ತೊಡಿಕಾನ: ಕುಂಟುಕಾಡುವಿನಲ್ಲಿ ಭಾರೀ ಪ್ರಮಾಣದಲ್ಲಿ ಬರೆಜರಿದು ಹೊಸಮನೆಗೆ ವ್ಯಾಪಕ ಹಾನಿ

0

ಮನೆಯೊಳಗೆ ತುಂಬಿದ ಕಲ್ಲುಮಣ್ಣುಗಳ ರಾಶಿ

ಸಹೋದರನ ಮನೆಯಲ್ಲಿ ವಾಸ್ತವ್ಯ ಹೂಡಿರುವ ದಾಮೋದರ ವ್ಯಾಪಾರೆ ಕುಟುಂಬ

ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಡಿಕಾನ ಗ್ರಾಮದ ಕುಂಟುಕಾಡುವಿನಲ್ಲಿ ದಾಮೋದರ ವ್ಯಾಪಾರೆ ಎಂಬವರ ಮನೆ ಹಿಂಬದಿಯಲ್ಲಿ ಭಾರೀ ಪ್ರಮಾಣದಲ್ಲಿ ಬರೆ ಜರಿದು, ಹೊಸಮನೆಗೆ ವ್ಯಾಪಕ ಹಾನಿಯಾದ ಘಟನೆ ವರದಿಯಾಗಿದೆ.

ದಾಮೋದರ ವ್ಯಾಪಾರೆ ಅವರು ತಮ್ಮ ಹಳೆಯ ಮನೆಯ ಪಕ್ಕದಲ್ಲಿ ಹೊಸ ಮನೆಯನ್ನು ನಿರ್ಮಾಣ ಮಾಡಿದ್ದು, ಮನೆಯ ಹಿಂಬದಿಯಲ್ಲಿ ಭಾರೀ ಪ್ರಮಾಣದಲ್ಲಿ ಬರೆ ಜರಿದು ಕಲ್ಲುಮಣ್ಣುಗಳು ಮನೆಯೊಳಗೆ ಬಂದಿದ್ದು, ವ್ಯಾಪಕ ಹಾನಿ ಸಂಭವಿಸಿದೆ.

ಸದ್ಯ ಮನೆಯಲ್ಲಿ ವಾಸಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ದಾಮೋದರ ವ್ಯಾಪಾರೆ ಅವರ ಕುಟುಂಬ ಸಮೀಪದಲ್ಲಿರುವ ಅವರ ಸಹೋದರನ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಸ್ಥಳಕ್ಕೆ ಆ.1ರಂದು ಸಂಜೆ ಶಾಸಕಿ ಭಾಗೀರಥಿ ಮುರುಳ್ಯ, ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್. ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮಾಜಿ ಜಿ.ಪಂ.ಸದಸ್ಯರುಗಳಾದ ಹರೀಶ್ ಕಂಜಿಪಿಲಿ, ಸತೀಶ್ ನಾಯ್ಕ, ಆಲೆಟ್ಟಿ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು, ಬಿ.ಎಲ್. ಶಿವರಾಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.