ನಿರ್ಮಾಣ ಜಾಗದ ಕುರಿತು ಸ್ಥಳೀಯರಿಂದ ಆಕ್ಷೇಪ
ಜಾಲ್ಸೂರು ಗ್ರಾ.ಪಂ. ಅಧ್ಯಕ್ಷರ ಉಪಸ್ಥಿತಿಯಲ್ಲಿ ಮಾತುಕತೆ
ಪೈಚಾರು ಜಂಕ್ಷನ್‌ನಲ್ಲಿ ರಾಜ್ಯ ಹೆದ್ದಾರಿ ಇಲಾಖೆಯ ವತಿಯಿಂದ ಪ್ರಯಾಣಿಕರ ಬಸ್ಸು ತಂಗುದಾಣ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು ಈ ಸ್ಥಳವು ಅವಜ್ಞಾನಿಕವಾಗಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಘಟನಾ ಸ್ಥಳಕ್ಕೆ ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಆಗಮಿಸಿ ಮಾತುಕತೆ ನಡೆದು ವಿಷಯ ತಾತ್ಕಲಿಕವಾಗಿ ಶಮನಗೊಂಡ ಘಟನೆ ಆ.3ರಂದು ನಡೆದಿದೆ.
ಇತ್ತೀಚೆಗೆ ಪೈಚಾರಿನಲ್ಲಿ ಚತುಷ್ಪತ ರಸ್ತೆ ಕಾಮಗಾರಿ ನಡೆದಿದ್ದು, ಆ ಸಂದರ್ಭದಲ್ಲಿ ಅಲ್ಲಿದ್ದ ಎರಡು ಪ್ರಯಾಣಿಕರ ಬಸ್ಸು ತಂಗುದಾಣವನ್ನು ತೆರವುಗೊಳಿಸಲಾಗಿತ್ತು.
ಇದೀಗ ಅದರ ಬದಲಿಗೆ ಪೈಚಾರು ಸೇತುವೆಯ ಆರಂಭಗೊಳ್ಳುವ ಸ್ಥಳ ಪೆಟ್ರೋಲ್ ಬಂಕ್ ಸಮೀಪ ಮತ್ತು ಜಂಕ್ಷನ್‌ನಿಂದ ಸೋಣಂಗೇರಿ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಮತ್ತೊಂದು ತಂಗುದಾಣಕ್ಕೆ ಕಳೆದ ಎರಡು ದಿನಗಳಿಂದ ಕಾಮಗಾರಿ ಆರಂಭಗೊಂಡಿದೆ.ಆದರೆ ಈ ಎರಡೂ ಜಾಗವೂ ಅವೈಜ್ಞಾನಿಕವಾಗಿದ್ದು ಅಲ್ಲದೆ ಪೆಟ್ರೋಲ್ ಬಂಕ್ ಬಳಿ ನಿರ್ಮಾಣಗೊಳ್ಳಲಿರುವ ತಂಗುದಾಣ ಜಾಲ್ಸೂರು ಗ್ರಾಮ ವ್ಯಾಪ್ತಿಗೆ ಬರದೆ ನಗರ ಪಂಚಾಯತ್ ವ್ಯಾಪ್ತಿಗೆ ಬರುತ್ತಿದ್ದು ಜಂಕ್ಷನ್‌ನಿಂದ ಕೆಲವು ಮೀಟರ್ ದೂರದಲ್ಲಿ ಆಗುತ್ತಿರುವುದು ಸರಿಯಲ್ಲ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಕಡೆ ಸೋಣಂಗೇರಿ ರಸ್ತೆಯ ಬದಿಯಲ್ಲಿ ತಂಗುದಾಣ ನಿರ್ಮಾಣಗೊಳ್ಳುತ್ತಿರುವ ಜಾಗ ಇತ್ತೀಚೆಗೆ ಇಲ್ಲಿ ಬರೆ ಕುಸಿತ ಉಂಟಾಗಿದ್ದು ಆ ಸ್ಥಳದಲ್ಲಿ ಬರೆಯ ಮೇಲೆ ಮರಗಳು ಅಪಾಯದ ಸ್ಥಿತಿಯಲ್ಲಿ ನಿಂತಿದೆ. ಆದರಿಂದ ಮುಂದಿನ ದಿನಗಳಲ್ಲಿ ಈ ಪ್ರದೇಶವು ಮತ್ತೆ ಜರಿದು ಅನಾಹುತ ಉಂಟಾಗುವ ಸಂಭವವಿದೆ. ಆದ್ದರಿಂದ ಈ ಎರಡೂ ಜಾಗವನ್ನು ಬದಲಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ಆದರೆ ಈ ಎರಡೂ ಸ್ಥಳಗಳನ್ನು ಹೊರತು ಪಡಿಸಿ ಬೇರೆ ಕಡೆ ಜಾಗ ಇಲ್ಲ. ಇದ್ದರೂ ಕೂಡ ಅದು ಖಾಸಗಿ ವ್ಯಕ್ತಿಯವರ ಪಟ್ಟೆ ಲ್ಯಾಂಡ್ ಆಗಿದ್ದು ಆ ಜಾಗದಲ್ಲಿ ಕಟ್ಟಲು ಅವರ ಆಕ್ಷೇಪವು ಕೂಡ ಇದೆ. ಆದ್ದರಿಂದ ಪರ್ಯಾಯ ಜಾಗದ ವ್ಯವಸ್ಥೆಯನ್ನು ಮಾಡಿಕೊಟ್ಟರೆ ನಾವು ಅಲ್ಲಿ ತಂಗುದಾಣ ಮಾಡಿಕೊಡುತ್ತೇವೆ ಎಂಬುವುದು ತಂಗುದಾಣ ನಿರ್ಮಾಣ ಮಾಡುವ ಗುತ್ತಿಗೆದಾರರ ವಾದವಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ,ಹಾಗೂ ಪಂಚಾಯತ್ ಸಿಬ್ಬಂದಿ ಚಿದಾನಂದ ಆಗಮಿಸಿ ಸ್ಥಳವನ್ನು ಪರಿಶೀಲಿಸಿದರು.
ಅವರು ಕೂಡ ಬರೆ ಬದಿಯಲ್ಲಿ ತಂಗುದಾಣ ಮಾಡುತ್ತಿರುವುದರಿಂದ ಮುಂದೆ ಏನಾದರು ಅನಾಹುತ ಆಗಬಹುದು ಎಂದು ಮಾತಾಡಿಕ್ಕೊಂಡರೆನ್ನಲಾಗಿದೆ.
ಬಳಿಕ ಪರ್ಯಾಯ ಜಾಗದ ಬಗ್ಗೆ ಪಕ್ಕದ ಗುಜರಿ ಅಂಗಡಿ ಸ್ಥಳದ ಮಾಲಕರ ಬಳಿ ದೂರವಾಣಿ ಮೂಲಕ ಮಾತನಾಡಿ ಜಾಗ ನೀಡುವ ಕುರಿತು ವಿನಂತಿಸಿಕೊಂಡರು. ಆದರೆ ಈಗಾಗಲೇ ರಸ್ತೆ ಅಗಲೀಕರಣದ ವೇಳೆ ನಮ್ಮ ಜಾಗಕ್ಕೆ ಸಮಸ್ಯೆಯಾಗಿದ್ದು ಇನ್ನೂ ಕೂಡ ಉಳಿದಿರುವ ಜಾಗವನ್ನು ಕೊಡಲು ಕಷ್ಟವಾಗುತ್ತದೆ ಎಂದು ಹೇಳಿದಾಗ ಬೇರೆ ದಾರಿ ಇಲ್ಲದೆ ಇದೀಗ ಕಟ್ಟುತ್ತಿರುವ ಜಾಗದಲ್ಲಿಯೇ ಮೇಲ್ಭಾಗದ ಅಪಾಯಕಾರಿ ಮರ ಮತ್ತು ಮಣ್ಣನ್ನು ತೆರವುಗೊಳಿಸಿ ಮುಂಜಾಗ್ರತೆಯನ್ನು ವಹಿಸಿ ತಂಗುದಾಣ ನಿರ್ಮಿಸುವಂತೆ ಸೂಚನೆ ನೀಡಿದರು.
ಹೆದ್ದಾರಿ ಬಳಿಯ ತಂಗುದಾಣವು ಕೂಡ ಬೇರೆ ಕಡೆ ಮಾಡಲು ಅಲ್ಲಿಯೂ ಜಾಗದ ಸಮಸ್ಯೆ ಇದೆ. ಮತ್ತು ಹೆದ್ದಾರಿ ಇಲಾಖೆಯಿಂದ ನೀಡಿರುವ ನಕ್ಷೆಯಲ್ಲಿ ಅದೇ ಜಾಗ ಗುರುತಿಸಿ ನೀಡಿದ್ದು ಅಲ್ಲಿಯೇ ಮಾಡ ಬೇಕಾಗಿದೆ ಎಂದು ಗುತ್ತಿಗೆದಾರರು ತಿಳಿಸಿದರು.
ಬಳಿಕ ಅಲ್ಲಿ ಸೇರಿದವರ ಬಳಿ ಈ ವಿಷಯವನ್ನು ಗಮನಕ್ಕೆ ತಂದು ತಾತ್ಕಲಿಕವಾಗಿ ವಿಷಯವನ್ನು ಮಾತು ಕತೆ ಮೂಲಕ ಶಮನ ಮಾಡಿದರು.
ಈ ಸಂಧರ್ಭದಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್, ಮಾಜಿ ಸದಸ್ಯ ಪ್ರವೀಣ್ ಪಿಲಿಕ್ಕೋಡಿ, ಸ್ಥಳೀಯ ಉದ್ಯಮಿ ಶಾಫಿ ಬೋಳುಬೈಲು, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.