ಕುರುಂಜಿಗುಡ್ಡೆ ಪಾರ್ಕ್ ಅವ್ಯವಸ್ಥೆ : ಕಣ್ಣಿದ್ದು ಕುರುಡಾಗಿರುವ ನಗರಾಡಳಿತ

0

ಸುಳ್ಯದ ಕುರುಂಜಿಗುಡ್ಡೆ ಪಾರ್ಕ್ ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಕುರಿತು ಹಾಗೂ ನಗರ ಪಂಚಾಯತ್ ಗಮನಹರಿಸುವಂತೆ ಅಧಿಕಾರಿಗಳಿಗೆ ಮನವಿ ನೀಡಿ, ಮತ್ತು ಪಾರ್ಕ್ ನ ಅವ್ಯವಸ್ಥೆ ಕುರಿತು ಎಲ್ಲ ಮಾಧ್ಯವಗಳು ವರದಿ ಪ್ರಕಟಿಸಿ 20 ದಿನಗಳೇ ಕಳೆದರೂ ನಗರ ಪಂಚಾಯತ್ ಅಧಿಕಾರಿಗಳು ನಮಗೂ ಕುರುಂಜಿಗುಡ್ಡೆ ಪಾರ್ಕ್ ಗೂ ಸಂಬಂಧವೇ ಇಲ್ಲ ಎಂಬಂತೆ ಕುಳಿತಂತಿದೆ.

ನ.ಪಂ. ವತಿಯಿಂದ ಕೆಲವು ವರ್ಷಗಳ ಹಿಂದೆ 10 ರಿಂದ 12 ಲಕ್ಷ ರೂ ಖರ್ಚು ಮಾಡಿ ಕುರುಂಜಿಗುಡ್ಡೆಯಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿತ್ತು. ಅಲ್ಲಿ ಆಕರ್ಷಕ ಗಿಡಗಳನ್ನು ನೆಡಲಾಗಿದೆ. ಕುಳಿತುಕೊಳ್ಳಲು ಸಿಮೆಂಟ್ ಬೆಂಚುಗಳನ್ನು ಅಳವಡಿಸಲಾಗಿದೆ. ಮಕ್ಕಳಿಗೆ ಆಟವಾಡಲು ಬೇಕಾದ ವಸ್ತುಗಳನ್ನು ಅಳವಡಿಸಲಾಗಿದೆ. ಪಾರ್ಕ್‌ನ ಸುತ್ತಲೂ ತಡೆ ಬೇಲಿಯನ್ನು ಹಾಕಲಾಗಿತ್ತು. ಆ ಬೇಲಿಗಳು ಈಗ ಹಾಳಾಗಿದೆ.
ಈ ಪಾರ್ಕ್‌ಗೆ ಬೆಳಗ್ಗೆ ೭ ಗಂಟೆಯಿಂದಲೇ ಶಾಲಾ – ಕಾಲೇಜು ವಿದ್ಯಾರ್ಥಿ – ವಿದ್ಯಾರ್ಥಿನಿಯವರು ಬರುತ್ತಿರುತ್ತಾರೆ. ದಿನವಿಡೀ ಕಾಲ ಕಳೆಯುವುದು ಕಂಡು ಬರುತ್ತದೆ. ಇಲ್ಲಿ ರಾತ್ರಿ ಪಾರ್ಟಿಗಳು ನಡೆಯುತ್ತಿರುತ್ತವೆ. ತಡ ರಾತ್ರಿವರೆಗೂ ಸಾರ್ವಜನಿಕರು ವಾಹನಗಳಲ್ಲಿ ಬಂದು ಹೋಗುತ್ತಿರುತ್ತಾರೆ. ಪಾರ್ಕ್ ಸ್ವಚ್ಛತೆಯಿಲ್ಲ. ಅಲ್ಲಲ್ಲಿ ಶರಾಬು ಬಾಟಲಿಗಳು ಬಿದ್ದುಕೊಂಡಿರುತ್ತದೆ. ಕೆಲವೊಮ್ಮೆ ಗಲಾಟೆಗಳಾಗಿದ್ದು ಅದು ಪೋಲೀಸ್ ಠಾಣೆ ಮೆಟ್ಟಿಲೇರಿದ ಘಟನೆಯೂ ನಡೆದಿದೆ. ಆದ್ದರಿಂದ ಕುರುಂಜಿಗುಡ್ಡೆ ಪಾರ್ಕ್ ಎಷ್ಟು ಸಮಯಕ್ಕೆ ಜನರು ಬರಬಹುದು, ಸ್ವಚ್ಛತೆ ಕಾಪಾಡುವ ಕುರಿತು ಪಾರ್ಟಿಗಳು ಮಾಡದಂತೆ, ಪಾರ್ಕ್ ವಾತಾವರಣ ಕೆಡಿಸದಂತೆ ನ.ಪಂ. ನಿಂದ ನಿಯಮಗಳನ್ನು ಸೂಚಿಸಿ ಶೀಘ್ರವಾಗಿ ನಾಮಫಲಕ ಅಳವಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿವೆ. ಮತ್ತು ಪಾರ್ಕ್‌ನ ಸುತ್ತಲೂ ಸುಸಜ್ಜಿತ ತಡೆ ಬೇಲಿಯನ್ನು ಅಳವಡಿಸಬೇಕು ಎಂದು ನಗರ ಪಂಚಾಯತ್ ಆಡಳಿತಾಧಿಕಾರಿಗಳು ಆ್ಇರುವ ತಹಶೀಲ್ದಾರ್ ಮಂಜುನಾಥ್ ರಿಗೆ ಕೇರ್ಪಳದ ಪಯಸ್ವಿನಿ ಯುವಕ ಮಂಡಲದವರು ಮನವಿ ಸಲ್ಲಿಸಿದ್ದರು.

ಈ ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ್ ರವರು ಎರಡು ದಿನದಲ್ಲೇ ನಾಮಫಲಕ ಅಳವಡಿಸುವುದಾಗಿ ಭರವಸೆ ನೀಡಿದ್ದರು.

ಇದಾದ ಬಳಿಕ ಸುಳ್ಯದ ಪತ್ರಕರ್ತರು ಕುರುಂಜಿಗುಡ್ಡೆ ಪಾರ್ಕ್ ಗೆ ಭೇಟಿ ನೀಡಿ ಅಲ್ಲಿಯ ವಸ್ತು ಸ್ಥಿತಿ ವರದಿಯನ್ನು ಡಿಜಿಟಲ್ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ವರದಿಯಾಗಿದ್ದವು.

ಮೂರುವಾರಗಳ ಹಿಂದೆ ಪುತ್ತೂರು ಸಹಾಯಕ ಕಮಿಷನರ್ ರವರು ನಗರ ಪಂಚಾಯತ್ ನಲ್ಲಿ ಸಭೆ ನಡೆಸಿ, ಮಾಧ್ಯಮ ದಲ್ಲಿ ಕುರುಂಜಿಗುಡ್ಡೆ ಪಾರ್ಕ್ ಕುರಿತು ಬಂದ ಲೇಖನವನ್ನು ಉಲ್ಲೇಖಿಸಿ ಅಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಾಧಿಕಾರಿ ಗಳಿಗೆ ಸೂಚನೆ ನೀಡಿದ್ದರು.

ಜು.10ರಂದು ತಾಲೂಕು ಪಂಚಾಯತ್ ನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾರ್ಕ್ ಅವ್ಯವಸ್ಥೆ ಪ್ರತಿಧ್ವನಿ ಸಿ ಸಭೆಯಲ್ಲಿ ಮುಖ್ಯಾಧಿಕಾರಿಗಳು ನಿರ್ವಹಣೆಯ ಕುರಿತು ಹೇಳಿದ್ದರು.

ಇಷ್ಟೆಲ್ಲ ಪ್ರಕ್ರಿಯೆ ನಡೆದರೂ ನ.ಪಂ. ಕನಿಷ್ಟ ಪಕ್ಷ ನಿಯಮ ಸೂಚಿಸಿ ನಾಮಫಲಕ ಅಳವಡಿಸದೇ ಇರುವುದರಿಂದ ಎರಡು ವಾರದ ಹಿಂದೆ ಮಾಧ್ಯಮ ಪ್ರತಿನಿಧಿಗಳು ತಹಶೀಲ್ದಾರ್ ರಿಗೆ ಮತ್ತೆ ನೆನಪು ಮಾಡಿದಾಗ, ಅವರು ಮುಖ್ಯಾಧಿಕಾರಿ ಗಳಿಗೆ ಕರೆ ಮಾಡಿ ತಕ್ಷಣ ನಾಮಫಲಕ ಅಳವಡಿಸುವಂತೆ ಮುಖ್ಯಾಧಿಕಾರಿ ಸುಧಾಕರ್ ರಿಗೆ ಸೂಚನೆ ನೀಡಿದರು.

ಜು.23ರಂದು ನ.ಪಂ. ನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮತ್ತೆ ಪ್ರಸ್ತಾಪವಾಗಿದೆ.

ಆದರೆ ನಗರ ಪಂಚಾಯತ್ ಮಾತ್ರ ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಪಾರ್ಟಿ, ರಾತ್ರಿ ವೇಳೆ ಜನರು ಬರಲು ಅವಕಾಶ ಮಾಡಿ ಕೊಟ್ಟಂತೆ ವರ್ತಿಸುವಂತಿದೆ.