ಸುಳ್ಯ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆದ ಮಾನವ ಸರಪಳಿ

0

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಇಂದು ಕನಾಟಕ ಸರಕಾರದ ನಿರ್ದೇಶನದಂತೆ ಚಾಮರಾಜನಗರದಿಂದ ಬೀದರ್‌ವರೆಗೆ ಹಮ್ಮಿಕೊಳ್ಳಲಾದ ಮಾನವ ಸರಪಳಿಯಲ್ಲಿ ಇಂದು ಬೆಳಿಗ್ಗೆ 9.30 ರಿಂದ 10 ಗಂಟೆಯ ವರೆಗೆ ಸುಳ್ಯದ ಜನತೆ ಸಕ್ರಿಯವಾಗಿ ಪಾಲ್ಗೊಂಡರು.

ಸುಳ್ಯ ತಾಲೂಕಿನ ಕನಕಮಜಲಿನಿಂದ ಸಂಪಾಜೆಯವರೆಗೆ ಸುಮಾರು ಎಂಟೂವರೆ ಸಾವಿರ ಮಂದಿ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾನವ ಸರಪಳಿಯಲ್ಲಿ ಭಾಗಿಯಾದರು. ಸುಳ್ಯ ನಗರದ ಪೈಚಾರಿನಿಂದ ಪರಿವಾರಕಾನದ ವರೆಗೆ ಸುಮಾರು 5 ಸಾವಿರ ಮಂದಿ ಮಾನವ ಸರಪಳಿಯಲ್ಲಿ ಕೈ ಜೋಡಿಸಿದರು.

ಉದ್ಘಾಟನೆ:

ಸುಳ್ಯ ನಗರದ ಜ್ಯೋತಿ ಸರ್ಕಲ್ ಬಳಿ ಜಿ.ಪಂ. ಇಂಜಿನಿಯರಿಂಗ್ ಕಚೇರಿಯ ಎದುರುಗಡೆ ಪೆಂಡಾಲ್ ಹಾಕಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಸಲಾಯಿತು.


ಶಾಸಕಿ ಕು.ಭಾಗೀರಥಿ ಮುರುಳ್ಯ ಅವರು ದೀಪ ಬೆಳಗಿಸಿ ಗಿಡ ನೆಡುವುದರ ಮೂಲಕ ಚಾಲನೆಗೈದು ಶುಭಹಾರೈಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಪ್ರಜಾಪ್ರಭುತ್ವದ ಅವಶ್ಯಕತೆಯನ್ನು ಹೇಳಿ ಶುಭಹಾರೈಸಿದರು.


ಬಳಿಕ ನ.ಪಂ. ಸದಸ್ಯೆ ಶ್ರೀಮತಿ ಶೀಲಾ ಅರುಣ್ ಕುರುಂಜಿಯವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.

ಅದನ್ನು ಎಲ್ಲರೂ ಪುನರುಚ್ಛರಿಸಿದರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ನ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ನ.ಪಂ. ಉಪಾಧ್ಯಕ್ಷ ಬುದ್ಧ ನಾಯ್ಕ, ನ.ಪಂ. ಸದಸ್ಯರುಗಳಾದ ಕಿಶೋರಿ ಶೇಟ್, ಡೇವಿಡ್ ಧೀರ ಕ್ರಾಸ್ತಾ, ಸುಧಾಕರ ಕುರುಂಜಿಭಾಗ್, ಸುಶೀಲಾ ಜಿನ್ನಪ್ಪ, ಸರೋಜಿನಿ ಪೆಲತ್ತಡ್ಕ, ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್ ಕೊಡೆಂಕಿರಿ, ಪಿ.ಸಿ.ಜಯರಾಮ್, ವೆಂಕಟ್ ದಂಬೆಕೋಡಿ, ತಹಶೀಲ್ದಾರ್ ಎಂ. ಮಂಜುನಾಥ್, ತಾ.ಪಂ. ಇ.ಒ. ರಾಜಣ್ಣ, ನ.ಪಂ.ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಬಿ.ಇ.ಒ. ಶೀತಲ್ ಯು.ಕೆ., ಎಸಿಎಫ್ ಪ್ರವೀಣ್ ಶೆಟ್ಟಿ, ಪಿ.ಎಸ್.ಗಂಗಾಧರ್,ರೇಂಜರ್ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

ಬೆಳಿಗ್ಗೆ ಒಂಬತ್ತು ಗಂಟೆ ವೇಳೆಗೆ ಶಾಲಾ ವಿದ್ಯಾರ್ಥಿಗಳು ರಸ್ತೆಗೆ ಬರಲಾರಂಭಿಸಿದರು. 9.30 ರ ವೇಳೆಗೆ ಸರತಿ ಸಾಲಿನಲ್ಲಿ ನಿಂತರು. 9.37 ರಿಂದ ನಾಡಗೀತೆ ಹಾಡಲಾಯಿತು. 9.41 ರಿಂದ ಮುಖ್ಯ ಅತಿಥಿಗಳಾದ ಶಾಸಕರು ಹಾಗೂ ಡಾ.ಕೆ.ವಿ.ಚಿದಾನಂದರ ಭಾಷಣ ನಡೆದರೆ, 9.55 ಕ್ಕೆ ಸಂವಿಧಾನದ ಪ್ರಸ್ತಾವನೆ ಓದಿದರು. 9.57 ಕ್ಕೆ ಎಲ್ಲರೂ ಕೈ ಕೈ ಹಿಡಿದು ನಿಂತು ಮಾನವ ಸರಪಳಿ ನಿರ್ಮಿಸಿದರು. 10 ಗಂಟೆಗೆ ಸರಿಯಾಗಿ ಜೈ ಹಿಂದ್, ಜೈ ಕರ್ನಾಟಕ ಘೋಷಣೆ ಕೂಗಲಾಯಿತು. ಬಳಿಕ ಸರಪಳಿ ಕಳಚಲಾಯಿತು.