ಆಲೆಟ್ಟಿ: ಘನತ್ಯಾಜ್ಯ ಘಟಕ ನಿರ್ಮಾಣದ ಕುರಿತು ನಾಗರಿಕರ ಜತೆ ಸಮಾಲೋಚನಾ ಸಭೆ

0

ಘಟಕ ಸ್ಥಾಪನೆಗೆ ಮೈಂದೂರು ಭಾಗದ ಸ್ಥಳೀಯರ ವಿರೋಧ

ಕಾನೂನಾತ್ಮಕವಾಗಿ ಮುಂದಿನ‌ ನಡೆಗೆ ಪಂಚಾಯತ್ ನಿರ್ಧಾರ

ಆಲೆಟ್ಟಿ ಗ್ರಾಮಕ್ಕೆ ಸಂಬಂಧ ಪಟ್ಟಂತೆ ಮೈಂದೂರು ಎಂಬಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಕಂದಾಯ ಇಲಾಖೆಯ ಸೂಚನೆಯಂತೆ ಸರ್ವೆ ಕಾರ್ಯ ನಡೆಸಿ ಜಾಗ ಗುರುತಿಸಲ್ಪಟ್ಟಿದ್ದು ಘಟಕ ಸ್ಥಾಪಿಸಲು ಮಂಜೂರಾತಿ ಪತ್ರ ಬಂದಿದ್ದು ಟೆಂಡರ್ ಪ್ರಕ್ರಿಯೆ ನಡೆದಿದ್ದರೂ ಕಳೆದ ಮೂರು ವರ್ಷಗಳಿಂದ ಕೆಲಸ ಕಾರ್ಯ ಇನ್ನೂ ಆರಂಭವಾಗಿಲ್ಲ.

ಘನತ್ಯಾಜ್ಯ ನಿರ್ವಹಣೆಗೆ ಪಂಚಾಯತ್ ನ ವಿಶೇಷ ಅನುದಾನದಲ್ಲಿ ಕಸ ವಿಲೇವಾರಿಗೆ ಹೊಸ ವಾಹನ ಖರೀದಿಸಲಾಗಿದ್ದು ಪಂಚಾಯತ್ ಶೆಡ್ ನಲ್ಲಿ ಇರಿಸಲಾಗಿದೆ.

ಆಲೆಟ್ಟಿಯಿಂದ ನಾಲ್ಕೈದು ಕಿ.ಮೀ.ವ್ಯಾಪ್ತಿಯಲ್ಲಿ ಮೈಂದೂರಿನಲ್ಲಿ ಸುಮಾರು 1 ಎಕ್ರೆ ಜಾಗ ಗುರುತಿಸಲಾಗಿದ್ದು ಘನತ್ಯಾಜ್ಯ ಘಟಕ ಕಾಮಗಾರಿ ಕೆಲಸ ಆರಂಭಿಸುವುದಕ್ಕೆ ಈ ಪರಿಸರದ ನಿವಾಸಿಗಳು ವಿರೋಧ ವ್ಯಕ್ತ ಪಡಿಸಿದರ ಹಿನ್ನೆಲೆಯಲ್ಲಿ ಪಂಚಾಯತ್ ಆಡಳಿತ ಮಂಡಳಿ ಹಾಗೂ ಮೈಂದೂರು, ಗಬ್ಬಲ್ಕಜೆ ಭಾಗದ ನಾಗರಿಕರ ಜತೆ ಸಮಾಲೋಚನಾ ಸಭೆಯನ್ನು ಸೆ.17 ರಂದು ಪಂಚಾಯತ್ ಅಧ್ಯಕ್ಷೆ ವೀಣಾ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಪಂ.ಸಭಾಂಗಣದಲ್ಲಿ ನಡೆಯಿತು.

ಘಟಕದ ನಿರ್ವಹಣೆ ಹೇಗಿರುವುದು ಎಂಬುದರ ಬಗ್ಗೆ ಇಲ್ಲಿನ ನಿವಾಸಿಗಳನ್ನು ಅರಂತೋಡು ಪಂಚಾಯತ್ ಘಟಕ್ಕೆ ಈ ಹಿಂದೆ ಕರೆದುಕೊಂಡು ಹೋಗಲಾಗಿತ್ತು.

ಈಗಾಗಲೇ ಬಹಳ ಸುದ್ದಿಯಾಗಿರುವ ಕಲ್ಚೆರ್ಪೆ ಘನತ್ಯಾಜ್ಯ ಘಟಕದಿಂದ ಅನುಭವಿಸುತ್ತಿರುವ ಸಮಸ್ಯೆ ಕಂಡಿರುವ ನಾಗರಿಕರು ನಮಗೂ ಮುಂದೆ ಇದೇ ರೀತಿಯ ಪರಿಸ್ಥಿತಿ ಬರಬಹುದೆಂಬ ಭಯದಿಂದ ಸಾರಸಾಗಾಟಾಗಿ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಪಂಚಾಯತ್ ಪಿ.ಡಿ.ಒ ಮತ್ತು ಅಧ್ಯಕ್ಷರು ಹಾಗೂ ಸದಸ್ಯರು ಮನವೊಲಿಸಲು ಪ್ರಯತ್ನಿಸಿದರು ಇದೆಲ್ಲವನ್ನೂ ಸ್ಥಳೀಯ ನಿವಾಸಿಗಳು ನಿರಾಕರಿಸಿ ಘಟಕ ನಿರ್ಮಿಸಲು ವಿರೋಧಿಸಿರುತ್ತಾರೆ.


ಇಂದಿನ ಸಮಾಲೋಚನಾ ಸಭೆಯಲ್ಲಿ ಮೈಂದೂರಿನಲ್ಲಿ ಘಟಕ ನಿರ್ಮಿಸಿಬಾರದೆಂಬ ವಿರೋಧ ವ್ಯಕ್ತವಾಗಿರುವುದರ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರಬರೆಯುವಂತೆ ಹರಿಪ್ರಸಾದ್ ಗಬ್ಬಲ್ಕಜೆ ಒತ್ತಾಯಿಸಿದರು.
ಮೈಂದೂರು ಭಾಗಕ್ಕೆ ಪಂಚಾಯತಿನಿಂದ 5 ರೂಪಾಯಿ ಅಭಿವೃದ್ಧಿ ಕೆಲಸ ಮಾಡಿಸಿಲ್ಲ. ಗ್ರಾಮದ ಕಸ ವಿಲೇವಾರಿಗೆ ನಮ್ಮ ಪರಿಸರ ಬೇಕು. ಅಭಿವೃದ್ಧಿಗೆ ಅನುದಾನ ನೀಡಲಾಗುವುದಿಲ್ಲ ಎಂದು ‌ಮನ್ಮಥ ರವರು ಆರೋಪಿಸಿದರು.

ಕೇಂದ್ರ ಸರಕಾರದ ಸಡಕ್ ಯೋಜನೆಯಿಂದ ರಸ್ತೆ ಅಭಿವೃದ್ಧಿ ಮಾಡಿದ್ದಾರೆ. ಒಳ್ಳೆಯ ರಸ್ತೆ ನಿರ್ಮಾಣವಾದಾಗ ನಿಮ್ಮ ಇಲ್ಲಿಯ ಕಸವನ್ನು ‌ಹಾಕಲು ನಮ್ಮ ಜಾಗ ಬೇಕಾಗಿದೆ. ಸರಕಾರಿ ಜಾಗ ಬೇರೆ ಕಡೆ ಇಲ್ಲವೇ ? ಪರ್ಯಾಯ ಸ್ಥಳ ಗುರುತಿಸಿ ಅಥವಾ ಅರಣ್ಯ ಇಲಾಖೆಯ ಖಾಲಿ ಪ್ರದೇಶದಲ್ಲಿ ನಿರ್ಮಿಸಿ.
ನಮ್ಮ ಪರಿಸರವನ್ನು ಹಾಳು ಮಾಡಲು ನಾವು ಬಿಡುವುದಿಲ್ಲ. ಒಂದು ವೇಳೆ ಅದೇ ಸ್ಥಳದಲ್ಲಿ ನಿರ್ಮಾಣಕ್ಕೆ ಮುಂದಾದರೆ ದೈವದ ಚಾವಡಿಯಲ್ಲಿ ನಿಂತು ಪ್ರಾರ್ಥನೆ ಮಾಡುತ್ತೇವೆ. ಎಂದು ಲೋಲಜಾಕ್ಷ ಭೂತಕಲ್ಲು ಹೇಳಿದರು.
ಜಾಗ ಗುರುತಿಸುವ ಸಂದರ್ಭದಲ್ಲಿ ‌ಪರಿಸರದಲ್ಲಿರುವ ನಿವಾಸಿಗಳಿಗೆ ತಿಳಿಸಲಿಲ್ಲ ಯಾಕೆ ? ನಮ್ಮ ಒಪ್ಪಿಗೆ ಇಲ್ಲದೆ ಕಸ ವಿಲೇವಾರಿಗೆ ಸ್ಥಳ ಗುರುತಿಸಿರುವುದು ಸರಿಯಾದ ಕ್ರಮವಲ್ಲ. ನಿಮ್ಮ ಆಡಳಿತ ಅವಧಿಯಲ್ಲಿ ಘಟಕ ‌ನಿರ್ಮಿಸುವ ಉದ್ದೇಶ ನಿಮ್ಮದಾಗಿದೆ. ಅದರಿಂದ ‌ಸಮಸ್ಯೆ ಎದುರಿಸಬೇಕಾದವರು‌ ಯಾರು ಎಂದು ಬಿಪಿನ್ ಕುಡೆಕಲ್ಲು ಪ್ರಶ್ನಿಸಿದರು.
ಪಂಚಾಯತ್ ಸದಸ್ಯರ ಗಮನಕ್ಕೆ ಬಾರದೆ ಜಾಗ ಗುರುತು‌ ಮಾಡಿರುವುದಾ..? ಸದಸ್ಯರು ಉತ್ತರಿಸಬೇಕು ಎಂದು ಕುಸುಮಾಧರ ಭೂತಕಲ್ಲು ಕೇಳಿದರು.

ನಮ್ಮ ಹಿರಿಯರ ಸ್ವಾಧಿನದಲ್ಲಿದ್ದ ಜಾಗ ಅದರಲ್ಲಿ ದೈವಜ್ಞರ ಸೂಚನೆಯಂತೆ ದೈವಗಳ ‌ಸಾನಿಧ್ಯವಿದೆ ಎಂದು ತಿಳಿದು ಬಂದಿದೆ. ಅದಕ್ಕೆ ‌ಪರಿಹಾರವಾಗಿ‌ ದೈವಸ್ಥಾನದ ನಿರ್ಮಾಣ ಪಂಚಾಯತ್ ನವರು ಮಾಡುತ್ತೀರಾ ಎಂದು ನಿಖಿಲ್ ಕುಡೆಕಲ್ಲು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪಿ.ಡಿ.ಒ ಸೃಜನ್ ರವರು ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಕಳೆದ ಅವಧಿಯಲ್ಲಿ ಸ್ಥಳ ಗುರುತಿಸಲಾಗಿದೆ. ಮಂಜೂರಾತಿ ‌ಪತ್ರ ಬಂದಿದ್ದು ಟೆಂಡರ್ ಪ್ರಕ್ರಿಯೆ ಆಗಿರುತ್ತದೆ.


ಈಗ ಜಾಗ ಗುರುತಿಸಿದ ಸ್ಥಳದಲ್ಲಿ ಘಟಕ ನಿರ್ಮಿಸುವಂತೆ ಅಧಿಕಾರಿಗಳು ಒತ್ತಡ ಮಾಡುತ್ತಿದ್ದಾರೆ ಎಂದು ವಾಸ್ತವ ವಿಷಯ ತಿಳಿಸಿದರು.
ನಾನು ಇದಕ್ಕೆ ಸಂಬಂಧಿಸಿದ ವಾರ್ಡ್ ಸದಸ್ಯನಾಗಿದ್ದು ಹಿಂದಿನ ಆಡಳಿತ ಮಂಡಳಿಯ ನಿರ್ಧಾರದಂತೆ ಮೈಂದೂರು ಎಂಬಲ್ಲಿ ಘನತ್ಯಾಜ್ಯ ಘಟಕಕ್ಕೆ ಸ್ಥಳ ಗುರುತಿಸಲಾಗಿರುವ ವಿಷಯವನ್ನು ಅಲ್ಲಿನ ಸ್ಥಳೀಯರ ಗಮನಕ್ಕೆ ತಂದಿರುತ್ತೇನೆ. ಜನಪ್ರತಿನಿಧಿಯಾಗಿ ಆಯ್ಕೆ ಮಾಡಿ ಕಳುಹಿಸಿದ ನನ್ನ ವಾರ್ಡಿನ ಜನರಿಗೆ ಅನ್ಯಾಯ ಮಾಡುವುದಿಲ್ಲ. ಈಗ ನಿಗದಿ ಪಡಿಸಿದಲ್ಲಿ ಘಟಕ ನಿರ್ಮಾಣಕ್ಕೆ ನನ್ನ ವೈಯಕ್ತಿಕ ವಿರೋಧವಿದೆ. ಈ ಹಿಂದೆ ಸಾಮಾನ್ಯ ಸಭೆಯಲ್ಲಿಯೂ ವಿರೋಧಿಸಿದ್ದೇನೆ. ಪಂಚಾಯತ್ ಸದಸ್ಯತನದ ಅವಧಿ ಮುಗಿದ ನಂತರ ನಾನು ಸಾಮಾನ್ಯವಾಗಿ ಊರಿನ ಜನರ ಜತೆಗಿರಬೇಕಲ್ಲವೇ ಎಂದು ಚಂದ್ರಕಾಂತ ನಾರ್ಕೋಡು ಪ್ರತಿಪಾದಿಸಿದರು.
ಗ್ರಾಮದ ಅಭಿವೃದ್ಧಿಯಲ್ಲಿ ‌ಕಸ ವಿಲೇವಾರಿ ಸಮರ್ಪಕವಾಗಿ ಮಾಡಬೇಕೆಂಬ ಉದ್ದೇಶದಿಂದ ಘಟಕ ನಿರ್ಮಾಣ ಮಾಡಬೇಕಾಗಿದೆ.


ನಮ್ಮ ಅವಧಿಯಲ್ಲಿ ಮಾಡಬೇಕೆನ್ನುವ ಉದ್ದೇಶದಿಂದ ನಾವು ನಿಮ್ಮ ಬಳಿ ವಿನಂತಿಸುತ್ತಿಲ್ಲ. ನಮಗೆ ಎಲ್ಲಿಯಾದರೂ ಗ್ರಾಮಕ್ಕೊಂದು ಘಟಕ ನಿರ್ಮಾಣವಾಗಬೇಕು. ಕಲ್ಚೆರ್ಪೆಯಂತೆ ಈ ಘಟಕದನಿರ್ವಹಣೆಯಲ್ಲ. ಇಲ್ಲಿ ಶೆಡ್ ನಿರ್ಮಿಸಿ ಒಣ ಕಸ ಮಾತ್ರ ಸಂಗ್ರಹಿಸಿ ಬೇಪರ್ಡಿಸಿ ವಿಲೇವಾರಿ ಮಾಡುವುದು. ಇದು ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತದೆ.ಈ ಸಭೆಯ ಉದ್ದೇಶ ನಿಮ್ಮ ಮೇಲೆ ಒತ್ತಡ ಹಾಕುವುದಲ್ಲ ಮನವರಿಕೆ ಮಾಡುವುದಾಗಿದೆ ಎಂದು ದಿನೇಶ್ ಕಣಕ್ಕೂರು ಉತ್ತರಿಸಿದರು.
ಇಂದಿನ ಸಭೆಯ ನಡಾವಳಿಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಇರಿಸಿದ ನಂತರ ಸದಸ್ಯರ ಅಭಿಪ್ರಾಯವನ್ನು ಮಂಡಿಸಿ ಅದರಂತೆ ಸಭೆಯಲ್ಲಿ ವಿರೋಧ ವ್ಯಕ್ತವಾಗಿರುವ ಬಗ್ಗೆ ಉಲ್ಲೇಖಿಸಿ ಪತ್ರ ಬರೆಯಲಾಗುವುದು ಎಂದು ಶಿವಾನಂದ ರಂಗತ್ತಮಲೆ ತಿಳಿಸಿದರು.
ಮೈಂದೂರಿನಲ್ಲಿ ಎಂದು ನಾವು ಹೇಳಿರುವುದಲ್ಲ. ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ‌ತೆಗೆದು ಕೊಂಡ ತೀರ್ಮಾನ. ನಮ್ಮ ಗ್ರಾಮಕ್ಕೆ ಘನತ್ಯಾಜ್ಯ ಅವಶ್ಯಕತೆ ಇದೆ. ಏನಿದ್ದರೂ ಕಾನೂನಾತ್ಮಕವಾಗಿ ಮುಂದೆ ಹೇಗೆ ಅಧಿಕಾರಿಗಳು ಆದೇಶ ನೀಡುತ್ತಾರೆ ಅದರಂತೆ ಪಂಚಾಯತ್ ಮುಂದುವರಿಯುವುದು ಒಳ್ಳೆಯದು ಎಂದು ರತೀಶನ್ ತಿಳಿಸಿದರು.

ದೊಡ್ಡ ಗ್ರಾಮವಾಗಿದ್ದು ಸ್ವಚ್ಚತೆಯ ದೃಷ್ಟಿಯಿಂದ ಘನತ್ಯಾಜ್ಯ ಘಟಕ ಬೇಕೆಂಬುದು ಪ್ರತಿಯೊಬ್ಬ ಗ್ರಾಮಸ್ಥರ ಬೇಡಿಕೆಯಾಗಿದೆ. ಕಳೆದ ಅವಧಿಯಲ್ಲಿ ಪ್ರಸ್ತಾಪ ಗೊಂಡ ವಿಚಾರವಾಗಿದ್ದು‌ ನಮ್ಮ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸುವಂತೆ ಮೇಲಾಧಿಕಾರಿಗಳ ಒತ್ತಡ ಹಾಗೂ ಗ್ರಾಮಸ್ಥರ ಒತ್ತಾಯ ಇರುವುದರಿಂದ ಘಟಕ ನಿರ್ಮಾಣ ಆಗಬೇಕಾಗಿದೆ. ಈಗಾಗಲೇ ಎಲ್ಲಾ ಗ್ರಾಮದಲ್ಲಿ ನಿರ್ವಹಣೆ ಚೆನ್ನಾಗಿದೆ. ಅದೇ ಮಾದರಿಯಲ್ಲಿ ವೈಜ್ಞಾನಿಕವಾಗಿ ಇಲ್ಲಿಯೂ ಕಸ ವಿಲೇವಾರಿ ನಿರ್ವಹಣೆ ಮಾಡುತ್ತೇವೆ. ಗ್ರಾಮ ಸಭೆಯಲ್ಲಿ ಪ್ರತಿ ಬಾರಿಯೂ ಈ ವಿಷಯದ ಕುರಿತು ಚರ್ಚೆಗಳು ನಡೆಯುತ್ತಿರುತ್ತದೆ. ಇದಕ್ಕೆ ‌ಪರಿಹಾರ ಕಂಡು ಕೊಳ್ಳುವ ಉದ್ದೇಶದಿಂದ ಸಮಾಲೋಚನಾ ಸಭೆ ಕರೆಯಲಾಗಿದೆ. ಇದಕ್ಕೆ ‌ನೀವು ವಿರೋಧಿಸುವುದಾದರೆ ಮುಂದೆ ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ಅಧಿಕಾರಿಗಳು ಮುಂದುವರಿಸುವಂತೆ ಪಂಚಾಯತ್ ನಿರ್ಣಯ ಮಾಡಿ ಪತ್ರ ಬರೆಯಲಾಗುವುದು ಎಂದು ಅಧ್ಯಕ್ಷೆ ವೀಣಾ ರವರು ಉತ್ತರಿಸಿದರು.

ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಪುಷ್ಪಾವತಿ ಕುಡೆಕಲ್ಲು, ಸತ್ಯ ಪ್ರಸಾದ ಗಬ್ಬಲ್ಕಜೆ, ಸುದೇಶ್ ಅರಂಬೂರು, ವೇದಾವತಿ ನೆಡ್ಚಿಲು, ಭಾಗೀರಥಿ ಪತ್ತುಕುಂಜ ಉಪಸ್ಥಿತರಿದ್ದರು.