ಗ್ಯಾರಂಟಿ ಯೋಜನೆ : ವಂಚಿತರಾದವರ ಸರ್ವೆ ನಡೆಸಿ ಪರಿಹಾರ : ಭರತ್ ಮುಂಡೋಡಿ

0

ಪಂಚ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸಿ ವಂಚಿತರಾಗಿರುವ ಫಲಾನುಭವಿಗಳ ಸರ್ವೆ ನಡೆಸಿ ಸರಕಾರಕ್ಕೆ ವರದಿ ನೀಡಿ ಅರ್ಹರಿಗೆ ಯೋಜನೆ ತಲುಪುವಂತೆ ನಮ್ಮ ಸಮಿತಿ ಮಾಡಲಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್‌ ಮುಂಡೋಡಿ‌ ಹೇಳಿದ್ದಾರೆ.

ಆ.28 ರಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಸಂದರ್ಭ ಪತ್ರಿಕಾಗೋಷ್ಠಿ ನಡೆಸಿ ಅವರು ಯೋಜನೆಗಳ‌ ವಿವರ ನೀಡಿದರು.

ಶಕ್ತಿ ಯೋಜನೆಯಲ್ಲಿ ಸುಳ್ಯ ತಾಲೂಕಿನಲ್ಲಿ 58 ಲಕ್ಷದ 89 ಸಾವಿರದ 53 ಮಂದಿ ಪ್ರಯೋಜನ ಪಡೆದಿದ್ದಾರೆ. ಕೆಎಸ್ ಆರ್ ಟಿಸಿ‌ಗೆ 17 ಕೋಟಿ 19 ಲಕ್ಷದ 9589 ರೂ ವನ್ನು ಒಂದು ತಾಲೂಕಿಗಾಗಿ ಪಾವತಿ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ 4 ಕೋಟಿ 41 ಲಕ್ಷದ 71 ಸಾವಿರ ರೂ. ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿದೆ. ಆಗಸ್ಟ್ ತಿಂಗಳಲ್ಲಿ 48 ಕೋಟಿ 59 ಲಕ್ಷದ 58 ಸಾವಿರ ಫಲಾನುಭವಿಗಳಿಗೆ ಬಂದಿದೆ. ಒಟ್ಟು 27 ಸಾವಿರದ 738 ಮಂದಿ ಅರ್ಜಿ ಸಲ್ಲಿಸಿದ್ದು, 25 ಸಾವಿರದ 257 ಮಂದಿ ಅರ್ಹರಿದ್ದಾರೆ. ಶೇ. 91 ಸಾಧನೆಯಾಗಿದೆ. ಐ.ಟಿ. ಪಾವತಿದಾರರೆಂದು‌ 332, ಜಿಎಸ್ಟಿ ಪಾವತಿದಾರರು 223ರಿಗೆ ಯೋಜನೆ‌ ಸಿಗುತ್ತಿಲ್ಲ ಆ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದವರು ವಿವರ ನೀಡಿದರು.

ಗೃಹಜ್ಯೋತಿ ಯೋಜನೆಯಲ್ಲಿ ಸುಳ್ಯ ವಿಭಾಗದಲ್ಲಿ 27105 ಮಂದಿಯಲ್ಲಿ 26806 ಮಂದಿ ಫಲಾನುಭವಿಗಳಿದ್ದಾರೆ. ಶೇ.98.49 ಸಾಧನೆ ಆಗಿದೆ. ಸುಬ್ರಹ್ಮಣ್ಯ ಉಪವಿಭಾಗದಲ್ಲಿ 9601 ಮಂದಿಯಲ್ಲಿ 9296 ಮಂದಿ ಸೌಲಭ್ಯ ಸಿಗುತ್ತಿದೆ. ಶೇ.96.82 ಸಾಧನೆಯಾಗಿದೆ ಎಂದವರು‌ ಹೇಳಿದರು.

ಯುವನಿಧಿಯಲ್ಲಿ ತಾಲೂಕಿನಲ್ಲಿ 225 ಮಂದಿ ಯೋಜನೆ ಸೌಲಭ್ಯ ಸಿಗುತ್ತಿದೆ. ಅಪ್ಲೈ ಮಾಡಿದವರಲ್ಲಿ 53 ಮಂದಿ ಬಾಕಿ ಇದ್ದಾರೆ. ತಾಂತ್ರಿಕ ಸಮಸ್ಯೆ ಇದ್ದು ಅದರ ಪರಿಹಾರದ ನಿಟ್ಟಿನಲ್ಲಿ ಅಧಿಕಾರಿಗಳಲ್ಲಿ ಚರ್ಚಿಸಲಾಗಿದೆ ಎಂದರು.

ಅನ್ನಭಾಗ್ಯದಲ್ಲಿ 18119 ಮಂದಿಯಲ್ಲಿ 17363 ಮಂದಿಯ ಖಾತೆಗೆ ಹಣ ವರ್ಗಾವಣೆ ಆಗಿದೆ. ಒಟ್ಟು 11 ಕೋಟಿ 40 ಲಕ್ಷದ 8220 ರೂ ಫಲಾನುಭವಿಗಳಿಗೆ ದೊರೆತಿದೆ ಎಂದು ಹೇಳಿದರು.

ಯಾವ ಯಾವ ಗ್ರಾಮದಲ್ಲಿ‌ ಅರ್ಹತೆ ಇದ್ದು ಯೋಜನೆ ಸಿಗದವರು ಇದ್ದಾರೋ ಅಂತವರ ಸರ್ವೆಯನ್ನು ಸಮಿತಿಯವರು‌ ಹಾಗೂ ಅಧಿಕಾರಿಗಳು ಮಾಡುತ್ತಾರೆ. ಅವರಿಗೆ ಯೋಜನೆ ದೊರೆಯುವಂತೆ ನಾವು ಮಾಡುತ್ತೇವೆ. ಪಡಿತರ ತಿದ್ದುಪಡಿಯಾಗದೇ ಯೋಜನೆ ಸಿಗದಿರುವ ಕುರಿತು ನಮ್ಮ ಗಮನದಲ್ಲಿದೆ. ಆ ನಿಟ್ಟಿನಲ್ಲಿಯೂ ಚರ್ಚಿಸಲಾಗಿದೆ.‌ ಗ್ಯಾರಂಟಿ ಅನುಷ್ಠಾನ ಕುರಿತು ಏನೇ ಸಮಸ್ಯೆ ಗಳಿದ್ದರೂ ಜನರು ಸುಳ್ಯ ಕಚೇರಿಯನ್ನು ಸಂಪರ್ಕಿಸಬಹುದು. ಇಲ್ಲವಾದರೆ ಗ್ಯಾರಂಟಿ ಅನುಷ್ಠಾನ ಸಮಿತಿಯವರನ್ನೂ ಸಂಪರ್ಕಿಸಬಹುದೆಂದು ವಿವರ ನೀಡಿದರು.

ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಜೋಕಬ್ ಡಿಸೋಜಾ, ನ.ಪಂ. ಸದಸ್ಯ ಶರೀಫ್ ಕಂಠಿ ಸೇರಿದಂತೆ ಪಕ್ಷದ ನಾಯಕರು, ಗ್ಯಾರಂಟಿ ಅನುಷ್ಠಾನ ಸಮಿತಿಯವರು ಇದ್ದರು.