ನಿವೃತ್ತ ಶಿಕ್ಷಕರಾದ ಜಯಮ್ಮ ಚೆಟ್ಟಿಮಾಡ ಮತ್ತು ಶೀಲಾವತಿ ಕೊಳಂಬೆಯವರಿಗೆ ಕ.ಸಾ.ಪ. ಗೌರವಾರ್ಪಣೆ

0

ಶಿಕ್ಷಕರ ದಿನಾಚರಣೆಯ ದಿನವಾದ ಸೆ.೫ರಂದು ಸಾಹಿತಿಗಳಾಗಿರುವ ನಿವೃತ್ತ ಶಿಕ್ಷಕರಿಗೆ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಗುತ್ತಿದ್ದು ಇಂದು ಬೆಳಿಗ್ಗೆ ಕ.ಸಾ.ಪ. ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಿವೃತ್ತ ಪ್ರಾಧ್ಯಾಪಕಿ ಹಾಗೂ ಸಾಹಿತಿ ಶ್ರೀಮತಿ ಜಯಮ್ಮ ಚೆಟ್ಟಿಮಾಡ ಹಾಗೂ ನಿವೃತ್ತ ಪ್ರಾಧ್ಯಾಪಕಿ ಹಾಗೂ ಸಾಹಿತಿ ಶ್ರೀಮತಿ ಶೀಲಾವತಿ ಕೊಳಂಬೆ ಯವರ ಮನೆಗೆ ತೆರಳಿ ಸನ್ಮಾನ ನೆರವೇರಿಸಿದರು.


ಕಳೆದ ವರ್ಷದಿಂದ ಶಿಕ್ಷಕರ ದಿನಾಚರಣೆಯಂದು ಶಿಕ್ಷಕ -ಸಾಹಿತಿಗಳ ನಿವಾಸಕ್ಕೆ ತೆರಳಿ ಅವರನ್ನು ಗೌರವಿಸುವ ಸಂಪ್ರದಾಯವನ್ನು ಆರಂಭಿಸಲಾಗಿತ್ತು. ಕಳೆದ ವರ್ಷ ಹಿರಿಯ ಕವಿ-ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ ಹಾಗೂ ಲಕ್ಷ್ಮೀಶ ಚೊಕ್ಕಾಡಿಯವರ ನಿವಾಸಕ್ಕೆ ತೆರಳಿ ಅವರನ್ನು ಗೌರವಿಸಲಾಗಿತ್ತು. ಈ ವರ್ಷ ಜಯಮ್ಮ ಚೆಟ್ಟಿಮಾಡ ಹಾಗೂ ಶೀಲಾವತಿ ಕೊಳಂಬೆಯವರನ್ನು ಗೌರವಿಸಲಾಯಿತು.


ಜಯಮ್ಮ ಚೆಟ್ಟಿಮಾಡ ರವರ ಮನೆಯಲ್ಲಿ ಅವರ ಬಗ್ಗೆ ಪ್ರೊ.ಸಂಜೀವ ಕುದ್ಪಾಜೆ ಯವರು ಹಾಗೂ ಶೀಲಾವತಿ ಕೊಳಂಬೆಯವರ ಮನೆಯಲ್ಲಿ ಅವರ ಬಗ್ಗೆ ಪಂಜ ಹೋಬಳಿ ಕ.ಸಾ.ಪ. ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಮಾತನಾಡಿದರು. ಎರಡೂ ಕಡೆ ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿ ವಂದಿಸಿದರು. ತೇಜಸ್ವಿ ಕಡೆಪಾಲ, ಶ್ರೀಮತಿ ಚಂದ್ರಮತಿ ಕೆ., ಶ್ರೀಮತಿ ಲತಾ ಸುಪ್ರೀತ್ ಮೋಂಟಡ್ಕ, ಕೇಶವ ಸಿ.ಎ., ಸಂಕೀರ್ಣ ಚೊಕ್ಕಾಡಿ, ಶ್ರೀಮತಿ ರೂಪವಾಣಿ ಮೊದಲಾದವರು ಇದ್ದರು. ಎರಡೂ ಕಡೆ ಸನ್ಮಾನಿತರ ಮನೆಯವರು ಉಪಸ್ಥಿತರಿದ್ದರು.