ಸುಳ್ಯದಲ್ಲಿ ಯುವಕನಿಗೆ ಥಳಿತ – ಆಸ್ಪತ್ರೆಗೆ ದಾಖಲು
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳೊಡನೆ ಅಬ್ದುಲ್ ನಿಯಾಝ್ ಎಂಬ ಯುವಕ ಅನುಚಿತವಾಗಿ ವರ್ತಿಸಿದ್ದು, ಸುಳ್ಯದಲ್ಲಿ ಆಕೆಯ ಸಹಪಾಠಿ ವಿದ್ಯಾರ್ಥಿಗಳು ಧರ್ಮದೇಟು ನೀಡಿದ ಘಟನೆ ವರದಿಯಾಗಿದೆ.
ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಸರಕಾರಿ ಬಸ್‌ಗೆ ಬಿಸಿಲೆ ಘಾಟ್ ಬಳಿ ಸುಳ್ಯದ ಕಾಲೇಜೊಂದರ ವಿದ್ಯಾರ್ಥಿನಿ ಹತ್ತಿದ್ದಳು. ಯುವಕನೊಬ್ಬ ಕುಳಿತಿದ್ದ ಸೀಟಿನ ಪಕ್ಕದ ಸೀಟು ಖಾಲಿ ಇದ್ದುದರಿಂದ ಆಕೆ ಅದರಲ್ಲಿ ಕುಳಿತಳೆನ್ನಲಾಗಿದೆ. ಸ್ವಲ್ಪ ದೂರ ಬರುವಾಗ ಪಕ್ಕದಲ್ಲಿದ್ದ ಯುವಕ ಆಕೆಯೊಡನೆ ಅನುಚಿತವಾಗಿ ವರ್ತಿಸತೊಡಗಿದನೆನ್ನಲಾಗಿದೆ. ಅದನ್ನು ಆಕೆ ವಿರೋಧಿಸಿ ಕಂಡಕ್ಟರ್ ಗೆ ತಿಳಿಸಿದಳು. ಕಂಡಕ್ಟರ್ ಮತ್ತು ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಯುವಕನನ್ನು ಆಕ್ಷೇಪಿಸಿ ತರಾಟೆಗೆತ್ತಿಕೊಂಡರೆಂದು ತಿಳಿದು ಬಂದಿದೆ. ಈ ವಿಷಯವನ್ನು ವಿದ್ಯಾರ್ಥಿನಿ ತನ್ನ ಸಹಪಾಠಿಗಳಿಗೆ ಫೋನ್ ಮಾಡಿ ತಿಳಿಸಿದಳು.
ಬಸ್ಸು ಸುಬ್ರಹ್ಮಣ್ಯಕ್ಕೆ ಬಂದಾಗ ಅನುಚಿತವಾಗಿ ವರ್ತಿಸಿದ್ದ ಆ ಯುವಕ ಸುಬ್ರಹ್ಮಣ್ಯದಲ್ಲಿ ಬಸ್‌ನಿಂದ ಇಳಿದ. ವಿದ್ಯಾರ್ಥಿನಿ ಬೆಂಗಳೂರು ಬಸ್‌ನಲ್ಲೇ ಸುಳ್ಯಕ್ಕೆ ಬಂದಳು.
ಸುಬ್ರಹ್ಮಣ್ಯದಲ್ಲಿ ಬಸ್‌ನಿಂದ ಇಳಿದ ಆ ಯುವಕ ಮುಸ್ಲಿಂ ಯುವಕ ಎಂಬುದು ಸಹ ಪ್ರಯಾಣಿಕರಿಗೆ ಗೊತ್ತಾಗಿತ್ತೆನ್ನಲಾಗಿದೆ. ವಿದ್ಯಾರ್ಥಿನಿ ಸುಳ್ಯಕ್ಕೆ ಬರುವುದನ್ನು ಸಹಪಾಠಿ ಯುವಕರು ಸುಳ್ಯ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ ಅನುಚಿತ ವರ್ತನೆಗೈದ ಯುವಕ ಇರದಿದ್ದುದರಿಂದ, ಆತ ಸುಬ್ರಹ್ಮಣ್ಯದಿಂದ ಬೇರೆ ಬಸ್ಸಲ್ಲಿ ಬರುತ್ತಿರಬೇಕೆಂದು ತಿಳಿದು ಕೆಲವು ಯುವಕರು ಕಾರಲ್ಲಿ ಪೈಚಾರಿಗೆ ಹೋಗಿ ಕಾದರು. ಆ ಯುವಕ ಕೇರಳದ ಪಲ್ಲಂಗೋಡಿಗೆ ತೆರಳುವವನಾದ ಕಾರಣ ಸುಬ್ರಹ್ಮಣ್ಯದಿಂದ ಬೇರೆ ಬಸ್ಸಲ್ಲಿ ಬಂದು ಪೈಚಾರಿನಲ್ಲಿ ಬಸ್‌ನಿಂದ ಇಳಿದನೆನ್ನಲಾಗಿದೆ. ಆತನನ್ನು ಕಾದು ಕುಳಿತಿದ್ದ ವಿದ್ಯಾರ್ಥಿಗಳು ಆತ ಪೈಚಾರಲ್ಲಿ ಬಸ್‌ನಿಂದ ಇಳಿದ ಕೂಡಲೇ ಆತನನ್ನು ಹಿಡಿದು ಕಾರಲ್ಲಿ ಕೂರಿಸಿಕೊಂಡು ಸುಳ್ಯ ಬಸ್‌ನಿಲ್ದಾಣಕ್ಕೆ ಕರೆದೊಯ್ದರು. ಆ ವೇಳೆಗೆ ಬಸ್ ನಿಲ್ದಾಣದಲ್ಲಿ ತೊಂದರೆಗೊಳಗಾದ ಆ ವಿದ್ಯಾರ್ಥಿನಿ ಮತ್ತು ಇತರ ಸಹಪಾಠಿಗಳು ಕಾದು ನಿಂತಿದ್ದರು. ಬಸ್‌ಸ್ಟ್ಯಾಂಡ್‌ಗೆ ಆತನನ್ನು ಕರೆತಂದ ಕೂಡಲೇ ಎಲ್ಲರೂ ಸೇರಿ ಆತನಿಗೆ ಬಾರಿಸಿದರೆಂದೂ, ಆ ವೇಳೆಗೆ ಅಲ್ಲಿಗೆ ಬಂದ ಪೊಲೀಸರು ಗುಂಪಿನಿಂದ ಯುವಕನನ್ನು ಬಿಡಿಸಿ ಆಸ್ಪತ್ರೆಗೆ ಕಳುಹಿಸಿದರೆಂದು ತಿಳಿದು ಬಂದಿದೆ. ಅಬ್ದುಲ್ ನಿಯಾಝ್ ಈಗ ಆಸ್ಪತ್ರೆಯಲ್ಲಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.