ಸ್ಥಾಯಿ ಸಮಿತಿಗೆ 11 ಮಂದಿ ಸದಸ್ಯರ ಆಯ್ಕೆ
ನಗರದ ಕಸ, ಚರಂಡಿ,ರಸ್ತೆ, ಅಪಾಯಕಾರಿ ಮರಗಳ ತೆರವು ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚೆ
ಸುಳ್ಯ ನಗರ ಪಂಚಾಯತಿಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಬಳಿಕ ಪ್ರಥಮ ಸಾಮಾನ್ಯ ಸಭೆ ಇಂದು ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ ಸಭೆಯ ಆರಂಭದಲ್ಲಿ ಮಾತನಾಡಿ ನನ್ನ ಅವಧಿಯ ಪ್ರಥಮ ಸಭೆಯನ್ನು ಇಂದು ನಾವು ಮಾಡುತ್ತಿದ್ದು, ಈ ದಿನದ ಮತ್ತು ಮುಂದಿನ ದಿನಗಳಲ್ಲಿಯೂ ತಮ್ಮೆಲ್ಲರ ಸಹಕಾರ ಬೇಕೆಂದು ಕೇಳಿಕೊಂಡರು.
ನಗರ ಪಂಚಾಯತಿ ಮುಖ್ಯ ಅಧಿಕಾರಿ ಸುಧಾಕರ್ ಸ್ವಾಗತಿಸಿ, ಸಭೆಯ ಅಜೆಂಡವನ್ನು ಪ್ರಸ್ತಾಪಿಸಿದರು.
ಪ್ರಥಮವಾಗಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯ ಕುರಿತು ಚರ್ಚೆಗಳು ನಡೆದು ಈ ಸಂಧರ್ಭ ಅಧ್ಯಕ್ಷರು ತಮ್ಮ ಬಳಿ ತಂದಿದ್ದ ಸದಸ್ಯರ ಪಟ್ಟಿಯನ್ನು ವಾಚಿಸಿದರು. ಅದರಲ್ಲಿ ನಾರಾಯಣ ಶಾಂತಿನಗರ, ಸುಧಾಕರ್, ಕಿಶೋರಿ ಶೇಟ್, ಶುಶೀಲ ಜಿನ್ನಪ್ಪ, ಶಿಲ್ಪಾ ಸುದೇವ್, ಪೂಜಿತಾ, ಪ್ರವೀತಾ ಪ್ರಶಾಂತ್, ಬಾಲಕೃಷ್ಣ ರೈ ಇವರ ಹೆಸರುಗಳನ್ನು ಪ್ರಸ್ತಾಪಿಸಲಾಗಿತ್ತು.
ಬಳಿಕ ಬಾಲಕೃಷ್ಣ ರೈ ರವರು ತನ್ನ ಹೆಸರು ಬೇಡ ನನ್ನ ಬದಲು ವಿನಯ್ ಕುಮಾರ್ ಕಂದಡ್ಕ ರವರನ್ನು ಸೇರಿಸಿ ಎಂದು ಹೆಸರು ಸೂಚಿಸಿದರು.ನಂತರ ವಿಪಕ್ಷ ಸ್ಥಾನದಿಂದ ಎಂ ವೆಂಕಪ್ಪ ಗೌಡರವರು ಪಟ್ಟಿಯನ್ನು ನೀಡಿ ಕೆ ಎಸ್ ಉಮ್ಮರ್, ಶರೀಫ್ ಕಂಠಿ, ಧೀರ ಕ್ರಾಸ್ತಾ ರವರನ್ನು ಸೂಚನೆ ಮಾಡಿದರು.ಈ ರೀತಿ ಒಟ್ಟು 11 ಮಂದಿ ಸದಸ್ಯರುಗಳ ಆಯ್ಕೆ ನಡೆಯಿತು.
ಬಳಿಕ ಕಸದ ವಾಹನ ದುರಸ್ಥಿ ಗೊಳಿಸುವ ಕುರಿತು ಟೆಂಡರ್ ನೀಡಿರುವ ಕುರಿತು ಚರ್ಚೆ ನಡೆಯಿತು.
ಈ ಸಂಧರ್ಭ ಮಾತನಾಡಿದ ವಿನಯ್ ಕುಮಾರ್ ಕಂದಡ್ಕ ಕಸದ ವಾಹನ ನಿರಂತರ ಬಿಡುವು ಇಲ್ಲದೆ ಕೆಲಸ ಮಾಡುವ ವಾಹನ ವಾಗಿದೆ. ಆದ್ದರಿಂದ ಇದರ ದುರಸ್ಥಿ ಕಾರ್ಯ ಸಮಯಕ್ಕೆ ಸರಿಯಾಗಿ ಆಗುತ್ತಿರಬೇಕು. ಈ ಕೆಲಸಕ್ಕೆ ಅರ್ಜಿ ಕೊಟ್ಟು ಕಾಯುವ ಸ್ಥಿತಿ ನಿರ್ಮಾಣ ಆಗಬಾರದು.
ಹಸಿ ಕಸದಿಂದ ವಾಹನದ ಬಾಡಿಯ ತಳಬದಿ ಬೇಗ ತುಕ್ಕು ಹಿಡಿಯುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ದುರಸ್ಥಿ ಕಾರ್ಯ ಸರಿಯಾಗಿ ಮತ್ತು ಉತ್ತಮ ಸ್ಥಿತಿಯಲ್ಲಿ ಮಾಡಿ ಕೊಡುವಲ್ಲಿಗೆ ವಾಹನ ರಿಪೇರಿಗೆ ನೀಡುವಂತೆ ಸಲಹೆ ನೀಡಿದಾಗ ಸರ್ವ ಸದಸ್ಯರ ಅಭಿಪ್ರಾಯ ಪೂರಕವಾಗಿ ವ್ಯಕ್ತವಾಯಿತು.
ವಾಹನವನ್ನು ಸ್ವಚ್ಛ ಪಡಿಸಲು ಟೌನ್ ಹಾಲ್ ಕಟ್ಟಡದ ಬಳಿ ವ್ಯವಸ್ಥೆ ಮಾಡುವ ಬಗ್ಗೆ ಶರೀಫ್ ಕಂಠಿ ಸಲಹೆ ನೀಡಿದರು.
ಮನೆ ದುರಸ್ಥಿ ಕಾರ್ಯಕ್ಕೆ ಫಲಾನುಭವಿಗಳಿಗೆ ನೀಡಲು ಮಂಜೂರಾದ ಸುಮಾರು 9 ಲಕ್ಷ ರೂ ಗಳ ಮಾಹಿತಿ ನೀಡಿದ ಮುಖ್ಯಅಧಿಕಾರಿ 2024-25 ನೇ ಸಾಲಿನ ಅನುಧಾನ ಪರಿಶಿಷ್ಟ ಜಾತಿ 4.69 ಲಕ್ಷ, ಪರಿಶಿಷ್ಟ ಪಂಗಡಕ್ಕೆ 2.58 ಲಕ್ಷ,ಹಿಂದುಳಿದ ವರ್ಗಕ್ಕೆ 2.31 ಲಕ್ಷ, ವಿಕಲ ಚೇತನರಿಗೆ 60 ಸಾವಿರ ರೂಗಳು ಇದೆ ಎಂದು ಮಾಹಿತಿ ನೀಡಿದರು.
ಇದರ ಬಗ್ಗೆ ಚರ್ಚೆಗಳು ನಡೆದು ವೆಂಕಪ್ಪ ಗೌಡ ಮಾತನಾಡಿ ಯಾವುದೇ ಅನುದಾನ ಹಂಚುವಾಗ ಸ್ಥಳೀಯ ನ ಪಂ ಸದಸ್ಯರ ಗಮನಕ್ಕೆ ತರದೇ ಯಾವುದನ್ನೂ ಮಾಡಬೇಡಿ. ಇಲ್ಲಿ ಮೊದಲಿಂದಲೇ ಇದೇ ರೀತಿ ಆಗುತ್ತಿದೆ. ನಿಮಗೆ ಬೇಕಾದವರಿಗೆ ನೀಡುವುದು,ಫಲಾನುಭವಗಳ ಬಗ್ಗೆ ತಿಳಿದು ಕೊಳ್ಳದೆ ಈ ಮೊದಲು ಕೊಟ್ಟವರಿಗೆ ಮತ್ತೆ ಕೊಡುವುದು ಈ ರೀತಿ ಆಗುತ್ತಿದೆ. ಆದ್ದರಿಂದ ನಮ್ಮ ಗಮನಕ್ಕೆ ತಾರದೇ ಅಧಿಕಾರಿ ಗಳು ಅಥವಾ ಸಿಬ್ಬಂದಿಗಳು ಕೊಡಬಾರದು ಎಂದು ಸೂಚನೆ ನೀಡಿದರು.ಇದಕ್ಕೆ ವಿನಯ ಕುಮಾರ್ ಕಂದಡ್ಕ ರವರು ಧನಿ ಗೂಡಿಸಿದರು.
ಸುಳ್ಯ ನಗರದ ಕಸ ವಿಲೇವಾರಿಗೆ ಅಧಿಕಾರಿಗಳು ನೂತನ ಸ್ಥಳ ಗುರುತಿಸಿರುವ ಬಗ್ಗೆ ಮಾತನಾಡಿದ ಬಾಲಕೃಷ್ಣ ರೈ ಯಾವುದೇ ಕಾರಣಕ್ಕೂ ನಗರದ ಕಸವನ್ನು ನಮ್ಮ ವಾರ್ಡ್ ನತ್ತ ತರಬಾರದು.ನಮ್ಮ ವಾರ್ಡಿನ ಪರಿಸರದಲ್ಲಿ ಕುಡಿಯುವ ನೀರನ್ನು ಬಾವಿಗಳಿಂದ ಬಳಸುತಿದ್ದೇವೆ. ಇನ್ನೂ ಆ ಪರಿಸರದಲ್ಲಿ ಸರಿಯಾದ ರಸ್ತೆ ಗಳಿಲ್ಲ. ಅರಣ್ಯ ಇಲಾಖೆಯವರು ರಸ್ತೆ ಮಾಡಲು ಬಿಡುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿರುವ ಜಾಗಕ್ಕೆ ಕಸ ತಂದರೆ ಊರಿಗೆ ಸಮಸ್ಯೆ ಉಂಟಾಗುತ್ತದೆ.ಸಾಧ್ಯವಾದರೆ ಎಲ್ಲಾ ವಾರ್ಡ್ ಗಳಲ್ಲಿ ಆ ಭಾಗದ ಕಸ ವಿಲೇವಾರಿಗೆ ಸ್ಥಳವನ್ನು ಮಾಡಿ ಕೊಡಿ ಎಂದು ಹೇಳಿದರು.
ಈ ವೇಳೆ ವೆಂಕಪ್ಪ ಗೌಡ ಮಾತನಾಡಿ ಆ ರೀತಿ ನೀವೇ ಹೇಳಿದರೆ ಹೇಗೆ? ಕೆಲವು ದಿನಗಳ ಮೊದಲು ಇದೇ ಸಭಾಂಗಣದಲ್ಲಿ ಕಲ್ಚರ್ಪೆ ಪರಿಸರದ ನಿವಾಸಿಗಳು ಮತ್ತು ನಮ್ಮ ಶಾಸಕರು, ನಾವೆಲ್ಲರೂ ಇದ್ದ ಸಭೆಯಲ್ಲಿ ಶಾಸಕರು ಹೊಸ ಜಾಗ ನೋಡುವ ಕುರಿತು ಸಲಹೆ ನೀಡಿದ್ದರು. ಈಗ ನಾವೇ ಈ ರೀತಿ ಹೇಳಿದರೆ ಹೇಗೆ ಎಂದು ಕೇಳಿದರು.
ಇದಕ್ಕೆ ಸಲಹೆ ನೀಡಿದ ವಿನಯ್ ಕುಮಾರ್ ಕಂದಡ್ಕ ಕಸ ವಿಲೇವಾರಿಗೆ ಬಹಳಷ್ಟು ಸ್ಥಳ ಬೇಕೆಂದು ಇಲ್ಲ.ನಾವು ಮಾಡುವ ಕೆಲಸ ಸಮರ್ಪಕವಾಗಿ ಮತ್ತು ವಿಜ್ಞಾನಿಕತೆ ಯಿಂದ ಮಾಡಿದರೆ ಈ ಸಮಸ್ಯೆ ಆಗುತ್ತಿರಲಿಲ್ಲ.
ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳು ಮನಸ್ಸು ಮಾಡ ಬೇಕು. ಅವರ ರವರ ಕರ್ತವ್ಯವನ್ನು ಸರಿಯಾಗಿ ಮಾಡಿದರೆ ಅದರ ಬಗ್ಗೆ ವೀಕ್ಷಣೆ ಮಾಡುತ್ತಿದ್ದರೆ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಲು ಸಾಧ್ಯ ಎಂದರು.
ನಗರದ ಕುಡಿಯುವ ನೀರಿನ ಯೋಜನೆಗೆ ನಗರದಲ್ಲಿ ತೋಡಿರುವ ಗುಂಡಿಗಳನ್ನು ಸರಿಪಡಿಸಿಕೊಡುವುದು ಯಾವಾಗ ಎಂದು ಧೀರಾ ಕ್ರಾಸ್ತ ರವರು ಕೇಳಿ,ಅವರ ವಾರ್ಡಿನ ರಸ್ತೆಯ ದುಸ್ಥಿತಿ ಬಗ್ಗೆ ಮಾತನಾಡಿದರು.
20 ವರ್ಷದಿಂದಲೂ ಇದೇ ನೀರು, ಕಸದ ಬಗ್ಗೆಯೇ ಚರ್ಚೆ, ಇಷ್ಟು ವರ್ಷವಾದರೂ ಇದನ್ನು ಸರಿ ಪಡಿಸಲು ಸಾಧ್ಯವಾಗದೇ ಇರಲು ಕಾರಣ ವೇನು? ಆಡಳಿತ ಮಾಡುವವರ ಇಚ್ಚಾ ಶಕ್ತಿಯ ಕೊರತೆಯಾ ಅಥವಾ ಸರಕಾರದ ಸಮಸ್ಯೆಯಾ ಸದಸ್ಯ ಕೆ ಎಸ್ ಉಮ್ಮರ್ ಪ್ರಶ್ನೆ
ಕಳೆದ 16 ವರ್ಷಗಳಿಂದ ನಗರ ಪಂಚಾಯತ್ ಸದಸ್ಯನಾಗಿ ನಾನು ಇಲ್ಲಿ ಇದ್ದೇನೆ. ಅಂದು ನಾನು ಇಲ್ಲಿಗೆ ಬಂದಾಗ ಇದೇ ಕಸ, ನೀರು ಇದರ ಬಗ್ಗೆಯೇ ಚರ್ಚೆ ಯಾಗುತಿತ್ತು. ಈಗ 16 ವರ್ಷದ ಬಳಿಕವೂ ನಾವು ಅದೇ ಕಸ, ನೀರಿನ ಸಮಸ್ಯೆಯನ್ನೇ ಇಂದಿಗೂ ಹೇಳುತಿದ್ದೇವೆ.ಆದರೆ ಇದರ ಬಗ್ಗೆ ಕೇವಲ ಚರ್ಚೆ ಮಾತ್ರ. ಅದರ ಪರಿಹಾರಕ್ಕೆ ಮಾರ್ಗ ಹುಡುಕುವುದು ಯಾವಾಗ ಎಂದು ಕೇಳಿದರು. ನಿಮ್ಮಿಂದ ಸಾಧ್ಯವಿಲ್ಲದಿದ್ದರೆ ಆ ಸ್ಥಾನವ
ನ್ನು ಬಿಡಿ. ಯಾರಾದರು ಬೇರೆಯವರು ಬಂದು ಮಾಡಬಹುದು ಎಂದು ಹೇಳಿದರು.
ರಾತ್ರಿ ವೇಳೆ ಗಾಂಧಿನಗರ ಮುಖ್ಯ ರಸ್ತೆ ಬದಿಯಲ್ಲಿ ಕಸವನ್ನು ತಂದು ಹಾಕುತ್ತಾರೆ.ಈ ಬಗ್ಗೆ ಕ್ರಮ ಕೈ ಗೊಳ್ಳಿ ಮತ್ತು ಅಲೆಟ್ಟಿ ತಿರುವು ಬಳಿ ರಸ್ತೆ ಗುಂಡಿ ಬಿದ್ದಿದೆ, ಗುರುಂಪು ಬಳಿ ರಸ್ತೆ ಬದಿ ಕಲ್ಲು ಮಣ್ಣು ರಾಶಿ ಇದ್ದು ಅಪಘಾತ ಸಂಭವಿಸುತ್ತಿದೆ ಇದನ್ನು ಸರಿ ಪಡಿಸಿ ಎಂದು ನಾಮನಿರ್ದೇಶಕ ಸದಸ್ಯರುಗಳಾದ ರಾಜು ಪಂಡಿತ್, ಸಿದ್ದಿಕ್ ಕೊಕ್ಕೊ ಹೇಳಿದರು.
ಅಪಾಯಕಾರಿ ಮರ ತೆರವು ಗೊಳಿಸುವ ಬಗ್ಗೆ ಸದಸ್ಯರಾದ ಸುಶೀಲ ಜಿನ್ನಪ್ಪ, ಬಾಲಕೃಷ್ಣ ಭಟ್ ಕೊಡಂಕೇರಿ ಕೇಳಿದರು. ಅಲ್ಲದೆ ಹಳೆಗೇಟು ಬ್ರಹ್ಮರ ಗಯ ಬಳಿ ರಸ್ತೆ ಬದಿ ಬಿದ್ದಿರುವ ಕಲ್ಲು ಬಂಡೆಗಳನ್ನು ತೆರವು ಗೊಳಿಸಿಕೊಡುವ ಬಗ್ಗೆ ಬಾಲಕೃಷ್ಣ ಭಟ್ ಕೊಡಂಕೇರಿ ಹೇಳಿದರು.
ಸಭೆಯಲ್ಲಿ ನ ಪಂ ಸದಸ್ಯರುಗಳಾದ ಶಿಲ್ಪಾ ಸುದೇವ್, ಸರೋಜಿನಿ ಪೆಳ್ತಡ್ಕ, ಶೀಲಾ ಕುರುಂಜಿ, ವಾಣಿಶ್ರೀ, ಪೂಜಿತಾ, ಪ್ರವೀತಾ ಪ್ರಶಾಂತ್, ನಾರಾಯಣ ಶಾಂತಿನಗರ,ಮೊದಲಾದವರು ಉಪಸ್ಥಿತರಿದ್ದರು.