ಅಡಿಕೆಗೆ ಬಾಧಿಸುತ್ತಿರುವ ಕೊಳೆರೋಗಕ್ಕೆ ಪರಿಹಾರ ಘೋಷಿಸಿ: ಸಂತೋಷ್ ಕುತ್ತಮೊಟ್ಟೆ
ಮುಂಗಾರು ಪೂರ್ವ ಮತ್ತು ಮುಂಗಾರು ಸಮಯದಲ್ಲಿ ಸುಳ್ಯ ತಾಲೂಕಿನಲ್ಲಿ ಬಿದ್ದಂತಹ ಮಹಾ ಮಳೆಗೆ ನದಿಗಳು ತುಂಬಿ ಹರಿದ ಪರಿಣಾಮ ನೀರಿನಿಂದ ತಾಲೂಕಿನ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಮತ್ತು ಬೆಟ್ಟಗುಡ್ಡಗಳ ಜರಿತ ಉಂಟಾಗಿದ್ದು ಅಪಾರ ಪ್ರಮಾಣದಲ್ಲಿ ಮನೆಹಾನಿ, ಬೆಳೆಹಾನಿ ಮತ್ತು ಸಾರ್ವಜನಿಕ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿರುತ್ತದೆ. ಅಲ್ಲದೇ ಅತಿಯಾದ ಮಳೆಯಿಂದ ತಾಲೂಕಿನ ಆರ್ಥಿಕ ಮೂಲವಾಗಿರುವ ಅಡಿಕೆ ತೋಟಗಳು ಕೊಳೆರೋಗದಿಂದ ಭಾಧಿಸಿದ್ದು ಅಪಾರ ನಷ್ಟವುಂಟಾಗಿರುತ್ತದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಹಾಮಳೆಯ ಕಾರಣದಿಂದ ಹಲವು ಬಾರಿ ರೆಡ್ ಕಲರ್ ಘೋಷಣೆ ಮಾಡಲಾಗಿದೆ. ೨೦೨೨ ರಲ್ಲಿ ೫೨೮೭೨.೨೨ ಹಾಗೂ ೨೦೨೩ ರಲ್ಲಿ ೪೧೯೮ ಮಿ.ಮಿ. ಮಳೆಯಾಗಿದ್ದರೆ ೨೦೨೪ರ ಜೂನ್ ಮತ್ತು ಜುಲೈ ತಿಂಗಳಲ್ಲಿಯೇ ಒಟ್ಟು ೩೬೧೦ ಮಿಮಿ. ಮಳೆಯಾಗಿರುತ್ತದೆ. ಈ ಅಂದಾಜಿನ ಪ್ರಕಾರ ೨೦೨೪ರ ಒಟ್ಟು ಮಳೆಯು ಸುಮಾರು ೬೦೦೦ ಮಿ.ಮಿ. ದಾಟುವ ಅಪಾಯವಿರುತ್ತದೆ. ಸುಳ್ಯ ತಾಲೂಕು ಕೊಡಗಿನ ಗಡಿಭಾಗಕ್ಕೆ ಹೊಂದಿಕೊಂಡ ಮಲೆನಾಡು ಪ್ರದೇಶವಾಗಿದ್ದು ಅತೀ ಹೆಚ್ಚು ಮಳೆಯಿಂದ ಭಾದಿತ ಮತ್ತು ತೊಂದರೆಗೀಡಾಗಿರುವ ಪ್ರದೇಶವಾಗಿರುವುದರಿಂದ ಅತಿವೃಷ್ಟಿ/ಪ್ರವಾಹ ಪೀಡಿತ ತಾಲೂಕು ಎಂದೂ ಮತ್ತು ತಾಲೂಕಿನಲ್ಲಿ ಮಹಾ ಮಳೆಯ ಕಾರಣದಿಂದ ತೀವ್ರತರವಾಗಿ ವ್ಯಾಪಿಸಿರುವ ಅಡಿಕೆ ಕೊಳೆರೋಗಕ್ಕೆ ಪರಿಹಾರವನ್ನು ಘೋಷಿಸಬೇಕಾಗಿಯೂ ಸಮಸ್ತ ಸುಳ್ಯ ತಾಲೂಕಿನ ರೈತ/ಕೃಷಿಕರ ಪರವಾಗಿ ಆರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಳರವರಿಗೆ ಮನವಿಯನ್ನು ಸಲ್ಲಿಸಿದರು. ಅಲ್ಲದೇ ಇದೇ ಸಂದರ್ಭದಲ್ಲಿ ಶಾಸಕರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೂ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಆರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ಜಗದೀಶ ಸರಳಿಕುಂಜ, ಅಶೋಕ್ ಅಡ್ಯಾರು ಉಪಸ್ಥಿತರಿದ್ದರು.