ಅಯ್ಯನಕಟ್ಟೆ: ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ವಾರ್ಷಿಕ ಮಹಾಸಭೆ

0

ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಸದಸ್ಯ ಕೃಷಿಕರ ವಾರ್ಷಿಕ ಮಹಾಸಭೆಯು ಸೆ. 14 ರಂದು ಕಂಪನಿಯ ಅಧ್ಯಕ್ಷರಾದ ಮೂಲಚಂದ್ರ ಕುಕ್ಕಾಡಿಯವರ ಅಧ್ಯಕ್ಷತೆಯಲ್ಲಿ ಅಯ್ಯನಕಟ್ಟೆ ಪಂಡಿತ್ ದೀನ್ ದಯಾಳ್ ಸಭಾಂಗಣದಲ್ಲಿ ನಡೆಯಿತು.

ವಾರ್ಷಿಕ ವರದಿ ಹಾಗೂ ಲೆಕ್ಕಾಚಾರಗಳನ್ನು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ ವಾಚಿಸಿದರು.


ಸಂಸ್ಥೆಗೆ ಕೇಂದ್ರ ಸರಕಾರದ ರಾಷ್ಟ್ರೀಯ ಜೇನು ಮಂಡಳಿಯ ಹಾಗೂ ಸಣ್ಣ ಕೃಷಿಕರ ವ್ಯಾಪಾರ ಒಕ್ಕೂಟ (SFAC) ವತಿಯಿಂದ ಸಹಾಯಧನದಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ಜೇನು ಸಂಸ್ಕರಣಾ ಘಟಕದ ಕಾರ್ಯ ಚಟುವಟಿಕೆಗಳ ಪ್ರಗತಿ ಬಗ್ಗೆ ಮಾಹಿತಿ ನೀಡಲಾಯಿತು.

ಈ ಪ್ರಕಾರ ಮುಂದಿನ ಜನವರಿ ತಿಂಗಳ ಆರಂಭದಲ್ಲಿ ಕೆಲಸ ಪೂರ್ಣಗೊಂಡು ಲೋಕಾರ್ಪಣೆ ಗೊಳ್ಳುತ್ತದೆ ಎಂಬ ಮಾಹಿತಿ ನೀಡಿದರು. ಒಪ್ಪಂದ ಆಧಾರಿತ ಜೇನು ಕೃಷಿಯು ಹೊಸ ನಿಯಮಗಳ ಮೂಲಕ ಮತ್ತೆ ವಿಸ್ತರಿಸಿ ಮುಂದುವರೆಸಲಾಗುವುದು, ಜೇನಿನ ವ್ಯವಹಾರಗಳೊಂದಿಗೆ ಹಲಸು ಹಾಗೂ ಬಿದಿರು ಕೃಷಿಯ ಕಾರ್ಯ ಯೋಜನೆಗಳು ನಡೆಯುತ್ತಿದ್ದು ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕಂಪನಿಗೆ ಉತ್ತಮ ವ್ಯವಹಾರ‌ ನಡೆಯುತ್ತಿದೆ ಎಂದರು.


ಮುಂದಿನ ದಿನಗಳಲ್ಲಿ ಅಡಿಕೆ ಕೊಯಿಲು ಹಾಗೂ ಅಡಿಕೆಗೆ ಔಷಧಿ ಸಿಂಪಡಿಸುವ ಅಡಿಕೆ ಕೌಶಲ್ಯ ತಂಡವನ್ನು ರಚನೆ ಮಾಡುವುದು ಇವೇ ಮೊದಲಾದ ವಿಚಾರಗಳಿಗೆ ಸಂಬಂಧಿಸಿದ ವಿಚಾರಗಳು ಮಹಾಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.


ಕಂಪನಿಗೆ ನಿರ್ದೇಶಕರಾಗಿ ನಿರಂಜನ್ ಪೊಳ್ಯರನ್ನು ಅನುಮೋದಿಸಲಾಯಿತು.ಶೇರು ಬಂಡವಾಳವನ್ನು 50 ಲಕ್ಷಕ್ಕೆ ಏರಿಕೆ ಮಾಡುವುದೆಂದು ತೀರ್ಮಾನಿಸಲಾಯಿತು. ಸಲಹಾ ಸಮಿತಿ ಸದಸ್ಯರುಗಳಾದ ಎಂ.ಜಿ ಸತ್ಯನಾರಾಯಣ, ಅಣ್ಣಾ ವಿನಯಚಂದ್ರ, ಡಾ. ಯಶಸ್ವಿನಿ ಭಾರದ್ವಾಜ್ , ಪ್ರಸನ್ನ ಕುಂಞಿಹಿತ್ಲು, ಮತ್ತು ಸದಸ್ಯರುಗಳಾದ ಆರ್.ಕೆ .ಭಟ್ ಕುರುಂಬುಡೇಲು, ಬಾಲಕೃಷ್ಣ ಗೌಡ ಮರೆಂಗಾಲ, ರಾಮಪ್ರಸಾದ್ ಕರಿಯಾಲ ಮುಂತಾದವರು ಸಂಸ್ಥೆಯ ಅಭಿವೃದ್ಧಿಯ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಸಂಸ್ಥೆಯ ನಿರ್ದೇಶಕರುಗಳು ಸಲಹಾ ಸಮಿತಿ ಸದಸ್ಯರುಗಳು ಹಾಗೂ ಸಂಸ್ಥೆಯ ಕೃಷಿಕ ಸದಸ್ಯರು, ಗ್ರಾಮಜನ್ಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.