ಭೋವಿ ನಿಗಮದ ಅವ್ಯವಹಾರಸಂಪಾಜೆಯ ಪಿ.ಡಿ. ಸುಬ್ಬಪ್ಪ ಬಂಧನ

0

ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಸಚಿವ ನಾಗೇಂದ್ರರವರು ರಾಜೀನಾಮೆ ನೀಡಿರುವ ಬೆನ್ನಿಗೇ ರಾಜ್ಯ ಸರಕಾರವು ಬೇರೆ ನಿಗಮಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆ ಕೂಡಾ ತನಿಖೆ ಆರಂಭಿಸಿದೆ. ರಾಜ್ಯದ ಭೋವಿ ಅಭಿವೃದ್ಧಿ ನಿಗಮದಲ್ಲಾಗಿರುವ ಕೋಟ್ಯಾಂತರ ರೂ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭೋವಿ ನಿಗಮದ ಕಛೇರಿ ಅಧೀಕ್ಷಕರಾದ ಪಿ.ಡಿ. ಸುಬ್ಬಪ್ಪ ಎಂಬವರನ್ನು ಬಂಧಿಸಿದ್ದಾರೆ. ೨೦೨೧ – ೨೨ನೇ ಸಾಲಿನಲ್ಲಿ ಭೋವಿ ಸಮುದಾಯದ ಉದ್ಯಮಿಗಳಿಗೆ ನಿಗಮವು ನೀಡುವ ಆರ್ಥಿಕ ಸಾಲ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಬೆಂಗಳೂರು ನಗರದ ಸಿದ್ಧಾಪುರ, ಕಲಬುರುಗಿ ಜಿಲ್ಲೆಯ ಕಾಳಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಈ ಬಗ್ಗೆ ರಾಜ್ಯ ಸರ್ಕಾರವು ಕಳೆದ ಕೆಲವು ದಿನಗಳ ಹಿಂದೆ ತನಿಖೆ ನಡೆಸುವಂತೆ ಸಿ.ಐ.ಡಿ. ಇಲಾಖೆಗೆ ಸೂಚಿಸಿತ್ತು. ಪಿ.ಡಿ. ಸುಬ್ಬಪ್ಪ ಅವರು ಕೊಡಗು ಸಂಪಾಜೆ ಗ್ರಾಮದ ಪುಲ್ಲಾಜೆ ನಿವಾಸಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದರು. ಸಿ.ಐ.ಡಿ. ಅಧಿಕಾರಿಗಳು ಜು.೨೨ರಂದು ಬೆಂಗಳೂರಿನಲ್ಲಿ ಬಂದಿಸಿರುವುದಾಗಿ ತಿಳಿದುಬಂದಿದೆ.