ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ, ಯುವಕನ ಮೇಲೆ ಗುಂಪು ಹಲ್ಲೆ ಇವೆರಡೂ ಕೂಡ ಖಂಡನೀಯ

0

ಪೊಲೀಸರು ನಡೆಸಿದ ಕ್ರಮ ಮತ್ತು ಜವಾಬ್ದಾರಿ ಶ್ಲಾಘನೀಯ: ಬ್ಲಾಕ್ ಕಾಂಗ್ರೆಸ್

ಕಳೆದ ಎರಡು ದಿನಗಳ ಹಿಂದೆ ಸುಳ್ಯದ ಕಾಲೇಜಿಗೆ ಬಸ್ಸಿನಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಗೆ ಅದೇ ಬಸ್ಸಿನಲ್ಲಿದ್ದ ಯುವಕನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಕೃತ್ಯ ಬಹಳ ಖಂಡನೀಯವಾಗಿದೆ. ಅದೇ ರೀತಿ ದೌರ್ಜನ್ಯ ಎಸಗಿರುವ ಯುವಕನ ಮೇಲೆ ಸುಳ್ಯದಲ್ಲಿ ಗುಂಪು ಹಲ್ಲೆ ನಡೆಸಿರುವುದು ಕೂಡ ಅಷ್ಟೇ ಖಂಡನೀಯವಾಗಿದೆ.
ಈ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡಿದೆ. ತಪ್ಪು ಮಾಡಿದವರು ಯಾರೇ ಆಗಿರಲಿ ಅವರಿಗೆ ಶಿಕ್ಷೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಸುಳ್ಯದಲ್ಲಿ ಸೆ. ೨೮ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಸಮಾಜದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನು ವ್ಯವಸ್ಥೆ ಇದೆ.ಮೊನ್ನೆ ನಡೆದಿರುವ ಘಟನೆಯನ್ನು ಯಾವುದೇ ರೀತಿಯಲ್ಲಿ ಒಪ್ಪಿ ಕೊಳ್ಳಲು ಸಾಧ್ಯವಿಲ್ಲ.
ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ. ಆದರೆ ಜವಾಬ್ದಾರಿಯುತ ವಾಗಿ ಕೆಲಸ ಮಾಡಿರುವ ಪೊಲೀಸರ ವಿರುದ್ದ ಕೆಲವು ಸಂಘಟನೆಗಳು ಮತ್ತು ಬಿ ಜೆ ಪಿ ನಾಯಕರುಗಳು ಠಾಣೆ ಮುಂಭಾಗ ಪ್ರತಿಭಟನೆ ಮಾಡಿ ಪೊಲೀಸರ ದೈರ್ಯ ಕುಗ್ಗಿಸುವ ಕೆಲಸ ಮಾಡಿರುವುದು ಸರಿಯಲ್ಲ.
ಅಲ್ಲದೆ ಕಾಲೇಜ್ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ತಂದು ಅವರಿಂದ ಪೊಲೀಸ್ ಇಲಾಖೆಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದಿಕ್ಕಾರ ಕೂಗಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದರು.


ವಿದ್ಯಾರ್ಥಿಗಳ ಭವಿಷ್ಯವನ್ನು ರಾಜಕೀಯಕ್ಕೆ ಬಳಸಿಕೊಂಡು ಅವರಲ್ಲಿ ದ್ವೇಷ ಮೂಡಿಸುವುದು ಸರಿಯಲ್ಲ ಎಂದು ಹೇಳಿದರು.


ವಿದ್ಯಾರ್ಥಿನಿಗೆ ದೌರ್ಜನ್ಯ ಎಸಗಿದ ಯುವಕನಿಗೆ ರಕ್ಷಣೆ ಮತ್ತು ಕೇರಳ ಆಸ್ಪತ್ರೆಗೆ ಕೊಂಡೊಯ್ಯಲು ಕಾಂಗ್ರೆಸ್ ಮುಖಂಡರು ಸಹಕರಿಸಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಗೂ ಆ ಯುವಕನಿಗೂ ಯಾವುದೇ ಸಂಭಂದವಿಲ್ಲ. ಯುವಕನ ಸಮುದಾಯದವರು ಯಾರಾದರು ಮಾಡಿರಬಹುದು. ಅದು ಕೂಡ ನಮಗೆ ಗೊತ್ತಿಲ್ಲ. ಹಾಗೇನಾದರು ಮಾಡಿದ್ದರೆ ಅದೂ ಕೂಡ ತಪ್ಪೇ. ಏಕೆಂದರೆ ಯಾವುದೇ ಹೆಣ್ಣು ಮಗಳಿಗೆ ತೊಂದರೆ ನೀಡಿದರೆ ಅಂತವರನ್ನು ರಕ್ಷಣೆ ಮಾಡುವುದು ಸರಿಯಲ್ಲ. ಅದೇ ರೀತಿ ಯಾರೇ ತಪ್ಪು ಮಾಡಿದ್ದರು ಅವರನ್ನು ಶಿಕ್ಷಿಸುವ ಅಧಿಕಾರವೂ ನಮಗೆ ಇಲ್ಲ. ಅದಕ್ಕೆ ಇಲಾಖೆ ಇದೆ. ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಈ ವೇಳೆ ಕಸ್ತೂರಿ ರಂಗನ್ ವರದಿ ಬಗ್ಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಕಸ್ತೂರಿರಂಗನ್ ವರದಿ ತಿರಸ್ಕರಿಸಿರುವುದು ಸ್ವಾಗತಾರ್ಹವಾಗಿದೆ.


ಅಂದು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದವರು ಈಗ ಕೇಂದ್ರ ಸರಕಾರಕ್ಕೆ ಒತ್ತಡ ತರುವ ಕೆಲಸ ಮಾಡಿ ಅಲ್ಲಿಯೂ ವರದಿಯನ್ನು ತಿರಸ್ಕಾರ ಮಾಡುವ ಕೆಲಸ ಮಾಡಲಿ. ಸಂಸದರ ಮೂಲಕ ಮುಂದಿನ ಕೆಲಸ ಕಾರ್ಯ ಮಾಡಲಿ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಧನಂಜಯ ಅಡ್ಪಂಗಾಯ, ಎಂ ವೆಂಕಪ್ಪ ಗೌಡ, ಎನ್ ಜಯಪ್ರಕಾಶ್ ರೈ, ಪಿ ಎಸ್ ಗಂಗಾಧರ್, ಕೆ ಗೋಕುಲ್ ದಾಸ್, ಸುರೇಶ್ ಅಮೈ ನಂದರಾಜ್ ಸಂಕೇಶ್,ಭವಾನಿ ಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.