ?

ಕೊಡಿಯಾಲಬೈಲು ರುದ್ರಭೂಮಿಯ ಕಾವಲುಗಾರ ಗುರುವರವರನ್ನು ಸುಳ್ಯದ ದೃಶ್ಯ ಮಾಧ್ಯಮವೊಂದು
ಸಂದರ್ಶನ ಮಾಡಿದ್ದು, ಸ್ಮಶಾನದಲ್ಲಿ ಅವರಿಗಾಗುತ್ತಿದ್ದ ಅನುಭವಗಳನ್ನು
ಸಂದರ್ಶನದಲ್ಲಿ ತಿಳಿಸಿದ್ದು ಅದನ್ನು ಸವಾಲಾಗಿ ಸ್ವೀಕರಿಸಿದ ಪವಾಡ ರಹಸ್ಯ ಬಯಲು ಮಾಡುವುದರಲ್ಲಿ ಖ್ಯಾತಿ ಪಡೆದಿದ್ದ ಹುಲಿಕಲ್ ನಟರಾಜ್ ರವರು ಸುಳ್ಯಕ್ಕೆ ಬಂದು ಸ್ಮಶಾನದಲ್ಲಿ ಒಂದು ರಾತ್ರಿ ಕಳೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಗುರುವ ಅವರು, “ಈ ಸ್ಮಶಾನದಲ್ಲಿ ರಾತ್ರಿ ಉಳಿದುಕೊಳ್ಳುವ ಸಂದರ್ಭದಲ್ಲಿ ನಾನು ಅನೇಕ ಪ್ರೇತಗಳನ್ನು ಕಣ್ಣಾರೆ ಕಂಡಿದ್ದೇನೆ. ಪ್ರೇತ ಎಂದರೆ ಅದೊಂದು ಮೂಢನಂಬಿಕೆ, ಪ್ರೇತ ಅನ್ನುವಂತದ್ದು ಇಲ್ಲವೇ ಇಲ್ಲವೆಂದು ಯಾರಾದರೂ ವಾದಿಸುವುದಿದ್ದರೆ ನಾನು ಅವರಿಗೆ ಈ ಸ್ಮಶಾನದಲ್ಲಿ ಪ್ರೇತಗಳು ಅಡ್ಡಾಡುವುದನ್ನು ತೋರಿಸಲು ಸಿದ್ದ” ಎಂದು ಸವಾಲೆಸೆದಿದ್ದರು.

ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು ಹುಲಿಕಲ್ ನಟರಾಜ್ ಅವರಿಗೂ ಈ ವೀಡಿಯೋ ತುಣುಕು ಸಿಕ್ಕಿ ಗುರುವ ಅವರ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿದ ನಟರಾಜ್ ಅವರು ಖುದ್ದಾಗಿ ಗುರುವ ಅವರಿಗೆ ಕರೆಮಾಡಿ, “ನಾನು ಈ ಸವಾಲನ್ನು ಸ್ವೀಕರಿಸಲು ಸಿದ್ದ, ಸ್ಮಶಾನಕ್ಕೆ ಯಾವಾಗ ಬರಬೇಕು, ತಿಳಿಸಿ” ಎಂದಿದ್ದರು.

ಅದಕ್ಕೆ ಉತ್ತರಿಸಿದ ಗುರುವರವರು, “ಯಾವುದಾದರೂ ಒಂದು ಮಂಗಳವಾರದ ಅಮವಾಸ್ಯೆಯ ರಾತ್ರಿ ಬಂದಲ್ಲಿ ಪ್ರೇತಗಳನ್ನು ನೋಡಬಹುದು, ನೀವು ಸ್ಥಳೀಯ ಪಂಚಾಯತ್ ನ ಅನುಮತಿ ಪಡೆದುಕೊಂಡು ಬರಬೇಕಾಗುತ್ತದೆ. ಸ್ಮಶಾನದಲ್ಲಿ ನಿಮಗೇನಾದರೂ ತೊಂದರೆ ಸಂಭವಿಸಿದಲ್ಲಿ ನೀವೇ ಅದಕ್ಕೆ ಹೊಣೆಗಾರರಾಗುತ್ತೀರಿ” ಎನ್ನುತ್ತಾರೆ.

ತದ ನಂತರ ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸುಂತೋಡುರವರನ್ನು ಸಂಪರ್ಕಿಸಿದಾಗಲೂ “ಪರ್ಮಿಷನ್ ಕೊಡಲಿಕ್ಕೆ ಆಗುವುದಿಲ್ಲ, ಆಮೇಲೆ ಫೋನ್ ಮಾಡುತ್ತೇನೆ” ಎಂದಿದ್ದರು.

ಇದೀಗ ಗುರುವ ಅವರ ಸವಾಲನ್ನು ಸ್ವೀಕರಿಸಿರುವ ನಟರಾಜ್ ಅವರು,
ಉಬರಡ್ಕ ಪಂಚಾಯತಿಗೆ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಅನುಮತಿಗಾಗಿ ಪತ್ರ ಬರೆಯಲು ನಿರ್ಧರಿಸಿದ್ದಾರೆ.