ಸುಳ್ಯದಿಂದ ಮಂಗಳೂರಿಗೆ ಅಸೌಖ್ಯದ ಮಗುವನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಕುಂಬ್ರದಲ್ಲಿ ಅಪಘಾತ

0


ಐವರಿಗೆ ಗಾಯ


ಆಂಬ್ಯುಲೆನ್ಸ್ ಮತ್ತು ಕಂಟೈನರ್ ಮಧ್ಯೆ ಅಪಘಾತ ಸಂಭವಿಸಿ ಆಂಬ್ಯುಲೆನ್ಸ್‌ನಲ್ಲಿದ್ದ ಐದು ಮಂದಿ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬಳಿ ಸೆ.೨ರಂದು ಸಂಜೆ ನಡೆದಿದೆ.

ಸುಳ್ಯದಿಂದ ಮಂಗಳೂರು ಆಸ್ಪತ್ರೆಗೆ ಮಗುವೊಂದನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಜಯಪ್ರಕಾಶ್ ಎಂಬವರು ಚಲಾಯಿಸುತ್ತಿದ್ದ ಆಂಬ್ಯುಲೆನ್ಸ್(ಕೆಎ ೨೧, ಬಿ ೧೯೭೧) ಹಾಗೂ ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು ಘಟನೆಯಿಂದ ಆಂಬ್ಯುಲೆನ್ಸ್ ನಲ್ಲಿದ್ದ ಮಗು ಸಹಿತ ಐದು ಮಂದಿಗೆ ಗಾಯವಾಗಿದ್ದು ಅವರನ್ನು ಇನ್ನೊಂದು ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕಂಟೈನರ್ ಚಾಲಕ ಜೆಸಿಬಿಯೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದ ಆಂಬ್ಯುಲೆನ್ಸ್ ನ ಮುಂಭಾಗ ನಜ್ಜುಗುಜ್ಜಾಗಿದ್ದು ಕಂಟೈನರ್‌ಗೂ ಹಾನಿ ಉಂಟಾಗಿದೆ. ಅಪಘಾತ ಸಂಭವಿಸಿದ ವೇಳೆ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದ್ದು ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು. ಸ್ಥಳಕ್ಕೆ ಆಗಮಿಸಿದ ಸಂಪ್ಯ ಪೊಲೀಸ್ ಠಾಣಾ ಎಸ್ಸೆ ಜಂಬೂರಾಜ್ ಮಹಾಜನ್ ಮತ್ತು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.