ಯೇನೆಕಲ್ಲು ಸೊಸೈಟಿ ಮಹಾಸಭೆ

0

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆ ಸೆ. 14ರಂದು ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಗೆ ಮುಂಚಿತವಾಗಿ ಸಂಘದ ಆವರಣದಲ್ಲಿ ಸಸಿ ನೆಡಲಾಯಿತು.


ಸಂಘದ ನಿರ್ದೇಶಕಿ ಶ್ರೀಮತಿ ಯಮುನರವರ ಪ್ರಾರ್ಥನೆಯ ನಂತರ ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ಸ್ವಾಗತಿಸಿದರು. ಬಳಿಕ ಹಿರಿಯ ಕೃಷಿಕ ಹರಿಯಪ್ಪ ಗೌಡ ಬಾಲಾಡಿ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಆರಂಭದಲ್ಲಿ ವರದಿ ಸಾಲಿನಲ್ಲಿ ಮೃತಪಟ್ಟ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕೆ.ಆರ್. ವರದಿ ವಾಚಿಸುತ್ತಾ ವರದಿ ವರ್ಷಾಂತ್ಯಕ್ಕೆ ಸಂಘವು 15.69 ಕೋಟಿ ಠೇವಣಿ ಹೊಂದಿದ್ದು, ರೂ. 2.67 ಕೋಟಿ ಪಾಲು ಬಂಡವಾಳ, ರೂ. 30.35 ಕೋಟಿ ಸದಸ್ಯರ ಸಾಲವಿದ್ದು, ಶೇ. 95.45 ಸಾಲ ವಸೂಲಾತಿಯಾಗಿದೆ. ವರದಿ ಸಾಲಿನಲಿ ಸಂಘವು ಒಟ್ಟಾರೆಯಾಗಿ ರೂ. 170.05 ಕೋಟಿ ವ್ಯವಹಾರ ನಡೆಸಿ ರೂ. 15.64 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.

ವರದಿಯ ಮೇಲೆ ಚರ್ಚೆ ನಡೆದು ಅಂಗೀಕಾರಗೊಂಡಿತು. ಮುಂದಿನ ತಿಂಗಳಿನಿಂದ ಸಂಘದ ದೇವರಹಳ್ಳಿ ಶಾಖೆಯಲ್ಲಿ ಆ ಭಾಗದ ಸದಸ್ಯರ ಅನುಕೂಲಕ್ಕಾಗಿ ಬ್ಯಾಂಕ್ ವ್ಯವಹಾರವನ್ನು ಪ್ರಾರಂಭಿಸಲಾಗುವುದು ಎಂದರು. ಸಂಘವು ಅತೀ ಕಡಿಮೆ ಪ್ರಮಾಣದಲ್ಲಿ ಡಿವಿಡೆಂಟ್ ವಿತರಿಸುತ್ತಿರುವುದಾಗಿ ಸಭೆಯಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿಯವರು ತಮ್ಮ ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ಹಿಂದಿನ ಅವಧಿಯಲ್ಲಿ ಪೂರಕ ದಾಖಲೆಗಳಿಲ್ಲದೆ ಸಾಲ ನೀಡಿರುವುದರಿಂದ ವಸೂಲಾತಿಯಲ್ಲಿ ಹಿಂದೆ ಬಿದ್ದಿದ್ದೇವೆ. ನಮ್ಮ ಶ್ರಮಮೀರಿ ಸಾಲಗಾರರ ಮನೆಗೆ ಹೋಗಿ ಹಣ ಪಾವತಿಸುವಂತೆ ಕೇಳಿಕೊಂಡರೂ ಸಾಲ ಮರುಪಾವತಿಯಾಗದೇ ಇರುವುದರಿಂದ ಕಾನೂನಿನ ಮೊರೆ ಹೋಗಿದ್ದೇವೆ.

ಇದರಿಂದಾಗಿ ನಿವ್ವಳ ಲಾಭಾಂಶ ಕಡಿಮೆಯಾಗಿ ಡಿವಿಡೆಂಟ್ ವಿತರಣೆಯಲ್ಲಿ ಕಡಿಮೆಯಾಗಿದೆ ಎಂದರಲ್ಲದೆ, ಸಂಘದ ಅಭಿವೃದ್ಧಿಯ ದೃಷ್ಟಿಯಲ್ಲಿ ಮತ್ತು ಸದಸ್ಯರ ಅನುಕೂಲತೆಗೆ ಬೇಕಾದ ಎಲ್ಲಾ ಕಾರ್ಯಗಳನ್ನು ಮಾಡಲು ನಾವು ಬದ್ದರಿದ್ದೇವೆ ಎಂದು ಹೇಳಿದರು.

2024ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಶೇ. 85ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. ಸಂಘದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಕೇದಿಗೆಬನ ಈ ವಿದ್ಯಾರ್ಥಿಗಳ ಪಟ್ಟಿಯೊಂದಿಗೆ ವಿದ್ಯಾರ್ಥಿಗಳ ಪರಿಚಯ ಹೇಳಿದರು. ಸಂಘದ ನಿರ್ದೇಶಕ ವೆಂಕಟ್ರಮಣ ಕೆ.ವಿ ಕೇಂದ್ರ ಸರಕಾರದಿಂದ ಕೃಷಿಕರಿಗೆ, ಕೃಷಿಕರ ಮಕ್ಕಳಿಗೆ ದೊರೆಯಲಿರುವ ವಿವಿಧ ಸ್ಕೀಂಗಳು ಮತ್ತು ಅದನ್ನು ಪಡೆಯುವ ವಿಧಾನದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಭರತ್ ನೆಕ್ರಾಜೆಯವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು. ಸಂಘದ ನಿರ್ದೇಶಕರಾದ ಅಣ್ಣೋಜಿ ಗೌಡ ಕಟ್ಟ, ಶ್ರೀಮತಿ ಅನಿತಾ ಪಿ.ಆರ್, ಕಿರಣ್ ಕುಮಾರ್ ಎಂ, ಕೇಶವ ಆಚಾರ್ಯ, ಶ್ರೀನಿವಾಸ ಆಚಾರ್ಯ, ಶ್ರೀಮತಿ ಯಮುನಾ ಎಸ್.ಎಲ್, ಶ್ರೀಮತಿ ವೇದಾವತಿ ಕೆ, ರಮೇಶ್ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳು ಸಹಕಾರ ನೀಡಿದರು.