ಪ್ರೆಸ್ ದ ಮೀಟ್ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ
ಮಗುವಿನ ಸರ್ವಾಂಗೀಣ ವಿಕಾಸಕ್ಕೆ 5 ನೇ ತರಗತಿಯವರೆಗೆ ಮಾತೃಭಾಷೆ ಯಲ್ಲೇ ಶಿಕ್ಷಣ ನೀಡಬೇಕಾದುದು ಅಗತ್ಯ. ಇಂಗ್ಲಿಷನ್ನು ಒಂದು ಭಾಷೆಯಾಗಿ ಒಂದನೇ ತರಗತಿಯಿಂದ ಕಲಿಯಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ| ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಸೆ.3 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪ್ರೆಸ್ ದ ಮೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮಾತನಾಡಿದರು.
“ಕನ್ನಡ ಅನ್ನದ ಭಾಷೆ ಅಲ್ಲ – ಇಂಗ್ಲಿಷ್ ಅನ್ನದ ಭಾಷೆ ಎಂಬ ಮಾತು ಇದೆ. ಆದರೆ ಇಂಗ್ಲೀಷಿನಲ್ಲಿ ಕಲಿತಿರುವ ಶೇ.47 ಮಂದಿಗೆ ಕೆಲಸವೇ ಸಿಗುತ್ತಿಲ್ಲ ಎಂಬ ವರದಿಯೂ ನಮ್ಮಮುಂದಿದೆ. ನಮ್ಮ ಮಕ್ಕಳ ಬಾಲ್ಯದ ವಿಕಸನಕ್ಕೆ ಮಾತೃಭಾಷೆ ಶಿಕ್ಷಣ ಅಗತ್ಯ. ನಂತರ 6 ನೇ, 10ನೇ ತರಗತಿಯಿಂದ ಇತರ ಭಾಷೆಯಲ್ಲಿ ಶಿಕ್ಷಣ ಪಡೆಯಬಹುದು” ಎಂದು ಹೇಳಿದರು.
“ಕನ್ನಡವನ್ನು ಕರ್ನಾಟಕದಲ್ಲಿ ಬಲಿಷ್ಠ ಗೊಳಿಸುವುದು ಪ್ರಾಧಿಕಾರದ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಸರಕಾರಗಳು ನೀಡಿದ ಆದೇಶಗಳು ಅನುಷ್ಠಾನಕ್ಕೆ ಬಂದಿದೆಯೋ ಎಂದು ನೋಡುವುದು ಪ್ರಾಧಿಕಾರದ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ಶೇ.60 ರಷ್ಟು ಕನ್ನಡ ನಾಮಫಲಕ ಕಡ್ಡಾಯ ಎಂದು ಸರಕಾರದ ಆದೇಶ ಮಾಡಿದ್ದು. ಇದು ಸರಿಯಾಗಿ ಅನುಷ್ಠಾನಗೊಂಡಿದೆಯೋ ಎಂದು ಮೊದಲು ಮೂರು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡೆವು. ಬೀದರ್ ನಲ್ಲಿ ಅನುಷ್ಠಾನ ಕೆಲಸ ಆಗಿದ್ದರೆ, ರಾಯಚೂರಿನಲ್ಲಿ ಶೇ.60 ಆಗಿತ್ತು. ಗುಲ್ಬರ್ಗದಲ್ಲಿ ಕಡಿಮೆ ಆಗಿತ್ತು. ಬಳಿಕ ನಾವು ಅಧಿಕಾರಿಗಳನ್ನು ಕರೆದು ಚರ್ಚೆ ನಡೆಸಿದಾಗ 3 ತಿಂಗಳಲ್ಲಿ ಆದೇಶ ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ. ಸರಕಾರದ ಆದೇಶಗಳನ್ನು ಅಧಿಕಾರಿಗಳು ಅನುಷ್ಠಾನಕ್ಕೆ ತಾರದೇ ಇದ್ದಾಗ ಅವರಿಗೆ ತಿಳಿಸಿ ಅನುಷ್ಠಾನ ಮಾಡುವಂತೆ ಮಾಡೋದು ನಮ್ಮ ಕೆಲಸ ಎಂದವರು ವಿವರ ನೀಡಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿ,, ಪ್ರಾಸ್ತಾವಿಕ ಮಾತನಾಡಿದರು.
ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು, ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು, ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ ಹಾಗೂ ಪತ್ರಕರ್ತರು ಕಾರ್ಯಕ್ರಮದಲ್ಲಿ ಇದ್ದರು.