ಮೃತ ಮನೋಹರ್ ರೈ ಕುಟುಂಬಿಕರು ಭಾಗಿ
ಸುಳ್ಯ ಪರಿವಾರಕಾನದಲ್ಲಿ ಕಲ್ಲುಮುಟ್ಲು ಕಡೆಗೆ ಹೋಗುವ ರಸ್ತೆ ಬದಿ ನಿಲ್ಲಿಸಲ್ಪಟ್ಟಿದ್ದ ಓಮ್ನಿ ಕಾರಿನಲ್ಲಿ ಸೆ. 23 ರಂದು ಸಂಜೆ ಪತ್ತೆಯಾದ ಕಲ್ಲುಮುಟ್ಲು ನಿವಾಸಿ ಮನೋಹರ್ ರೈ ಯವರ ಕೊಳೆತ ಸ್ಥಿತಿಯ ಮೃತ ದೇಹದ ಅಂತ್ಯಕ್ರಿಯೆ ಇಂದು ಕೊಡಿಯಾಲಬೈಲು ರುದ್ರಭೂಮಿ ವಿಮುಕ್ತಿಧಾಮದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು.
ನಿನ್ನೆ ರಾತ್ರಿ ಸುಮಾರು 9 ಘಂಟೆಗೆ ಪೊಲೀಸರು ಸ್ಥಳದ ಮತ್ತು ಕಾರಿನ ಬಳಿ ಪರಿಸರದ ಪಂಚನಾಮೆ ಕಾರ್ಯ ನಡೆಸಿದ ಬಳಿಕ ಮೃತ ದೇಹವನ್ನು ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ಅಚ್ಚು ಪ್ರಗತಿ ಯವರ ಆಂಬುಲೆನ್ಸ್ ನಲ್ಲಿ ತರಲಾಗಿತ್ತು.
ಬಳಿಕ ಅಲ್ಲಿ ಮೃತ ದೇಹವನ್ನು ಪರಿಶೀಲನೆ ನಡೆಸಿದಾಗ ದೇಹದಲ್ಲಿದ್ದ ಬಟ್ಟೆಯಲ್ಲಿ ಲಭಿಸಿದ ದಾಖಲೆ ಪತ್ರದ ಮೂಲಕ ಆ ವ್ಯಕ್ತಿ ಸುಳ್ಯ ಕಲ್ಲುಮುಟ್ಲು ನಿವಾಸಿ ಮನೋಹರ್ ರೈ ಎಂದು ಗೊತ್ತಾಗಿದ್ದು, ನಂತರ ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು.
ಅದರಂತೆ ಮೃತರ ಪತ್ನಿ, ಹಾಗೂ ಸಹೋದರ, ಹಾಗೂ ಕುಟುಂಬದ ಇನ್ನಿತರ ಸದಸ್ಯರುಗಳು ಇಂದು ಸುಳ್ಯಕ್ಕೆ ಬಂದು ಅವರನ್ನು ಗುರುತಿಸಿದ ಬಳಿಕ ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಪೋಸ್ಟ್ ಮಾರ್ಟಂ ನಡೆದು ಬಳಿಕ ಪೊಲೀಸರು ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ನಂತರ ಕೊಡಿಯಾಲಬೈಲು ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಕ್ರಿಯೆಯನ್ನು ಮಾಡಲಾಯಿತು.
ಮನೋಹರ್ ಮೂಲತ: ಸುಳ್ಯ ಕಲ್ಲುಮುಟ್ಲು ನಿವಾಸಿ ರಾಜೀವಿ ಎಸ್. ರೈ ಯವರ ಪುತ್ರರಾಗಿದ್ದು , ಕೂಲಿ ಕೆಲಸ ಮಾಡಿಕೊಂಡು ಕಲ್ಲುಮುಟ್ಲು ಮನೆಯಲ್ಲಿಯೇ ವಾಸವಿದ್ದರು.
ಅವರ ತಂದೆ ಕೆಲವು ವರ್ಷಗಳ ಹಿಂದೇ ನಿಧನರಾಗಿದ್ದು ಮನೆಯಲ್ಲಿ ತಾಯಿ ಯೊಂದಿಗೆ ಅವರು ವಾಸವಾಗಿದ್ದರು.
ಸುಮಾರು 12 ವರ್ಷಗಳ ಹಿಂದೆ ಕಲ್ಮಡ್ಕ ಗ್ರಾಮದ ಮರಕ್ಕಡ ಮೂಲದ ವಿದ್ಯಾ ರೈ ಎಂಬವರೊಂದಿಗೆ ವಿವಾಹವಾಗಿದ್ದ ಇವರಿಗೆ ಇಬ್ಬರು ಅವಳಿ ಜವಳಿ ಹೆಣ್ಣು ಮಕ್ಕಳು ಇದ್ದಾರೆ.
ಪತ್ನಿ ಮತ್ತು ಮಕ್ಕಳು ಕಳೆದ 10 ವರ್ಷದಿಂದ ಅವರ ತಾಯಿ ಮನೆ ಕಲ್ಮಡ್ಕದಲ್ಲಿಯೇ ವಾಸವಿದ್ದು, ಮಕ್ಕಳು ಆರ್ವಿ ಮತ್ತು ಅಶ್ವಿ ಯವರು ಬೆಳ್ಳಾರೆ ಕೆ ಪಿ ಎಸ್ ನಲ್ಲಿ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.
ಪತ್ನಿ ವಿದ್ಯಾ ರೈ ಬೆಳ್ಳಾರೆ ಬ್ಯಾಂಕ್ ಒಂದರಲ್ಲಿ ಕ್ಲರ್ಕ್ ಆಗಿ ಕೆಲಸ ಸಲ್ಲಿಸುತ್ತಿದ್ದಾರೆ.
ಗಂಡನ ಮನೆ ಕಲ್ಲುಮುಟ್ಲು ಪರಿಸರ ಗುಡ್ಡ ಪ್ರದೇಶದಲ್ಲಿದ್ದು ಮಕ್ಕಳಿಗೆ ಸಮಸ್ಯೆ ಆಗುತ್ತಿದೆ ಎಂಬ ಕಾರಣಕ್ಕಾಗಿ ವಿದ್ಯಾ ರೈ ಯವರು ಅವರ ತಾಯಿ ಮನೆ ಕಲ್ಮಡ್ಕದಲ್ಲಿಯೇ ಕಳೆದ 10 ವರ್ಷದಿಂದ ಇದ್ದರು ಎಂದು ಅವರ ಕುಟುಂಬದ ಸದಸ್ಯರು ಸುದ್ದಿಗೆ ತಿಳಿಸಿದ್ದಾರೆ.
ಆದರೂ ಮನೋಹರ್ ರವರ ಪತ್ನಿ ಮತ್ತು ಮಕ್ಕಳು ಆಗಾಗ ಸುಳ್ಯ ಕಲ್ಲುಮುಟ್ಲು ಗಂಡನ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ.
ಅವರ ಸಹೋದರ ಮಂಗಳೂರಿನಲ್ಲಿ ನೆಲೆಸಿದ್ದು ಮನೆಯಲ್ಲಿ ತಾಯಿ ಮಾತ್ರ ಇದ್ದರು. ಆದ್ದರಿಂದ ಇವರು ಮನೆಗೆ ಬಾರದೆ ಇದ್ದರೆ ಇವರನ್ನು ಹುಡುಕುವವರು ಯಾರು ಕೂಡ ಇರಲಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಮನೋಹರ್ ರವರು ಮದ್ಯಪಾನ ಹೆಚ್ಚು ಮಾಡುತಿದ್ದು ಇದೇ ಕಾರಣದಿಂದ ಪತ್ನಿ ಮತ್ತು ಮಕ್ಕಳು ಸ್ವಲ್ಪ ದೂರವಾಗಿದ್ದರು ಎಂದು ಕೂಡ ಹೇಳಲಾಗುತ್ತಿದೆ.
ಅತಿಯಾದ ಕುಡಿತದಿಂದಲೇ ಅವರು ಇದೀಗ ಮೃತ ಪಟ್ಟಿರಬಹುದು ಎಂದು ಊಹಿಸಲಾಗಿದೆ.
ಆದರೆ ಸಾವಿಗೆ ನಿಜವಾದ ಕಾರಣ ಏನು ಎಂಬುವುದು ಪೋಸ್ಟ್ಮಾಟಂ ರಿಪೋರ್ಟ್ ಬಂದ ಬಳಿಕವೇ ತಿಳಿಯ ಬಹುದಾಗಿದೆ.
ಆರಂಭದಿಂದ ಅಂತ್ಯದ ವರೆಗೂ ಸಂಪೂರ್ಣ ಸಹಕಾರ ನೀಡಿದ ಅಚ್ಚು ಪ್ರಗತಿ ಮತ್ತು ಅಭಿಲಾಷ್
ನಿನ್ನೆ ಸಂಜೆ ಓಮ್ನಿಯೊಳಗೆ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಇರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಪ್ರಗತಿ ಆಂಬುಲೆನ್ಸ್ ನ ಅಚ್ಚು ಹಾಗೂ ಅಭಿಲಾಷ್ ರವರು ನಿನ್ನೆ ಮತ್ತು ಇಂದು ಪೂರ್ಣ ವಾಗಿ ಪೊಲೀಸರೊಂದಿಗೆ ಸೇರಿಕೊಂಡು, ಕೊಳೆತು ನಾರುತ್ತಿದ್ದ ಮೃತದೇಹವನ್ನು ವಾಹನದಿಂದ ಹೊರ ತೆಗೆಯಲು ಮತ್ತು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ಓಮ್ನಿ ಕಾರು ಸ್ನೇಹ ಶಾಲೆಯ ಪಕ್ಕದಲ್ಲಿರುವ ವಿಶ್ವನಾಥ ಎಂಬವರದೆನ್ನಲಾಗಿದ್ದು ಮಂಗಳೂರಲ್ಲಿರುವ ಅವರ ಮಗ ಊರಿಗೆ ಬಂದಾಗ ಮಾತ್ರ ಅದನ್ನು ಚಲಾಯಿಸುತ್ತಿದ್ದರು. ಇತ್ತೀಚೆಗೆ ಹತ್ತು ಹದಿನೈದು ದಿನಗಳಿಂದ ಅದು ನಿಲ್ಲಿಸಿದಲ್ಲೆ ಇತ್ತು. ನಾಲ್ಕಾರು ದಿನಗಳ ಹಿಂದೆ ಮನೋಹರ ರೈ ಈ ಓಮ್ನಿ ಯೊಳಗೆ ಪ್ರವೇಶಿಸಿ ಮಲಗಿದಲ್ಲೆ ಕೊನೆಯುಸಿರೆಳೆದಿರಬೇಕೆಂದು ಹೇಳಲಾಗುತ್ತಿದೆ.
ಮತ್ತೆ ಇಂದು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನಡೆದ ಪೋಸ್ಟ್ಮಾಟಂ ಸಮಯದಲ್ಲಿಯೂ ಕೂಡ ಅಲ್ಲಿ ನಿಂತು,ಬಳಿಕ ರುದ್ರಭೂಮಿಗೆ ತಲುಪಿಸಿ ಅಂತ್ಯಕ್ರಿಯೆ ಮಾಡುವಲ್ಲಿ ಪೂರ್ಣ ಸಹಕಾರ ನೀಡಿ ಆಪತ್ಭಾಂಧವರಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.