ಒಂದೇ ದಿನದಲ್ಲಿ ಅಶಕ್ತ ಬಡ ದಂಪತಿಗೆ ಮನೆ ನಿರ್ಮಿಸಿಕೊಟ್ಟ ಯುವಕರು

0

ಆಲೆಟ್ಟಿಯ ಗುಂಡ್ಯ ಜನನಿ ತಂಡದ ಯುವಕರಿಂದ ಸೇವಾ ಕಾರ್ಯ

ಕಟ್ಟೆಕ್ಕಳ ಪದ್ಮನಾಭ -ಜಯಂತಿ ದಂಪತಿಯ ಮುಖದಲ್ಲಿ ಸಂತಸದ ನಗು

ಸಮಾಜದಲ್ಲಿರುವ ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ರೀತಿಯ ವ್ಯತ್ಯಾಸಗಳಿರುವುದು ಸಹಜ. ಮನೋ ಸ್ಥಿತಿ ಬದಲಾಗಬೇಕಾದರೆ ಆತನ ಮನಸ್ಸು ಮತ್ತು ಮನೆ ಎರಡು ಚೆನ್ನಾಗಿರಬೇಕು.ಮನೆಯ ಪರಿಸ್ಥಿತಿ ಸರಿಯಿಲ್ಲವಾದರೆ ಮನಸ್ಸು ಹತೋಟಿ ಬಿಟ್ಟು ದುಶ್ಚಟಕ್ಕೆ ಬಲಿಯಾಗುವ ಸಾಧ್ಯತೆ ಬಹಳ.

ಆಲೆಟ್ಟಿಯ ಕಟ್ಟೆಕ್ಕಳ ಎಂಬಲ್ಲಿ ಇಂತಹ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ದಂಪತಿ ಪದ್ಮನಾಭ ನಾಯ್ಕ ಮತ್ತು ಜಯಂತಿ.
ಇವರಿಬ್ಬರು ಕೂಲಿ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಇವರು ವಾಸಿಸುವ ಮನೆಯನ್ನು ನೋಡಿದರೆ ಯಾರಿಗಾದರೂ ಮರುಕ ಹುಟ್ಟದಿರಲಾರದು.

ಈ ದಂಪತಿಯು ಕಳೆದ ಹಲವಾರು ವರುಷಗಳಿಂದ ಇದೇ ಪರಿಸರದಲ್ಲಿ ಶಿಥಿಲವಾದ ಮುರುಕಲು ಮನೆಯಲ್ಲಿ ‌ವಾಸವಾಗಿದ್ದಾರೆ.
ಅಶಕ್ತ ಬಡ ಕುಟುಂಬ ವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈ ದಂಪತಿಯ ಬಗ್ಗೆ ಹಾಗೂ ಅವರಿಬ್ಬರು ವಾಸವಿರುವ ಮನೆಯ ದುಸ್ಥಿತಿಯ ಕುರಿತು ಈ ಹಿಂದೆಯೇ ಸುದ್ದಿ ಮಾಧ್ಯಮದಲ್ಲಿ ಬಿತ್ತರಗೊಂಡಿತ್ತು.
ಮನೆಗೆ ಎರಡು ಚಿಕ್ಕ ಕೋಣೆಗಳು ಮೇಲ್ಚಾವಣಿಯಲ್ಲಿ ಆಕಾಶ ಕಾಣುವಂತಿತ್ತು. ಗೋಡೆಯ ಬದಲಾಗಿ ಸೀರೆಯ ಬಟ್ಟೆಗಳನ್ನು ಪ್ಲಾಸ್ಟಿಕ್ ಗಳನ್ನು ಅಡ್ಡಲಾಗಿ ಕಟ್ಟಲಾಗಿತ್ತು. ಶೌಚಾಲಯ, ಅಡಿಗೆ ಕೋಣೆ, ಮಲಗುವ ಕೋಣೆ ಎಲ್ಲವೂ ಇರುವ ಎರಡು ಕೋಣೆಯಲ್ಲಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ.
ಜೋರಾಗಿ ಗಾಳಿ ಮಳೆ ಬಂತೆಂದರೆ ನೀರು ನೇರವಾಗಿ ಕೋಣೆಯ ಒಳಗೆ.

ಈ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟಿಸಿದರೂ ಇವರ ಮನೆಯನ್ನು ದುರಸ್ತಿ ಪಡಿಸಲು ಯಾರೂ ಮುಂದೇ ಬಂದಿರಲಿಲ್ಲ. ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಸುದ್ದಿ ಪ್ರಕಟವಾಗಬೇಕಾದರೆ ಅಶಕ್ತ ಕುಟುಂಬಗಳ ಸಹಾಯಕ್ಕೆ ಹಲವಾರು ಸಂಘಟನೆಗಳು ಅಥವಾ ದಾನಿಗಳು ಸ್ವತಃ ಧಾವಿಸಿ ಬರುತ್ತಾರೆ.

ಆದರೆ ಪದ್ಮನಾಭ ಮತ್ತು ಜಯಂತಿ ದಂಪತಿಯ ಬಗ್ಗೆ ಯಾಕೆ ಯಾರೋಬ್ಬರು ಸಹಾಯಕ್ಕೆ ಮುಂದಾಗಿಲ್ಲ ಎಂಬುದರ ಕುರಿತು ಅವಲೋಕಿಸಿದರೆ ತಿಳಿದು ಬಂದ ಮುಖ್ಯ ವಿಚಾರ ಗಂಡ ಹೆಂಡತಿ ‌ಇಬ್ಬರೂ ಮದ್ಯವ್ಯಸನಿಗಳು. ದಿನ ನಿತ್ಯ ದುಡಿಮೆಯ ದುಡ್ಡು ವೈನ್ ಶಾಪ್ ಗೆ ಹೋಗುತ್ತಿತ್ತು . ಇದರಿಂದಾಗಿ ಇವರ ಕಷ್ಟಕ್ಕೆ ನೆರವಾಗಲು ಯಾರೂ ಮುಂದೆ ಬಂದಿಲ್ಲ.

ಏನೇ ಇರಲಿ
ಒಬ್ಬ ವ್ಯಕ್ತಿ ದುಶ್ಚಟದ ದಾಸನಾಗಬೇಕಾದರೆ ಅವನಿಗೂ ಒಂದು ಚಿಂತೆ ಕಾಡುತ್ತಿರಲೂಬಹುದು. ಕುಡುಕನಾಗಲಿ ಅಥವಾ ‌ಮಾನಸಿಕನಾಗಿರಲಿ ಆತನ ಮನಸ್ಥಿತಿ ಬದಲಾಗಬೇಕಾದರು ದುಡಿದು ಬಂದು ನೆಮ್ಮದಿಯಿಂದ ಕೂರಲು ಒಂದು ಸುಸಜ್ಜಿತವಾದ ಮನೆ ಎಂಬುದು ಇದ್ದಾಗ ಮಾತ್ರ ಜೀವನದಲ್ಲಿ ಬದಲಾವಣೆ ಕಾಣಲು ಸಾದ್ಯವಿದೆ ಎಂಬುದು ಉಲ್ಲೇಖನೀಯ.

ಇಂತಹ ಕಷ್ಟದ ಬದುಕು ನಡೆಸುತ್ತಿರುವ ದಂಪತಿಯ ನೆರವಿಗೆ ಇದೀಗ ಸ್ಥಳೀಯ ವಾಗಿ ನಿರಂತರ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆಲೆಟ್ಟಿಯ ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯದ ಯುವಕರು ಮುಂದಾದವರು.
ಸುಮಾರು 15 ರಿಂದ 20 ಮಂದಿ ಯುವಕರು ಕಟ್ಡೆಕ್ಕಳ ಎಂಬಲ್ಲಿರುವ ಪದ್ಮನಾಭ ನಾಯ್ಕ ರವರ ಮನೆಯ ದುರಸ್ತಿ ಕಾರ್ಯವನ್ನು ಅಂದಾಜು ಸುಮಾರು 40-50 ಸಾವಿರ ವೆಚ್ಚದಲ್ಲಿ ಯುವಕರ ಶ್ರಮ ಸೇವೆಯೊಂದಿಗೆ ಒಂದೇ ದಿನದಲ್ಲಿ ಮಾಡಿ ಮುಗಿಸಿದ್ದಾರೆ.
ಮನೆಯ ಮೇಲ್ಛಾವಣಿಗೆ ಕಬ್ಬಿಣದ ಸಲಕರಣೆ ಬಳಸಿ ಶೀಟ್ ಅಳವಡಿಸಿ, ಗೋಡೆಯ ಬದಲಾಗಿ ಸಿಮೆಂಟ್ ಶೀಟ್ ಬಳಸಿಕೊಂಡು ನೆಲಕ್ಕೆ ಕಾಂಕ್ರೀಟ್ ಹಾಕಿದ್ದು
ಸ್ವಚ್ಛವಾದ ಶೌಚಾಲಯ ನಿರ್ಮಿಸಿಕೊಡುವುದರೊಂದಿಗೆ ಆಸರೆಯಾಗಿದ್ದಾರೆ. ಇನ್ನಾದರೂ ಈ ದಂಪತಿ ತನ್ನಲ್ಲಿರುವ ದುಶ್ಚಟವನ್ನು ತ್ಯಜಿಸಿ ಯುವಕರು ‌ನಿರ್ಮಿಸಿದ ಚಿಕ್ಕ ಚೊಕ್ಕದಾದ ಬೆಚ್ಚಗಿನ ಮನೆಯಲ್ಲಿ ಸುಂದರ ಬದುಕಿನತ್ತ ಸಾಗಲಿ.

ಜನನಿಯ ಯುವಕರ ಕಾರ್ಯಕ್ಕೆ ಸ್ಥಳೀಯ ಆಲೆಟ್ಟಿ ಗ್ರಾಮ ಪಂಚಾಯತ್ ಮತ್ತು ಸೇವಾ ಭಾರತಿ, ಮರಾಟಿ ಸಂಘ, ಲ್ಯಾಂಪ್ಸ್ ಸೊಸೈಟಿ ಹಾಗೂ ಸ್ಥಳೀಯ ಊರಿನ ದಾನಿಗಳು ಸಾಮಾಗ್ರಿಗಳನ್ನು ಒದಗಿಸಲು ಕೈಜೋಡಿಸಿದ್ದಾರೆ.
ಜನನಿ ತಂಡದ ಸೇವಾ ಕಾರ್ಯದಲ್ಲಿ ಇದು ಮೂರನೇಯ ಮನೆ ಯಾಗಿದ್ದು ನಿಸ್ವಾರ್ಥ ಸೇವಾ ಕಾರ್ಯಕ್ಕೆ ವ್ಯಾಪಕ ಶ್ಲಾಘನೇ ವ್ಯಕ್ತವಾಗಿದೆ‌.

ಅಶಕ್ತರನ್ನು ಸಶಕ್ತರನ್ನಾಗಿಸುವ ಕಾರ್ಯ ಮಾಡುವ ಭೂಮಿ( ಜನನಿ) ತಾಯಿಯ ಹೆಸರಿನ ಸಂಘದ ಯುವ ಮನಸ್ಸುಗಳಿಗೆ ನಿಮ್ಮ ಒಂದು ಮೆಚ್ಚುಗೆ ಇರಲಿ.