ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಅನಧಿಕೃತ ಅಂಗಡಿಗಳ ತೆರವು

0

ಸೌತೆಕಾಯಿ ಅಂಗಡಿಗಳು ಮಾಯ

ಸಂಕಷ್ಟಕ್ಕೀಡಾದ ಹಲವು ಕುಟುಂಬಗಳು

ಸುಬ್ರಹ್ಮಣ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಅನಧಿಕೃತ ಅಂಗಡಿ ತೆರವು ಕಾರ್ಯಾಚರಣೆ ಸೆ.೫ ರಂದು ನಡೆದಿದ್ದು ಹಲವು ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿದ್ದ ಸೌತೆಕಾಯಿ ಅಂಗಡಿಗಳು ಮಾಯವಾಗಿವೆ.

ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ಪೇಟೆಯಲ್ಲಿ ಕಾರ್ಯಾಚರಿಸುತಿದ್ದ ಅನಧಿಕೃತ ಅಂಗಡಿಗಳನ್ನು ತೆರವು ಮಾಡಬೇಕೆಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಎಲ್ಲಾ ಅನಧಿಕೃತ ಅಂಗಡಿ ಮಾಲಿಕರಿಗೆ ಅಂಗಡಿ ತೆರವು ಮಾಡುವಂತೆ ಮೌಖಿಕ ಆದೇಶ ಮಾಡಿದ್ದರು. ಅದರಂತೆ ಬಹುತೇಕ ಅಂಗಡಿಗಳು ಕೆಲ ದಿನಗಳ ಹಿಂದೆ ತೆರವುಗೊಂಡಿದ್ದವು. ಆದರೆ ಕೆಲವು ಅಂಗಡಿಗಳು ಹಾಗೇ ಉಳಿದು ಕೊಂಡಿದ್ದವು. ಅದರ ತೆರವು ಕಾರ್ಯಾಚರಣೆ ಸೆ.೫ ರಂದು ನಡೆಯಿತು. ಈ ಸಂದರ್ಭ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್, ದೇವಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಳ್ಳು ಸೌತೆ ಬೀದಿಬದಿ ಮಾರಾಟಗಾರರಿಗೆ ಕಂಟಕ
ಸಂಕಷ್ಟಕ್ಕೆ ಬಿದ್ದ ಕೆಲ ಕುಟುಂಬ

ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಆಕರ್ಷಣೆಗಳಲ್ಲಿ ಒಂದಾಗಿದ್ದ ಮುಳ್ಳು ಸೌತೆಕಾಯಿ ಅಂಗಡಿಗಳು, ಪಾನ್ ಬೀಡ, ಮಡಿಕೆ ಸೋಡಗಳಂತಹ ಸಣ್ಣ ಸಣ್ಣ ಅಂಗಡಿಗಳು ಇದೀಗ ಇತಿಹಾಸದ ಪುಟ ಸೇರತೊಡಗಿದೆ. ಪರಿಣಾಮ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಹತ್ತಾರು ಕುಟುಂಬಗಳು ಸಂಕಷ್ಟಕ್ಕೆ ತುತ್ತಾಗಿವೆ.

ಇಲ್ಲಿ ಬೀದಿ ಬದಿ ಸಣ್ಣ ಸಣ್ಣ ಅಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದ ಕೆಲವೊಂದು ಅಂಗಡಿಗಳು, ಮುಳ್ಳು ಸೌತೆ ಕಾಯಿ, ಮಡಿಕೆ ಸೋಡ, ಪಾನ್ ಬೀಡ ಅಂಗಡಿಗಳನ್ನು ನಂಬಿಯೇ ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ಆದರೆ ಇದೀಗ ಸೌತೆಕಾಯಿ ಅಂಗಡಿಗಳ ತೆರವಿನ ಬಳಿಕ ಸೌತೆ ಅಂಗಡಿ ನಂಬಿಯೇ ಇದ್ದ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಬಿದ್ದಂತಾಗಿದೆ.

ಮುಳ್ಳು ಸೌತೆ ಆಕರ್ಷಣೆ ಹೇಗೆ? :

ಮುಳ್ಳು ಸೌತೆ ಕಾಯಿ ಹಸಿಯಾಗಿ ತಿನ್ನಲು ತುಂಬಾ ರುಚಿಯಾಗಿದ್ದು, ಸುಬ್ರಹ್ಮಣ್ಯದಲ್ಲಿ ಬೀದಿ ಬದಿ ಅಂಗಡಿಗಳ ವ್ಯಾಪಾರಸ್ಥರು ಇದನ್ನೇ ವ್ಯಾಪಾರವಾಗಿಸಿಕೊಂಡಿದ್ದರು. ಮುಳ್ಳು ಸೌತೆಯ ಸಿಪ್ಪೆ ತೆಗದು ಅದನ್ನು ಉದ್ದಕ್ಕೆ ೪ ತುಂಡುಗಳನ್ನಾಗಿಸಿ ಅದರ ಮಧ್ಯಕ್ಕೆ ಮಸಾಲೆ ಹಾಕಿಕೊಡುತ್ತಿದ್ದರು. ಮತ್ತು ಇತ್ತೀಚೆಗೆ ಮಡಿಕೆ ಸೋಡ ಸುಬ್ರಹ್ಮಣ್ಯದಿಂದಲೇ ಫೇಮಸ್ ಆಗಿತ್ತು. ಇದೀಗ ಈ ಅಂಗಡಿಗಳೆಲ್ಲವನ್ನು ದೇವಾಲಯದ ವತಿಯಿಂದ ತೆರವು ಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಅನಧಿಕೃತವಾಗಿದ್ದ ಅಂಗಡಿ ತೆಗೆದಿರುವ ಅಧಿಕಾರಿಗಳ ದಿಟ್ಟ ಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತವಾಗಿದ್ದರೂ, ಸುಬ್ರಹ್ಮಣ್ಯದಲ್ಲಿ ಅಧಿಕೃತವಾಗಿಯೇ ಇಂತಹ ಅಂಗಡಿಳಿದ್ದರೆ ಉತ್ತಮ ಎಂಬ ಮಾತು ಕೇಳಿ ಬಂದಿದೆ.