ಕೊಯನಾಡು: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಹಾಗೂ ಶಾಸಕ ಪೊನ್ನಣ್ಣ ಭೇಟಿ

0

ಕೊಯನಾಡಿನಲ್ಲಿಯೇ ಜಾಗ ನೋಡಿ ನೂತನ ಶಾಲೆ ನಿರ್ಮಾಣಕ್ಕೆ ವ್ಯವಸ್ಥೆ: ಶಾಸಕ ಪೊನ್ನಣ್ಣ ಭರವಸೆ

ಮೂರು ತಿಂಗಳ ಮಟ್ಟಿಗೆ ಸಂಪಾಜೆ ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ನಿರ್ಧಾರ

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸ.ಹಿ.ಪ್ರಾ.ಶಾಲೆಗೆ ಸಣ್ಣ ನೀರಾವರಿ – ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜ್ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಜು.20ರಂದು ಸಂಜೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಬಳಿಕ ಶಾಸಕ ಪೊನ್ನಣ್ಣ ಮಾತನಾಡಿ ಸದ್ಯ ಶಿಕ್ಷಣ ಇಲಾಖೆ ನಿರ್ದೇಶನದಂತೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹತ್ತಿರದ ಸಂಪಾಜೆ ಶಾಲೆಗೆ ಸ್ಥಳಾಂತರ ಮಾಡಲಾಗಿದ್ದು, ಮೂರು ತಿಂಗಳ ಮಟ್ಟಿಗೆ ಸಂಪಾಜೆ ಶಾಲೆಯಲ್ಲಿಯೇ ಶಿಕ್ಷಣದ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಮುಂದೆ ಕೊಯನಾಡಿನ ಪರಿಸರದಲ್ಲಿ ಸರ್ಕಾರಿ ಜಾಗ ಇದ್ದಲ್ಲಿ ನೂತನ ಶಾಲೆ ನಿರ್ಮಾಣದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಶಾಸಕರು ಪ್ರಸ್ತುತ ಭೂಕುಸಿತ ಸಂಭವಿಸಿರುವ ಕೊಯನಾಡು ಶಾಲಾ ಹಿಂಬದಿ ತಡೆಗೋಡೆ ನಿರ್ಮಾಣಕ್ಕೂ ಆದ್ಯತೆ ನೀಡುವುದಾಗಿ ತಿಳಿಸಿದರು.

ಮದೆನಾಡಿನ ಕರ್ತೋಜಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿ, ಗುಡ್ಡ ಕುಸಿಯುವ ಆತಂಕ ಇರುವ ಸ್ಥಳಕ್ಕೆ ಭೇಟಿ ನೀಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಮತ್ತು ಶಾಸಕ ಪೊನ್ನಣ್ಣ ಅವರು ಬಳಿಕ ಕೊಯನಾಡಿಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಕೊಯನಾಡು ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಹಳೆವಿದ್ಯಾರ್ಥಿಗಳು, ಶಿಕ್ಷಣ ಇಲಾಖಾ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಪೋಷಕರು, ಕೊಡಗು ಸಂಪಾಜೆ ಗ್ರಾಮಸ್ಥರು, ಮಡಿಕೇರಿ ಹಾಗೂ ವಿರಾಜಪೇಟೆಯ ಕಾಂಗ್ರೆಸ್ ಮುಖಂಡರುಗಳು, ಸಂಪಾಜೆ, ಪೆರಾಜೆ, ಚೆಂಬು ಭಾಗದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.