ಮುಕ್ಕೂರು : ಹದಿನೈದನೇ ವರ್ಷದ ಗಣೇಶೋತ್ಸವ -ಮೂರೈದು- ಕಾರ್ಯಕ್ರಮ

0

“ಜನ್ಮಕೊಟ್ಟ ತಂದೆ ತಾಯಿಯ ಸೇವೆ ಮಾಡದೇ, ನಾವು ದೇವರಿಗೆ ಎಷ್ಟೇ ಪೂಜೆ, ಪುನಸ್ಕಾರ ಮಾಡಿದರೂ ಅದರಿಂದ ಯಾವುದೇ ಫಲ ದೊರೆಯಲು ಸಾಧ್ಯವಿಲ್ಲ” ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸಂಭ್ರಮದ ಪುಳಕ ಮೂರೈದು-ಹದಿನೈದರ ಹುತ್ತರಿಯ ಪ್ರಯುಕ್ತ ಮುಕ್ಕೂರು ವಠಾರದಲ್ಲಿ ಸೆ.8 ರಂದು ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಮನೆ ಸಂಸ್ಕಾರದ ಪಾಠ ಹೇಳುವ ಶಾಲೆ ಆಗಬೇಕು. ಹೆತ್ತವರನ್ನು ಪ್ರೀತಿಸದಿದ್ದರೆ ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಪ್ರಯೋಜನ ಇಲ್ಲ ಅನ್ನುವ ಸತ್ಯ ಮಕ್ಕಳಿಗೆ ಅರಿವಾಗಬೇಕು. ಹೆತ್ತವರಿಗೆ ಮನೆಯೇ ದೇವಾಲಯ ಹೊರತು ಆಶ್ರಮಗಳು ಅಲ್ಲ ಅನ್ನುವುದು ನಮಗೆ ಮನದಟ್ಟಾಗಬೇಕು ಎಂದರು.

ಎಸ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ ಅವರು ಸಮ್ಮಾನ ನೆರವೇರಿಸಿ ಮಾತನಾಡಿ, ಮುಕ್ಕೂರಿನಲ್ಲಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಗಣೇಶೋತ್ಸವ ಆಚರಿಸಲಾಗಿದೆ. ಸಂಸ್ಕೃತಿಯ ಸಾರವನ್ನು ಅರಿತುಕೊಂಡು ದೇವರನ್ನು ಭಕ್ತಿ ಭಾವದಿಂದ ಆರಾಧಿಸುವ ಕಾರ್ಯ ಇಲ್ಲಿ ಹಬ್ಬದ ರೂಪ ಪಡೆದಿದೆ. ಇದೊಂದು ಮಾದರಿ ಆಚರಣೆ. ಮೂರೈದು ಆಚರಣೆಯು ಅಚ್ಚುಕಟ್ಟುತನ, ವ್ಯವಸ್ಥಿತ ರೀತಿಯಲ್ಲಿ ಗಮನ ಸೆಳೆದಿದೆ ಎಂದರು.

ಎಣ್ಮೂರು ಸ.ಪ್ರೌ.ಶಾಲಾ ಆಂಗ್ಲಭಾಷಾ ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಅಭಿನಂದನಾ ಮಾತುಗಳನ್ನಾಡಿ, ಸಾಧಕರನ್ನು ಸಮ್ಮಾನಿಸುವುದರ ಹಿಂದೆ ಸಾಧನೆ ಮಾಡುವವರಿಗೆ ಸ್ಪೂರ್ತಿ ತುಂಬುವ ಆಶಯ ಇದೆ. ತನ್ನ ಮೌಲ್ಯಯುತ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡ ಕುಂಬ್ರ ದಯಾಕರ ಆಳ್ವ, ಹೊನ್ನಪ್ಪ ಗೌಡ ಚಾಮುಂಡಿಮೂಲೆ ಅವರಿಗೆ ನೀಡಿದ ಸಮ್ಮಾನ ಅತ್ಯಂತ ಅರ್ಹವಾದದು ಎಂದರು.

ಪುತ್ತೂರು ಐಎಂಎ ಘಟಕದ ಅಧ್ಯಕ್ಷ, ವೈದ್ಯ ಡಾ|ನರಸಿಂಹ ಶರ್ಮಾ ಕಾನಾವು ಮಾತನಾಡಿ, ಹಬ್ಬಗಳ ಆಚರಣೆಯ ಹಿಂದೆ ಇರುವ ಸಾರವನ್ನು ಅರಿತುಕೊಂಡು ಮುನ್ನಡೆದಾಗ ಸುಂದರ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿದೆ. ಮುಕ್ಕೂರಿನಲ್ಲಿ ಎರಡು ದಿನಗಳ ಕಾಲ ನಡೆದ ಗಣೇಶೋತ್ಸವ-ಮೂರೈದು ಕಾರ್ಯಕ್ರಮ ಸಮಾಜಮುಖಿ ಕಾಳಜಿಯೊಂದಿಗೆ ಬಹಳ ಅರ್ಥಪೂರ್ಣ ರೀತಿಯಲ್ಲಿ ಸಂಪನ್ನಗೊಂಡಿದ್ದು ಸಂಘಟಕರು ಅಭಿನಂದನಾರ್ಹರು ಎಂದರು.

ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಘಟನೆ ಆಯೋಜಿಸುವ ಪ್ರತಿ ಕಾರ್ಯಕ್ರಮದ ಹಿಂದೆ ಊರವರ ಸಹಕಾರ ಇದೆ. ಹಾಗಾಗಿ ಯಶಸ್ಸು ಕಾಣುತ್ತಿದೆ. ಹದಿನೈದನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಅಭೂತಪೂರ್ವ ರೀತಿಯಲ್ಲಿ ಯಶಸ್ಸು ಕಾಣಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಕುಂಬ್ರ ದಯಾಕರ ಆಳ್ವ
ಹೊನ್ನಪ್ಪ ಗೌಡರಿಗೆ ಸಮ್ಮಾನ
ಸಹಕಾರ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಕುಂಬ್ರ ದಯಾಕರ ಆಳ್ವ, ಪರಿಸರ ಮಿತ್ರರಾಗಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಅವರನ್ನು ಸಮ್ಮಾನಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಸಮ್ಮಾನಿತರು ಸಂಘಟಕರಿಗೆ ಕೃತಜತೆ ಸಲ್ಲಿಸಿ ಇದೊಂದು ಅವಿಸ್ಮರಣೀಯ ಕ್ಷಣ ಎಂದು ನೆನೆದರು. ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಕುಂಡಡ್ಕ ಉಪಸ್ಥಿತರಿದ್ದರು. ದೇವಿಕಾ ಕುರಿಯಾಜೆ ಕಾರ್ಯಕ್ರಮ ನಿರೂಪಿಸಿದರು.

ಅಚ್ಚುಕಟ್ಟಾದ ವ್ಯವಸ್ಥೆಗೆ ಶ್ಲಾಘನೆ
ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಎರಡು ದಿನದ ಕಾರ್ಯಕ್ರಮದಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆಗೆ ಜನರು, ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ನೂರಾರು ಮಂದಿ ಉಪಹಾರ, ಅನ್ನಪ್ರಸಾದ ಸ್ವೀಕರಿಸಿದರು. ಬೆಳಗ್ಗೆ ಪ್ರಗತಿಪರ ಕೃಷಿಕ ಸಂಜೀವ ಗೌಡ ಬೈಲಂಗಡಿ ಅವರು ಉಪಹಾರದ ವ್ಯವಸ್ಥೆ ಒದಗಿಸಿದ್ದರು. ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಹೂವಿನ ಗಿಡ ನೀಡಲಾಯಿತು.