ರಬ್ಬರ್ ತೋಟದ ಲೀಸ್ ವಿವಾದ ಮುಗಿದರೂ ಮುಗಿಯದ ಬೆಂಕಿ ಪ್ರಕರಣ
ಕೃಷಿಕರೊಬ್ಬರ ಮನೆಯಲ್ಲಿರುವ ರಬ್ಬರ್ ಸ್ಮೋಕ್ ಹೌಸ್ ಗೆ ಒಂದು ದಿನ ಬೆಂಕಿ ಬೀಳುತ್ತದೆ. ಸ್ಮೋಕ್ ಹೌಸ್ ಸುಟ್ಟು ಹೋಗಿ ಸಾವಿರಾರು ರೂ. ನಷ್ಟವಾಗುತ್ತದೆ. ಆ ಕೃಷಿಕರು ಪೋಲೀಸರಿಗೆ ದೂರು ನೀಡಿ ಸ್ಮೋಕ್ ಹೌಸ್ ಹೊತ್ತಿ ಉರಿಯಲು ಕಾರಣ ಏನು ಎಂದು ತನಿಖೆ ಮಾಡಿ ಎಂದು ಕೇಳಿಕೊಳ್ತಾರೆ. ಅದೇ ರೀತಿ ಆ ಸ್ಮೋಕ್ ಹೌಸ್ ಅನ್ನು ಉಪಯೋಗಿಸುತ್ತಿದ್ದ ವ್ಯಕ್ತಿ ಕೂಡ ‘ ಸ್ಮೋಕ್ ಹೌಸ್ ಗೆ ಬೆಂಕಿ ಬಿದ್ದಿರುವ ಬಗ್ಗೆ ತನಿಖೆ ನಡೆಸಬೇಕೆಂದು ಪೋಲೀಸರನ್ನು ಕೇಳಿಕೊಳ್ತಾರೆ. ಆದರೆ ಇದುವರೆಗೆ ತನಿಖೆ ನಡೆದು ಸತ್ಯ ಹೊರಗೆ ಬಂದ ಕುರುಹು ಕಾಣುತ್ತಿಲ್ಲ.
ಇದು ಎಲ್ಲಿ ಎಂದು ಕುತೂಹಲಗೊಂಡಿದ್ದೀರಾ ? ಹೆಚ್ಚು ದೂರ ಹೋಗಬೇಕಾಗಿಲ್ಲ. ಇಲ್ಲೇ ಸಮೀಪದ ಪಂಜದ ಬಳಿಯ ಘಟನೆ ಇದು.
ಪಂಜ ಸಮೀಪದ ಕರಿಕ್ಕಳದ ಯಶೋದಮ್ಮರವರ ತೋಟದಲ್ಲಿರುವ ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ಬಿದ್ದು ಮೂರೂವರೆ ತಿಂಗಳು ಕಳೆದಿದೆ. ಆ ಬಗ್ಗೆ ಪೋಲೀಸ್ ಠಾಣೆಗೆ ಎರಡು ಕಡೆಯಿಂದ ದೂರು ಹೋಗಿದೆ. ಆದರೆ ಇದುವರೆಗೆ ತನಿಖೆ ಆಗಿಲ್ಲ.
ಯಶೋದಮ್ಮ ತಮ್ಮ ರಬ್ಬರ್ ತೋಟದ ಟ್ಯಾಪಿಂಗನ್ನು ಕೇರಳದ ವ್ಯಕ್ತಿಯೊಬ್ಬರಿಗೆ ಲೀಸಿಗೆ ಕೊಟ್ಟಿದ್ದರು. ಆದರೆ ಕೆಲ ತಿಂಗಳಲ್ಲೆ ಆ ವ್ಯಕ್ತಿ ತನ್ನ ತೋಟ ಹಾಳು ಮಾಡಬಹುದು ಎಂಬ ಅನುಮಾನ ಶುರುವಾದ ಕಾರಣ ಟ್ಯಾಪಿಂಗ್ ನಿಲ್ಲಿಸಲು ಯಶೋದಮ್ಮ ಸೂಚನೆ ಕೊಡುತ್ತಾರೆ. ಇದನ್ನು ವಿರೋಧಿಸಿ ರಬ್ಬರ್ ತೋಟವನ್ನು ಲೀಸಿಗೆ ಪಡೆದ ವ್ಯಕ್ತಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಈ ನಡುವೆ ತೋಟ ಲೀಸ್ ಗೆ ಪಡೆದಿದ್ದ ವ್ಯಕ್ತಿ ಉಪಯೋಗಿಸುತ್ತಿದ್ದ ಯಶೋದಮ್ಮನವರ ಸ್ಮೋಕ್ ಹೌಸ್ ಗೆ ಬೆಂಕಿ ಬೀಳುತ್ತದೆ. ಈ ಘಟನೆಗೆ ಲೀಸಿಗೆ ಪಡೆದ ವ್ಯಕ್ತಿಯೇ ಕಾರಣ ಎಂದು ಯಶೋದಮ್ಮ ಅನುಮಾನಗೊಂಡು ಮೊಮ್ಮಗನ ಮೂಲಕ ಸುಬ್ರಹ್ಮಣ್ಯ ಪೋಲೀಸರಿಗೆ ದೂರು ಕೊಟ್ಟುಕಳಿಸ್ತಾರೆ. ಆದರೆ ಆ ವೇಳೆಗೆ ತೋಟ ಲೀಸಿಗೆ ಪಡೆದ ವ್ಯಕ್ತಿ ಸುಬ್ರಹ್ಮಣ್ಯ ಪೋಲಿಸ್ ಠಾಣೆಗೆ ಹೋಗಿ, ಸ್ಮೋಕ್ ಹೌಸ್ ಗೆ ಅವರೇ ಬೆಂಕಿ ಕೊಡಿಸಿಕೊಂಡು, ಅದನ್ನು ನನ್ನ ತಲೆಗೆ ಕಟ್ಟಲು ನೋಡುತ್ತಿದ್ದಾರೆ’ ಎಂದು ದೂರು ತೋಟದ ಮಾಲಕರ ಮೇಲೆಯೇ ದೂರು ನೀಡಿದ್ದರೆನ್ನಲಾಗಿದೆ.
ತೋಟದ ಮಾಲಕರು ಮತ್ತು ಲೀಸಿಗೆ ಪಡೆದ ವ್ಯಕ್ತಿಯ ಮಧ್ಯೆ ತಕರಾರು ಇರುವುದರಿಂದ ಅವರ ಲೀಸ್ ವಿವಾದ ಪರಿಹರಿಸಿದರೆ ಸ್ಮೋಕ್ ಹೌಸ್ ಸುಟ್ಟು ಹೋದ ವಿಷಯ ಪರಿಹಾರವಾಗುತ್ತದೆ ಎಂದು ಭಾವಿಸಿದ ಪೋಲೀಸರು ಸಿವಿಲ್ ವ್ಯಾಜ್ಯವನ್ನು ಇತ್ಯರ್ಥಪಡಿಸಲು ಆಸಕ್ತಿ ವಹಿಸುತ್ತಾರೆ. ಬೆಂಕಿ ಬಿದ್ದ ಕ್ರಿಮಿನಲ್ ಪ್ರಕರಣದ ತನಿಖೆ ಪೆಂಡಿಂಗ್ ಉಳಿಯುತ್ತದೆ.
ಈ ವಿವಾದ ಸುಲಭದಲ್ಲಿ ಬಗೆಹರಿಯುವುದಿಲ್ಲ ಎಂಬ ವಾತಾವರಣ ಉಂಟಾದಾಗ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್ ರವರು ಮಧ್ಯಪ್ರವೇಶಿಸಿ ಮಾತುಕತೆ ನಡೆಸಿ ತೋಟ ಲೀಸಿಗೆ ಪಡೆದಾತನಿಗೂ ತೋಟದ ಮಾಲಕಿಯಾದ ಯಶೋದಮ್ಮರವರಿಗೂ ಇದ್ದ ವಿವಾದ ಮಾತುಕತೆಯಲ್ಲಿ ಇತ್ಯರ್ಥಗೊಳಿಸುತ್ತಾರೆ. ಪರಿಣಾಮವಾಗಿ ವ್ಯವಹಾರ ಇತ್ಯರ್ಥ ಪಡಿಸಿಕೊಂಡು ಲೀಸಿಗೆ ಪಡೆದಾತ ಕರಿಕ್ಕಳ ಬಿಟ್ಟು ಹೋಗುತ್ತಾರೆ.
ಆದರೆ ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ಬಿದ್ದ ಪ್ರಕರಣದ ಸತ್ಯ ತಿಳಿಯದೆ, ತನಿಖೆಯೂ ಆಗದೆ ಹಾಗೇ ಉಳಿದಿದೆ.
” ನಾನು ನಡೆದಾಡಲು ಸಾಧ್ಯವಾಗದೆ ಮನೆಯಲ್ಲೆ ಇರುವ ಮಹಿಳೆ. ನನ್ನ ದೂರನ್ನು ಪೋಲೀಸರು ಇಷ್ಟು ಲೈಟಾಗಿ ತೆಗೆದುಕೊಂಡರೆ, ನಾಳೆ ಯಾರಾದರೂ ಬಂದು ನನ್ನ ಪ್ರಾಣಕ್ಕೆ ಏನಾದರೂ ತೊಂದರೆ ಮಾಡಿದರೆ ಕೂಡ ಪೋಲೀಸರು ಇದೇ ರೀತಿ ಮಾಡುತ್ತಾರೆಯೇ ?*
– ಯಶೋದಮ್ಮ, ಕರಿಕ್ಕಳ