ಹಿಂದೂ ಸಂಘಟನೆಗಳ ಯುವಕರಿಬ್ಬರ ಬಂಧನ ವಿಚಾರ : ಪೋಲೀಸ್ ಠಾಣೆ ಎದುರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ

0

ತಪ್ಪೆಸಗದ ನಮ್ಮ ಕಾರ್ಯಕರ್ತರ ಬಂಧನ ಅಕ್ಷಮ್ಯ : ತಕ್ಷಣ ಬಿ ರಿಪೋರ್ಟ್ ಹಾಕುವಂತೆ ಒತ್ತಾಯ

ಪೋಲೀಸ್ ಪ್ರಕಾಶರು ತಪ್ಪೆಸಗಿದ್ದಾರೆ. ಅವರನ್ನು ಅಮಾನತು ಮಾಡಿ : ಆಗ್ರಹ

ಸೆ.23ರಂದು‌ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅನ್ಯಕೋಮಿನ ಯುವಕ ಅನುಚಿತವಾಗಿ ವರ್ತಿಸಿದನೆಂಬ ಕಾರಣಕ್ಕೆ ಆ ಯುವಕನಿಗೆ ಹಲ್ಲೆ ನಡೆಸಿದರೆಂಬ ಆರೋಪದಡಿಯಲ್ಲಿ ಇಬ್ಬರು ಹಿಂದೂ ಸಂಘಟನೆಯ ಯುವಕರನ್ನು ಸುಳ್ಯ ಪೋಲೀಸರು ಬಂಧಿಸಿರುವುದನ್ನು ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆಯವರು ಸುಳ್ಯ ಪೋಲೀಸ್ ಠಾಣೆಯ ಎದುರಿನ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಸುಳ್ಯ ಬಸ್ ನಿಲ್ದಾಣದಲ್ಲಿ ಸೇರಿದ ಹಿಂದೂ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಮೆರವಣಿಗೆಯ ಮೂಲಕ ಗಾಂಧಿನಗರ ಕಲ್ಕುಡ ದೈವಸ್ಥಾನಕ್ಕೆ ಹೋದರು.

ಅಲ್ಲಿ ವಿಶ್ವ ಹಿಂದೂ ಪರಿಷತ್ ಸಂಚಾಲಕ ಸೋಮಶೇಖರ ಪೈಕ ಹಾಗೂ ನ.ಪಂ. ಸದಸ್ಯ ವಿನಯ ಕುಮಾರ ಕಂದಡ್ಕರು “ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿದ ಅಧಿಕಾರಿಗಳಿಗೆ ದೈವವೇ ಶಿಕ್ಷೆ ನೀಡಬೇಕು” ಎಂದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಲ್ಲಿಂದ ಮೆರವಣಿಗೆಯಲ್ಲಿ ಸುಳ್ಯ ಪೋಲೀಸ್ ಠಾಣೆ ಎದುರು ಬರಲಾಯಿತು.

ಪೋಲೀಸ್ ಠಾಣೆಯ ಎದುರು ಸೇರಿದ ನಾಯಕರು ಹಾಗೂ ಎಬಿವಿಪಿ ಕಾರ್ಯಕರ್ತರು ಪೋಲೀಸರ ವಿರುದ್ದ ಘೋಷಣೆ ಕೂಗಿದರು. ಕಾರ್ಯಕರ್ತರು ಪೋಲೀಸ್ ಆವರಣ ಪ್ರವೇಶಿಸದಂತೆ ಪೋಲೀಸ್ ಠಾಣೆಯ ಗೇಟಿಗೆ ಪೋಲೀಸರು ಅಡ್ಡಲಾಗಿ ನಿಂತಿದ್ದರು.

ಕಾರ್ಯಕರ್ತರು ಠಾಣೆಯ ಎದುರಿನ ರಸ್ತೆಯಲ್ಲೇ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಹಿರಿಯರಾದ ಎ.ವಿ. ತೀರ್ಥರಾಮರು, “ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ಪೋಲೀಸರು ದೌರ್ಜನ್ಯ ನಡೆಸುವುದು ಹಿಂದಿನಿಂದಲೂ ನಡೆಯುತ್ತಿದೆ. ವಿನಾಕಾರಣ ಕೇಸು ಮಾಡುವ ಪೋಲೀಸರ ಕ್ರಮವನ್ನು ನಾವು ಖಂಡಿಸುವುದಾಗಿ ಹೇಳಿದರು. ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ನೀಡುವುದನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ ನಿನ್ನೆಯ ಘಟನೆಯಲ್ಲಿ ತಪ್ಪೇ ಮಾಡದ ನಮ್ಮ ಕಾರ್ಯಕರ್ತರ ಬಂಧನ ಅಕ್ಷಮ್ಯ. 307 ಸೆಕ್ಷನ್ ಹಾಕುವಂತದ್ದು ಏನೂ ಮಾಡಿಲ್ಲ. ಕಾಂಗ್ರೆಸ್ ಸರಕಾರದ ಒತ್ತಡಕ್ಕೆ ಮಣಿದು ಪೋಲೀಸ್ ಇಲಾಖೆ ಈ ರೀತಿ ಮಾಡಿದ್ದು, ಹಿಂದೂ ಸಮಾಜಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು” ಎಂದು‌ ಹೇಳಿದರು.

ಬಿಜೆಪಿ ಮಂಡಲ ಸಮಿತಿ‌ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ “ತಪ್ಪು ಮಾಡದ ನಮ್ಮ ಕಾರ್ಯಕರ್ತರ ಮೇಲೆ 307 ಹಾಕುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರಲ್ಲದೆ, ಸುಳ್ಯದ ಪೋಲೀಸ್ ಸಿಬ್ಬಂದಿ ಇಲ್ಲಿ ತಪ್ಪೆಸಗಿದ್ದಾರೆ. ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಕಾಶರು ಮರಳು ವಿಚಾರದಲ್ಲಿ ಹಣ ಪಡೆಯುತ್ತಾರೆ. ಮೊನ್ನೆ ದಿನ ಮರ್ಕಂಜದಲ್ಲಿ ಮರಳು ಕೊಂಡೊಯ್ಯುತ್ತಿದ್ದ ಪಿಕಪ್ ತಡೆದು 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ನವರ ಓಲೈಕೆಯಲ್ಲಿದ್ದಾರೆ ಎಂದರಲ್ಲದೆ ಪ್ರಕಾಶ್ ಎಂಬ ಸಿಬ್ಬಂದಿಯನ್ನು ವಾರದೊಳಗೆ ಅಮಾನತುಗೊಳಿಸಬೇಕು. ನಿನ್ನೆಯ ಘಟನೆಯಲ್ಲಿ ತಕ್ಷಣ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಹಾಕಬೇಕು ಎಂದು ಆಗ್ರಹಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ ‌ಮಾತನಾಡಿ, ” ಮನೆಯ ತಂಗಿ, ಅಕ್ಕ, ಪತ್ನಿಯ ಮೇಲೆ ಯಾರೋ ಒಬ್ಬ ಕೈ ಹಾಕಿದರೆ ತಕ್ಷಣಕ್ಕೆ ಏನು ಮಾಡುತ್ತೇವೆಯೋ ಅದನ್ನೇ ನಿನ್ನೆ ನಮ್ಮ ಕಾರ್ಯಕರ್ತರು ಮಾಡಿದ್ದಾರೆ. ಹಿಂದೂ ಹೆಣ್ಣು ‌ಮಗಳಿಗೆ ರಕ್ಷಣೆ ನೀಡಿದ್ದಾರೆ. ಇದನ್ನು ಅರಿತು ಕೂಡಾ ಪೋಲೀಸರು‌ ಕಾಂಗ್ರೆಸ್ ನವರ ಕೈಗೊಂಬೆಯಂತೆ ವರ್ತಿಸಿದ್ದಾರೆ. ಅಷ್ಟು ದೊಡ್ಡ ಭ್ರಷ್ಟಾಚಾರ ಮಾಡಿರುವ ಸಿದ್ಧರಾಮಯ್ಯರನ್ನು ಬಂಧಿಸಲು ಪೋಲೀಸರಿಂದ ಆಗಿಲ್ಲ ಯಾಕೆ ಎಂದು ಪ್ರಶ್ನಿಸಿದರಲ್ಲದೆ, ಇಲ್ಲಿಯ ಪ್ರಕಾಶ್ ಪೋಲೀಸ್ ನಿನ್ನೆಯ ಪ್ರಕರಣದಲ್ಲಿ ತಪ್ಪು‌ಮಾಡಿದ್ದಾರೆ. ಆ ರೀತಿ ತಪ್ಪು ಮಾಡುವವರು ನನ್ನ ಕ್ಷೇತ್ರದಲ್ಲಿರಬಾರದು ಅವರನ್ನು ಬೇರೆಕಡೆ ಎತ್ತಂಗಡಿ ಮಾಡಿ ಎಂದರು.

ಹಿಂದೂ‌ ನಾಯಕ‌ ನವೀನ್ ನೆರಿಯ ಮಾತನಾಡಿ, “ಹಿಂದೂ ಹೆಣ್ಣು‌ ಮಗಳಿಗೆ ತೊಂದರೆಯಾದರೆ ಹಿಂದೂ ಸಮಾಜ ಸುಮ್ಮನಿರುವುದಿಲ್ಲ. ಯಾರು ನಿನ್ನೆ ತಪ್ಪು ಮಾಡಿದ್ದಾನೋ ಅವನನ್ನು ಬಂಧಿಸಿ ಜೈಲಿಗಟ್ಟವೇಕು ಎಂದು ಹೇಳಿದರು.

ಭಜರಂಗದಳದ ಪ್ರಮುಖರಾದ ಹರಿಪ್ರಸಾದ್ ಎಲಿಮಲೆ ನಿನ್ನೆ ನಡೆದ ಘಟನೆ ಕುರಿತು ಮಾಹಿತಿ ನೀಡಿದರು.

ಪ್ರಮುಖರು ಮಾತನಾಡಿದ ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ಡಿವೈಎಸ್ ಪಿ ಅರುಣ್ ನಾಗೇಗೌಡರು, ನಿನ್ನೆ ನಡೆದ ಘಟನೆಯ ಕುರಿತು ಕೇಸು ದಾಖಲಾಗಿದೆ. ಆ ಕಡೆಯವನ ಮೇಲೂ ಕೇಸು ದಾಖಲಾಗಿದೆ. ನಾವು ತನಿಖೆ ನಡೆಸುತ್ತಿದ್ದೇವೆ. ನಿಮ್ಮ ಅಹವಾಲುಗಳನ್ನು ಆಲಿಸಿದ್ದು ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು‌ ಹೇಳಿದರು. ಈ ವೇಳೆ ರಕ್ಷಿತ್ ಎಂಬ ಯುವಕ ” ನಿನ್ನೆ ವರ್ಷಿತ್ ಹೊಡೆದಿಲ್ಲ. ಆತನನ್ನು ಸುಮ್ಮನೇ ಬಂಧಿಸಿದ್ದಾರೆ. ಪ್ರಕಾಶರು ವಿಡೀಯೋ ಇದೆಯೆಂದು ಹೇಳುತ್ತಾರಲ್ಲ ಅದನ್ನು ತೋರಿಸಲಿ” ಎಂದು ಆಕ್ರೋಶಗೊಂಡರು. ಆಗ ರಕ್ಷಿತ್ ರನ್ನು ಅಲ್ಲಿದ್ದ ನಾಯಕರು ಸಮಾಧಾನಿ ಮಾಡಿದರು.

ಬಳಿಕ ಪೋಲೀಸ್ ಅಧಿಕಾರಿಗಳು ತಾವು ನಾಯಕರು ಬಂದು ಮಾತನಾಡಿ, ಪ್ರತಿಭಟನೆ ಕೈ ಬಿಡಿ ಎಂದು ಹೇಳಿದರು. ಬಳಿಕ ನವೀನ್ ಎಲಿಮಲೆ ಧನ್ಯವಾದ ಮಾಡಿದರು.

ಶಾಸಕಿ ಭಾಗೀರಥಿ ಮುರುಳ್ಯ, ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ ಸೇರಿದಂತೆ ನಾಯಕರು ಠಾಣೆಗೆ ತೆರಳಿದರು.

ಪ್ರತಿಭಟನಾ ಸಂದರ್ಭ ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯರು ಗಳಾದ ಶೀಲಾ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಸುಭೋದ್ ಶೆಟ್ಟಿ ಮೇನಾಲ, ಸಂತೋಷ್ ಕುತ್ತಮೊಟ್ಟೆ, ವಿಕ್ರಮ ಅಡ್ಪಂಗಾಯ, ಎ.ಟಿ. ಕುಸುಮಾಧರ, ಜಗನ್ನಾಥ ಜಯನಗರ, ನಾರಾಯಣ ಶಾಂತಿನಗರ, ಮಹೇಶ ಉಗ್ರಾಣಿಮನೆ, ದಯಾನಂದ ಕುರುಂಜಿ, ಕೇಶವ ಬನ, ಪಿ.ಕೆ. ಉಮೇಶ್, ಹೇಮಂತ್ ಕಂದಡ್ಕ, ಗಣೇಶ ಪಿಲಿಕಜೆ, ಪ್ರಭೋದ್ ಶೆಟ್ಟಿ ಮೇನಾಲ, ಪ್ರಕಾಶ್ ಯಾದವ್, ಅವಿನಾಶ್ ಕುರುಂಜಿ, ರಾಜೇಶ ಕಿರಿಭಾಗ, ಲತೀಶ್ ಗುಂಡ್ಯ, ನವೀನ್ ಎಲಿಮಲೆ, ರಕ್ಷಿತ್, ಶಿವ ಪೂಜಾರಿ, ನಿಕೇಶ್ ಉಬರಡ್ಕ, ರೂಪೇಶ್ ಪೂಜಾರಿಮನೆ, ಪ್ರಶಾಂತ್ ಕಾಯರ್ತೋಡಿ, ರಾಜೇಶ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ, ಸುರೇಶ್ ಕಣೆಮರಡ್ಕ, ದೇವಿಪ್ರಸಾದ್ ಅತ್ಯಾಡಿ, ಭಾನುಪ್ರಕಾಶ್ ದೊಡ್ಡತೋಟ, ಮನೋಜ್ ಮಾರುತಿ, ಕೌಶಲ್ ಸುಳ್ಯ, ನ.ಪಂ.‌ಸದಸ್ಯೆ ಕಿಶೋರಿ ಶೇಟ್, ದುರ್ಗಾವಾಹಿನಿಯ ಪ್ರೀತಿಕಾ, ಎ.ಬಿ.ವಿ.ಪಿ. ಯವರು ಸೇರಿದಂತೆ ನೂರಾರು ಮಂದಿ ಇದ್ದರು.