ಸುಳ್ಯ ನಗರಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಕುರಿತು ಚರ್ಚೆ

0

ಸುಳ್ಯ ನಗರದಲ್ಲಿ ನಡೆಯುತ್ತಿರುವ ನೀರು ಸರಬರಾಜು ಯೋಜನೆಗಾಗಿ ರಸ್ತೆ ಅಗೆದಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ನ.ಪಂ. ಸದಸ್ಯರು, ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಎದುರು ವಿವರ ನೀಡಿದ ಹಾಗೂ ಸಮಸ್ಯೆ ಅರಿತುಕೊಂಡ ಅಧಿಕಾರಿಗಳು ತಾತ್ಕಾಲಿಕ ಪರಿಹಾರದ ಭರವಸೆ ನೀಡಿ, ಮಳೆ ಕಡಿಮೆಯಾದ ಬಳಿಕ ಸೆಪ್ಟೆಂಬರ್ ನಂತರ ಮತ್ತೆ ಕೆಲಸ ಆರಂಭಿಸುವುದಾಗಿ ಮಾಹಿತಿಯನ್ನು ನ.ಪಂ. ಸಭೆಯಲ್ಲಿ ನೀಡಿದ್ದಾರೆ.

ಜು.23ರಂದು ಸುಳ್ಯ ನಗರ ಪಂಚಾಯತ್‌ನಲ್ಲಿ ಆಡಳಿತಾಧಿಕಾರಿ ಮಂಜುನಾಥರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮುಖ್ಯಾಧಿಕಾರಿ ಸುಧಾಕರ್, ನಗರ ನೀರು ಸರಬರಾಜು ಮಂಡಳಿಯ ಎ.ಇ.ಇ. ಅಜಯ್ ಕುಮಾರ್, ಎ.ಇ. ಶ್ರೀಕಾಂತ್, ನ.ಪಂ. ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಡೇವಿಡ್ ಧೀರಾ ಕ್ರಾಸ್ತಾ, ಬುದ್ದ ನಾಯ್ಕ, ಸುಧಾಕರ ಕುರುಂಜಿಭಾಗ್, ಸುಶೀಲ ಕಲ್ಲುಮುಟ್ಲು, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಸರೋಜಿನಿ ಪೆಲ್ತಡ್ಕ, ಕಿಶೋರಿ ಶೇಟ್, ನಾಮ ನಿದೇಶಿತ ಸದಸ್ಯ ರಾಜು ಪಂಡಿತ್ ಇದ್ದರು.

ನ.ಪಂ. ಸದಸ್ಯ ಉಮ್ಮರ್ ಕೆ.ಎಸ್. ಮಾತನಾಡಿ, “ನಗರವನ್ನೊಮ್ಮೆ ಸುತ್ತಿದರೆ ನೈಜ ಸಮಸ್ಯೆಗಳು ಅರಿವಾಗುತ್ತದೆ. ರಸ್ತೆ ಅಗೆದು ಸರಿಯಾಗಿ ಮುಚ್ಚಿಲ್ಲ. ಈಗ ನೀರು ಸರಬರಾಜು ಆಗುತ್ತಿರುವ ನೀರಿನ ಪೈಪ್ ತುಂಡಾಗಿ ಸಮಸ್ಯೆ ಆಗಿದೆ. ಸಮಸ್ಯೆ ಹೇಳಿದರೆ ಯಾರೂ ಬರುವುದಿಲ್ಲ. ಒಂದು ಪ್ಲ್ಯಾನಿಂಗ್ ಇಲ್ಲದೇ ಕೆಲಸ ಮಾಡಿರುವುದರಿಂದ ಜನರಿಗೆ ಸಮಸ್ಯೆ ಆಗುತ್ತಿದೆ. ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ವಿವರವನ್ನು ಅಧಿಕಾರಿಗಳ ಮುಂದೆ ಇಟ್ಟರು.

ಬಳಿಕ ಮಾತನಾಡಿದ ಸದಸ್ಯ ಡೇವಿಡ್ ಧೀರಾ ಕ್ರಾಸ್ತರು, “ಮಳೆ ನೀರು ಹೋಗುವ ಚರಂಡಿಯಲ್ಲೇ ಪೈಪ್ ಹಾಕಿದ್ದಾರೆ. ಇಂಟರ್ ಲಾಕ್ ತೆಗೆದಿರುವುದನ್ನು ಮತ್ತೆ ಅಳವಡಿಸದೇ ಹಾಗೆ ಬಿಟ್ಟಿದ್ದಾರೆ. ನಾವು ಮೂರುವರೆ ವರ್ಷದಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಮಾಡಿದ ಕೆಲಸಗಳು ಈ ಕುಡಿಯುವ ನೀರಿನ ಸರಬರಾಜು ಯೋಜನೆಯಿಂದಾಗಿ ಹಾಳಾಗಿ ಹೋಗಿದೆ” ಎಂದು ಹೇಳಿದರು.

ಸದಸ್ಯರುಗಳಾದ ಸರೋಜಿನಿ ಪೆಲತಡ್ಕ ಹಾಗೂ ಶೀಲಾ ಕುರುಂಜಿಯವರು, ಪೈಪ್ ಹಾಕಲು ರಸ್ತೆ ಅಗೆದು ಸರಿಯಾಗಿ ಮುಚ್ಚದೇ ಇರುವ ಕುರಿತು ಪ್ರಸ್ತಾಪಿಸಿದರು. ಸದಸ್ಯ ವಿನಯ ಕುಮಾರ್ ಕಂದಡ್ಕ ಮಾತನಾಡಿ “ಕೆಲಸ ನಿರ್ವಹಿಸುವಾಗ ಸರಿಯಾದ ಇಂಜಿನಿಯರ್‌ರನ್ನು ಇಲ್ಲಿ ಬಿಡಬೇಕು. ಮೇಸ್ತ್ರಿ ಯಾದವ ಮೇಸ್ತ್ರಿಯ ಕೆಲಸವನ್ನೇ ಮಾಡಬೇಕು ಹೊರತು ಅವನು ಪ್ಲ್ಯಾನಿಂಗ್ ಮಾಡಬಾರದು. ರಸ್ತೆಯ ಬದಿ ರಾಶಿ ಹಾಕಿದ್ದ ಕಲ್ಲನ್ನು ತೆಗೆಯದೇ ಅಲ್ಲಿ ಪೈಪ್‌ನ್ನು ಬೆಂಡ್ ಮಾಡಿ ಹಾಕಿದ್ದಾರೆ. ರಸ್ತೆಯ ಕಟ್ ಮಾಡಿ ಸರಿಯಾಗಿ ಮುಚ್ಚದಿರುವುದರಿಂದ ಸಮಸ್ಯೆ ಆಗಿದೆ. ರಿಕ್ಷಾದವರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಚರಂಡಿಯಲ್ಲಿ ಬೈಪ್ ಹಾಕಿರುವುದರಿಂದ ಚರಂಡಿ ಬ್ಲಾಕ್ ಆಗಿದೆ ಎಂದು ಸಮಸ್ಯೆಯನ್ನು ವಿವರಿಸಿದರು.

ಸದಸ್ಯೆ ಶಿಲ್ಪಾ ಸುದೇವ್ ಜಯನಗರದಲ್ಲಿ ಆಗುತ್ತಿರುವ ಕೆಲಸದಿಂದ ೬ ಮನೆಯವರಿಗೆ ರಸ್ತೆ ಇಲ್ಲದೇ ಆಗಿರುವ ಸಮಸ್ಯೆಯನ್ನು ವಿವರಿಸಿದರು. ಎಂ.ವೆಂಕಪ್ಪ ಗೌಡರು ತಮ್ಮ ವಾರ್ಡ್‌ನಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಆಗಿರುವ ಸಮಸ್ಯೆಯನ್ನು ವಿವರಿಸಿ, ಒಳಚರಂಡಿ ಕಾಮಗಾರಿ ಈ ಹಿಂದೆ ಆಗಿ ಪ್ರಯೋಜನಕ್ಕೆ ಬಾರದಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿ, ಸಮಸ್ಯೆ ಆಗದಂತೆ ಕೆಲಸ ನಿರ್ವಹಿಸಬೇಕು. ಮತ್ತು ಸದಸ್ಯರು ಸಮಸ್ಯೆಯನ್ನು ಹೇಳಿದಾಗ ತಕ್ಷಣ ಸ್ಪಂದನೆ ನೀಡಬೇಕು. ಮುಂದೆ ಪ್ರತೀ ತಿಂಗಳು ನಿಮ್ಮ ಕೆಲಸದ ಪ್ರಗತಿಯ ಕುರಿತು ಸಭೆ ನಡೆಸಿ ನಮಗೆ ಮಾಹಿತಿ ಕೊಡಬೇಕು ಎಂದು ಹೇಳಿದರು.

ಸದಸ್ಯೆ ಸುಶೀಲ ಜಿನ್ನಪ್ಪರು ಕಲ್ಲುಮುಟ್ಲು ವ್ಯಾಪ್ತಿಯಲ್ಲಿ ಪೈಪ್ ಅಳವಡಿಕೆಯ ವಿವರ ಪಡೆದರು.ಸಮಸ್ಯೆಯನ್ನು ಆಲಿಸಿದ ನಗರ ನೀರು ಸರಬರಾಜು ಮಂಡಳಿಯ ಎ.ಇ.ಇ. ಅಜಯ್ ಕುಮಾರ್ ರವರು, “ಸಮಸ್ಯೆ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಈಗ ರಸ್ತೆ ಕಟ್ ಮಾಡಿರುವುದನ್ನು ವೆಟ್ ಮಿಕ್ಸ್ ಹಾಕಿ ತಕ್ಷಣಕ್ಕೆ ಸರಿ ಪಡಿಸಿಕೊಡುತ್ತೇವೆ. ಇದು ತಾತ್ಕಾಲಿಕವಷ್ಟೆ. ನೀವು ಸಮಸ್ಯೆಗಳನ್ನು ಯಾವುದೆಲ್ಲ ಹೇಳಿದ್ದೀರೋ ಅದನ್ನು ನಾಳೆಯಿಂದಲೇ ಸರಿ ಪಡಿಸಿಕೊಂಡು ಹೋಗುತ್ತೇವೆ. ಈಗ ಮಳೆ ಆಗಿರುವುದರಿಂದ ನಾವು ಕೆಲಸ ನಿಲ್ಲಿಸಿದ್ದು, ಮಳೆ ಕಡಿಮೆ ಆದ ಕೂಡಲೇ ಮತ್ತೆ ಕೆಲಸ ಆರಂಭಿಸುತ್ತೇವೆ. ಮತ್ತು ನೀವು ಹೇಳಿದಂತೆ ಇಂಜಿನಿಯರ್ ಇಲ್ಲೇ ಇರುತ್ತಾರೆ. ಸಮಸ್ಯೆಗಳಾದಾಗ ತಕ್ಷಣ ಸ್ಪಂದನೆ ಮಾಡುತ್ತೇವೆ ಎಂದು ಹೇಳಿದರು.

ಕುರುಂಜಿಗುಡ್ಡೆಯಲ್ಲಿ ಮತ್ತು ಜಯನಗರದಲ್ಲಿ ಟ್ಯಾಂಕ್ ಕೆಲಸ ಪ್ರಗತಿಯಲ್ಲಿದೆ. ಉಳಿದಂತೆ ಕಲ್ಲುಮುಟ್ಲು, ಬೀರಮಂಗಲ, ಬೋರುಗುಡ್ಡೆಯಲ್ಲಿ ಟ್ಯಾಂಕ್ ಆಗಲಿದೆ. ನಮಗೆ ಜಾಗದ ಸಮಸ್ಯೆ ಇದೆ. ಪೈಪ್ ಲೈನ್ ಅಳವಡಿಕೆ ಸಂದರ್ಭ ರಸ್ತೆಯ ಬದಿ ಜಾಗ ಇದ್ದರೆ ಅಲ್ಲಿ ಹಾಕಲಾಗುವುದು.. ರಸ್ತೆಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು, ಜಾಗ ಇಲ್ಲದಲ್ಲಿ ರಸ್ತೆಯನ್ನು ಅಗೆದು ಪೈಪ್ ಲೈನ್ ಮಾಡಬೇಕಾಗುತ್ತದೆ. ಮತ್ತೆ ಆ ರಸ್ತೆಯನ್ನು ಸರಿ ಪಡಿಸಿ ಕೊಡುವ ಜವಾಬ್ದಾರಿ ಕೂಡಾ ನಮ್ಮ ಮೇಲಿದೆ ಎಂದವರು ವಿವರ ಸಲ್ಲಿಸಿದರು.