ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಕೆಗಾಗಿ ಆ.12 ರಂದು ಶಿಕ್ಷಕರಿಂದ ಬೆಂಗಳೂರು ಚಲೋ : ಸುಳ್ಯದಿಂದಲೂ ಭಾಗಿ

0

ಬಡ್ತಿ, ವರ್ಗಾವಣೆಗೆ ಅಡ್ಡಿಯಾಗಿರುವ ವೃಂದ ಮತ್ತು ನೇಮಕಾತಿ ನಿಯಮ – ೨೦೧೭ಕ್ಕೆ ತಿದ್ದುಪಡಿ ತಂದು ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಆ.೧೨ರಂದು ರಜೆ ಹಾಕಿ, ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸುಳ್ಯದಿಂದಲೂ ಹಲವು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಕೆರೆಮೂಲೆ ತಿಳಿಸಿದ್ದಾರೆ.


೨೦೧೬ಕ್ಕಿಂತ ಮೊದಲು ನೇಮಕವಾದ ಶಿಕ್ಷಕರಿಗೆ ೨೦೧೭ರ ನಿಯಮ ಅನ್ವಯಿಸಬಾರದು. ೧ ರಿಂದ ೮ ನೇ ತರಗತಿಯ ಪ್ರಾಥಮಿಕ ಶಾಲೆಗಳಿಗೆ ನೇಮಕವಾದ ಶಿಕ್ಷಕರನ್ನು ೧ ರಿಂದ ೫ನೇ ತರಗತಿಗೆ ಸೀಮಿತಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕು. ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ) ಎಂದು ಪರಿಗಣಿಸಬೇಕು. ಸೇವಾ ಜೇಷ್ಠತೆ ಬಡ್ತಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಬಡ್ತಿಯಲ್ಲಿ ಮೊದಲ ಆದ್ಯತೆ ನೀಡಬೇಕು. ಮುಖ್ಯಶಿಕ್ಷಕರ ಹುದ್ದೆಗೆ ಸೇವಾ ಹಿರಿತನ ಪರಿಗಣಿಸಿ ಬಡ್ತಿ ನೀಡಬೇಕು. ಬಿ.ಇಡಿ ಪದವೀಧರರಿಗೆ ಪ್ರೌಢಶಾಲೆಗೆ ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯದ ಪ್ರಾಥಮಿಕ ಶಾಲೆಗಳ ಒಂದು ಲಕ್ಷಕ್ಕೂ ಹೆಚ್ಚಿನ ಶಿಕ್ಷಕರು ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ.


ಶಾಸಕರು, ತಹಶೀಲ್ದಾರರಿಗೆ ಮನವಿ : ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸುಳ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಗೆ, ತಹಶೀಲ್ದಾರರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.


“ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಸುಳ್ಯದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡರು ತಿಳಿಸಿದ್ದಾರೆ.