ಯೋಜನೆ ರಾಜ್ಯ ಸರಕಾರದ್ದು – ಫೋಕಸ್ ಆಗ್ತೀರೋದು ಮೋದಿ..!

0

ತಾ| ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರ ಅಸಮಾಧಾನ

ನ್ಯಾಯಬೆಲೆ ಅಂಗಡಿಗಳಲ್ಲಿ ರಾಜ್ಯ ಸರಕಾರದ ಯೋಜನೆಯಾದ ಅನ್ನಭಾಗ್ಯದಡಿ ಅಕ್ಕಿ‌ವಿತರಣೆ ನಡೆಯುತ್ತಿದೆ. ಆದರೆ ಅಲ್ಲಿ ಪ್ರಧಾನಿ ಮೋದಿಯವರ ಫೋಟೊ ಅಳವಡಿಸಿ ಫೋಕಸ್ ಮಾಡಲಾಗುತ್ತಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.

ತಾಲೂಕು ಗ್ಯಾರಂಟಿ ‌ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಅನ್ನಭಾಗ್ಯ ಯೋಜನೆಯ ಕುರಿತು ಆಹಾರ ನಿರೀಕ್ಷಕರು ವಿವರ ನೀಡಲು ಮುಂದಾದಾಗ, ಅಧ್ಯಕ್ಷ ಶಾಹುಲ್‌ ಹಮೀದ್ ರವರು ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆ ನೀಡುತ್ತಿದೆ. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಮೋದಿಯವರ ಫೋಟೊ ಹಾಕಿ ಯೋಜನೆ ಅವರದ್ದೆಂದು ಫೋಕಸ್ ಮಾಡಲಾತ್ತಿದೆ ಯಾಕೆ? ಎಂದು ಪ್ರಶ್ನಿಸಿದರು. ಅದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯ ಭವಾನಿಶಂಕರ್ ಕಲ್ಮಡ್ಕರು, “ಪಂಚ ಗ್ಯಾರಂಟಿ ನೀಡುತ್ತಿರುವುದು ರಾಜ್ಯ ಸರಕಾರ. ಕೋಟಿ ಕೋಟಿ ಹಣವನ್ನು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ಅಲ್ಲಿ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಬಂಧಿಸಿದ ಇಲಾಖೆಯ ಸಚಿವ ಚಿತ್ರವಿರುವ ನಾಮಫಲಕ ಅಳವಡಿಸಬೇಕೆ ಹೊರತು ಯಾರ್ಯಾರದ್ದು ಹಾಕಿರುವುದು ಯಾಕೆ?. ನಿನ್ನೆ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ಬಂದಾಗ ಅವರ ಗಮನಕ್ಕೆ ಇದನ್ನು ತರಲಾಗಿದೆ. ತೆಗೆಸುವಂತೆ ಹೇಳಿದ್ದಾರೆ ಎಂದು ಹೇಳಿದರು. ” ನಿನ್ನೆ ಜಿಲ್ಲಾ ಮಟ್ಟದ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆದಾಗ ಅದನ್ನು ತೆಗೆಸುವುದಾಗಿ ನಿಮ್ಮ ಅಧಿಕಾರಿ ಹೇಳಿದ್ದಾರೆ ” ಎಂದು ಅಧ್ಯಕ್ಷ ಶಾಹುಲ್ ಹಮೀದ್ ಅಧಿಕಾರಿಗಳಿಗೆ ಹೇಳಿದರು.

ಕೇಂದ್ರದಿಂದ ಬರುವ ಅಕ್ಕಿಯ ಸಲುವಾಗಿ ಆ ಫಲಕ ಹಾಕಲಾಗಿದೆ ಎಂಬ ಮಾಹಿತಿ ನಮಗಿದೆ. ರಾಜ್ಯ ಸರಕಾರದ ನಾಮಫಲಕ ಬಂದಿಲ್ಲ. ಅದನ್ನು ಅಳವಡಿಸುತ್ತೇವೆ” ಎಂದು ಆಹಾರ ನಿರೀಕ್ಷಕರು ಹೇಳಿದರು.

“ನಮ್ಮ ಯೋಜನೆಯಲ್ಲಿ ಯಾರೋ ಫೋಕಸ್ ಆಗಬೇಕೆಂದಿಲ್ಲ” ಎಂದು ಸದಸ್ಯ ಭವಾನಿಶಂಕರ್ ಹೇಳಿದರು.

“ರಾಜ್ಯದಲ್ಲಿ ಸರಕಾರದ ನಿರ್ದೇಶನದಂತೆ ಕೆಲಸಗಳು ಆಗಬೇಕು. ಸೆಂಟ್ರಲ್ ನವರ ಫಲಕ ಹಾಕುವುದಿದ್ದರೆ ರಾಜ್ಯದ ಮೂಲಕವೇ ಬರಬೇಕು ಆ ಕುರಿತು ಸುತ್ತೋಲೆ ಇದೆಯೇ ಎಂದು ಸದಸ್ಯ ಶಿಲ್ಪ ಇಬ್ರಾಹಿಂ ಪ್ರಶ್ನಿಸಿದರು.

ಈ ಚರ್ಚೆ ಮುಂದುವರಿಯುತ್ತಿರುವಂತೆ ಮಾತನಾಡಿದ ಸಮಿತಿ ಕಾರ್ಯದರ್ಶಿ ಹಾಗೂ ತಾ.ಪಂ. ಇ.ಒ. ರಾಜಣ್ಣರು ಮಾತನಾಡಿ, ಗೊಂದಲ ಬೇಡ. ಈ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿರುವ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಎಂದು ಸೂಚಿಸಿದರಲ್ಲದೆ, ಯಾವ ಸರಕಾರ ಇರುತ್ತದೆಯೋ ಆ ಸರಕಾರದ ನಾಮಫಲಕ ಹಾಕುವುದು ಈ ಹಿಂದಿನಿಂದಲೂ ಇದೆ” ಎಂದು‌ ಹೇಳಿದರು.

ಈ ಕುರಿತು ಮೇಲಾಧಿಕಾರಿಗಳಿಗೆ ಬರೆಯುವುದಾಗಿ ಆಹಾರ ನಿರೀಕ್ಷಕರು ಹೇಳಿದ ಮೇರೆಗೆ ಚರ್ಚೆಗೆ ತೆರೆ ಬಿತ್ತು.