ತೊಡಿಕಾನ: ಪಂಜಿಕೋಡಿಯಲ್ಲಿ ಮನೆಯ ಹಿಂಬದಿ ಬರೆ ಜರಿತ

0

ಮೂರು ಮನೆಯವರನ್ನು ಸ್ಥಳಾಂತಕ್ಕೆ ಸೂಚಿಸಿದ ಗ್ರಾ.ಪಂ.

ತೊಡಿಕಾನ ಹಾಲು ಸೊಸೈಟಿ ಹಾಗೂ ದೇವಾಲಯದ ಸಭಾಂಗಣದಲ್ಲಿ ರಾತ್ರಿ ತಂಗುತ್ತಿರುವ ಮನೆಯವರು

ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಡಿಕಾನ ಗ್ರಾಮದ ಪಂಜಿಕೋಡಿಯಲ್ಲಿ ಮನೆಯೊಂದರ ಹಿಂಬದಿ ಬರೆ ಜರಿದು, ಹತ್ತಿರದ ಎರಡು ಮನೆಗಳು ಅಪಾಯದ ಪರಿಸ್ಥಿತಿಯಲ್ಲಿರುವ ಕಾರಣ ಗ್ರಾಮ ಪಂಚಾಯತಿ ವತಿಯಿಂದ ಒಂದು ವಾರದ ಮಟ್ಟಿಗೆ ಮೂರು ಮನೆಯವರನ್ನು ರಾತ್ರಿ ವೇಳೆ ಮನೆಯಲ್ಲಿ ನಿಲ್ಲದೆ, ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದು, ಮನೆಯವರು ತೊಡಿಕಾನ ಹಾಲು ಉತ್ಪಾದಕರ ಸಭಾಂಗಣ ಹಾಗೂ ದೇವಸ್ಥಾನದ ಸಭಾಂಗಣದಲ್ಲಿ ತಂಗುತ್ತಿರುವ ಘಟನೆ ವರದಿಯಾಗಿದೆ.

ತೊಡಿಕಾನದ ಅಶೋಕ ಎಂಬವರ ಮನೆಯ ಹಿಂಬದಿ ಜು.31ರಂದು ರಾತ್ರಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಬರೆಯಿಂದ ಮಣ್ಣು ಕುಸಿಯಿತೆನ್ನಲಾಗಿದೆ.
ವಿಷಯ ತಿಳಿದು ಅರಂತೋಡು ಗ್ರಾಮ ಪಂಚಾಯತಿ ವತಿಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್. ಗ್ರಾಮ ಆಡಳಿತಾಧಿಕಾರಿ ಶರತ್ , ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಗ್ರಾ.ಪಂ. ಸದಸ್ಯ ರವೀಂದ್ರ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯ ಹಿಂಬದಿ ಇನ್ನಷ್ಟು ಬರೆ ಕುಸಿಯುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ಅಶೋಕ, ಚಂದ್ರಶೇಖರ ಆಚಾರ್ಯ ಹಾಗೂ ಸುಬ್ರಾಯ ಅವರ ಕುಟುಂಬವನ್ನು ಮುಂದಿನ ಒಂದು ವಾರದ ಮಟ್ಟಿಗೆ ತೊಡಿಕಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ಹಾಗೂ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ಸಭಾಂಗಣದಲ್ಲಿ ರಾತ್ರಿ ವೇಳೆ ತಂಗುವಂತೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

ಸದ್ಯ ಈ ಮೂರು ಮನೆಯವರು ಹಗಲು ಹೊತ್ತಿನಲ್ಲಿ ತಮ್ಮ ಮನೆಗಳಿಗೆ ತೆರಳುತ್ತಿದ್ದು, ರಾತ್ರಿ ವೇಳೆ ತೊಡಿಕಾನ ಹಾಲು ಉತ್ಪಾದಕ ಸಹಕಾರಿ ಸಂಘದ ಸಭಾಂಗಣ ಹಾಗೂ ಶ್ರೀ ಮಲ್ಲಿಕಾರ್ಜುನ ದೇವರ ಸಭಾಂಗಣದಲ್ಲಿ ಆಶ್ರಯ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

👇🏻
ಶಾಸಕಿ ಭಾಗೀರಥಿ ಭೇಟಿ – ಪರಿಶೀಲನೆ
ಅರಂತೋಡು – ತೊಡಿಕಾನ ಭಾಗದಲ್ಲಿ ಮಳೆಹಾನಿ ಪ್ರದೇಶಗಳಿಗೆ ಆ.1ರಂದು ಭೇಟಿ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು ತೊಡಿಕಾನದ ಪಂಜಿಕೋಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅರಂತೋಡು – ತೊಡಿಕಾನ ಭಾಗದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.