ಸುಳ್ಯದಲ್ಲಿ ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ : ಆಕರ್ಷಕ ಪಥ ಸಂಚಲನ

0

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಿತು.

ತಹಶೀಲ್ದಾರ್ ಮಂಜುನಾಥ್ ಜಿ.ಯವರು ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿದರು. ಸ್ವಾತಂತ್ರ್ಯ ಸಂದೇಶ ನೀಡಿದ ಅವರು, ಶಾಂತಿಯುತ ಮತ್ತು ಅಹಿಂಸಾತ್ಮಕ ಅಂತ್ಯವನ್ನು ಪ್ರತಿಪಾದಿಸಿದ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಹೋರಾಡಿದ ಅದೆಷ್ಟೋ ರಾಷ್ಟ್ರ ಪ್ರೇಮಿಗಳ ಬಲಿದಾನದ ಬಳುವಳಿ ಇಂದಿನ ನಮ್ಮ ಸಂಭ್ರಮದ ದಿನ. ಸ್ವಾತಂತ್ರ್ಯ ನಂತರ ಭಾರತ ತಂತ್ರಜ್ಞಾನ, ಆರೋಗ್ಯ, ರಕ್ಷಣೆ, ಶಿಕ್ಷಣ ಮತ್ತು ಮೂಲ ಸೌಕರ್ಯಗಳ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಅಂಗೀಕಾರ ಮನೋಭಾವನೆ ಹೊಂದುವುದರೊಂದಿಗೆ ಇನ್ನೂ ಹೆಚ್ಚಿಸಲು ಪಣತೊಡೋಣ ಎಂದು ಹೇಳಿದರು.

ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷ ಕಳೆದ 78 ನೇ ವರ್ಷದ ಆಚರಣೆಯಲ್ಲಿದ್ದರೂ ಬಡತನ ಇನ್ನೂ ಇದೆ. ಸೂರಿಲ್ಲದೇ ಇರುವವರು ಹಲವರಿದ್ದಾರೆ. ಬಡವರಿಗೆ ಸಹಕಾರ ನೀಡಿ, ಸೂರಿಲ್ಲದವನಿಗೆ ಸೂರು ನಿರ್ಮಿಸುವ, ಪರಿಸರ ಉಳಿಸಿ ಬೆಳೆಸುವ ಕೆಲಸ ಮಾಡುವ ಮೂಲಕ ಅರ್ಥಪೂರ್ಣ ಸ್ವಾತಂತ್ರ್ಯ ಆಚರಣೆ ಮಾಡುವಂತಾಗಲಿ ಎಂದು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಹಿರಿಯರ ತ್ಯಾಗದ ಫಲವಾಗಿ ಸ್ವಾತಂತ್ರ್ಯ ದೊರೆತಿದೆ. ವಿವಿಧ ಸಂಸ್ಕೃತಿ, ಪರಂಪರೆ ಇರುವ ದೇಶ ನಮ್ಮದು” ಎಂದು ಹೇಳಿದರು.

ಸುಳ್ಯ ಎ.ಒ.ಎಲ್.ಇ. ಅಧ್ಯಕ್ಷ ಡಾ.ಕೆ.ವಿ.ಚಿದಾನಂದ “ಸ್ವಾತಂತ್ರ್ಯ ನಂತರ ನಾವು ಶಿಕ್ಷಣ, ರಕ್ಷಣೆ, ಆರೋಗ್ಯ, ಹೈನುಗಾರಿಕೆ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಮುಂದುವರಿದ್ದೇವೆ” ಎಂದು ಹೇಳಿದರು.

ಸನ್ಮಾನ : ಸಮಾರಂಭದಲ್ಲಿ ನಿವೃತ್ತ ಯೋಧರಾದ ಕೆ.ಪಿ.ಜಗದೀಶ್, ಬಿ.ಕೆ. ಮಾಧವ, ರಾಮದಾಸ್ ಶೇಟ್, ಹಿರಿಯ ಪತ್ರಕರ್ತರರಾದ ಸುರೇಶ್ ಬೆಳಗಜೆ, ಗಂಗಾಧರ ಮಟ್ಟಿ, ಎನ್.ಎ.ಅಬ್ದುಲ್ಲ ನಾವೂರು ರನ್ನು ಸನ್ಮಾನಿಸಲಾಯಿತು. ಸರಕಾರಿ ಪ್ರೌಢಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ನಡೆಯಿತು.

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ನಗರ ಪಂಚಾಯತ್ ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಪೂಜಿತಾ ಕೆ.ಯು., ಕಿಶೋರಿ ಶೇಟ್, ನಾಮನಿರ್ದೇಶಿತ ಸದಸ್ಯರುಗಳಾದ ರಾಜು ಪಂಡಿತ್, ಸಿದ್ದೀಕ್ ಕೊಕ್ಕೊ, ಮುಖ್ಯಾಧಿಕಾರಿ ಸುಧಾಕರ್, ಎಸ್.ಐ. ಈರಯ್ಯ ದೂಂತೂರು, ಕೃಷಿ ಅಧಿಕಾರಿ ಗುರುಪ್ರಸಾದ್ ವೇದಿಕೆಯಲ್ಲಿ ಇದ್ದರು.

ಇ.ಒ. ರಾಜಣ್ಣ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ವಂದಿಸಿದರು. ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.

ವಯನಾಡು ದುರಂತದಲ್ಲಿ ಮಡಿದವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.