ವಿಘ್ನ ನಿವಾರಕನ ವೈಭವದ ಶೋಭಾಯಾತ್ರೆ
ಜಾಲ್ಸೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶ್ರೀ ಗುರುಸಾರ್ವಭೌಮ ಕಲಾವೇದಿಕೆಯಲ್ಲಿ ಸೆ.7ರಂದು ನಡೆಯಿತು.
ಬೆಳಿಗ್ಗೆ ಪುರೋಹಿತ ನಯನಕೃಷ್ಣ ಭಟ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, 12 ತೆಂಗಿನಕಾಯಿ ಗಣಪತಿ ಹವನ, ಗಣೇಶ ಪ್ರತಿಷ್ಠೆ ನಡೆಯಿತು.
ಪ್ರವೀಣ್ ಕುಮಾರ್ ಅರಿಯಡ್ಕ ಅವರು ಧ್ವಜಾರೋಹಣ ನೆರವೇರಿಸಿದರು.
ಬೆಳಿಗ್ಗೆ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ನಾಗದೇವರಿಗೆ ನಾಗತಂಬಿಲ ನಡೆಯಿತು.
ಗಣೇಶೋತ್ಸವದ ಪ್ರಯುಕ್ತ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳಾದ ಹೂ ಕಟ್ಟುವ ಸ್ಪರ್ಧೆ, ಹಣತೆ ಉರಿಸುವ ಸ್ಪರ್ಧೆ ನೆರವೇರಿತು.
ಬಳಿಕ ಸ್ಥಳೀಯ ಭಜಕ ವೃಂದದವರಿಂದ ಭಜನಾ ಸಂಕೀರ್ತನೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.
ಅಪರಾಹ್ನ ಶ್ರೀ ವಿಘ್ನನಿವಾರಕ ಗಣಪತಿಯ ವಿಜೃಂಭಣೆಯ ಶೋಭಾಯಾತ್ರೆಯು ಅಲಂಕೃತ ಮಂಟಪದಲ್ಲಿ ಜಾಲ್ಸೂರಿನಿಂದ ಹೊರಟಿದ್ದು, ಅಡ್ಕಾರು, ವಿನೋಬನಗರ, ಕೋನಡ್ಕಪದವು ದಾರಿಯಾಗಿ ಸಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಪಯಸ್ವಿನಿ ನದಿ ಕಿನಾರೆಯಲ್ಲಿ ಜಲಸ್ಥಂಭನಗೊಳ್ಳಲಿದೆ.
ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗದೀಶ್ ಬೇರ್ಪಡ್ಕ, ಅಧ್ಯಕ್ಷ ನಿಶಾಂತ್ ಮೋಂಟಡ್ಕ, ಕಾರ್ಯದರ್ಶಿ ಧರ್ಮಪಾಲ ಕೆಮನಬಳ್ಳಿ, ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಪ್ರಧಾನ ಕಾರ್ಯದರ್ಶಿ ಆತ್ಮಾನಂದ ಗಬ್ಬಲಡ್ಕ, ಮಾದವ ಗೌಡ ಕಾಳಮನೆ ಸೇರಿದಂತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.