ನಗರದ ವಾರ್ಡ್ ಸಮಿತಿಗೆ ಆಯಾ ದಿನದ ಜವಾಬ್ದಾರಿ ಹಂಚಿಕೆ
ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ ಸಮೂಹ ಸಮಿತಿ ಹಾಗೂ ನಗರದ ವಾರ್ಡ್ ಸಮಿತಿ ಪದಾಧಿಕಾರಿಗಳ ಪೂರ್ವಭಾವಿ ಸಭೆಯು ಶ್ರೀ ಚೆನ್ನಕೇಶವ ದೇವಳದ ಮುಂಭಾಗದಲ್ಲಿರುವ ಶಾರದಾಂಬ ಚಪ್ಪರದ ಅಡಿಯಲ್ಲಿ ಅ.6ರಂದು ನಡೆಯಿತು.
ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಅವರು ಮಾತನಾಡಿ ಅ.9ರಂದು ಬೆಳಿಗ್ಗೆ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಶ್ರೀ ಶಾರದಾಂಬ ವಿಗ್ರಹದ ಮೆರವಣಿ, ಪ್ರತಿಷ್ಠೆ, ಅಪರಾಹ್ನ ಕುಣಿತ ಭಜನೆಯೊಂದಿಗೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ಸಂಜೆ ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉಧ್ಘಾಟನೆ ಹಾಗೂ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮ, ಸಂಗೀತ ರಸ ಮಂಜರಿ ಹಾಗೂ ಅಂತಿಮ ದಿನದ ಅದ್ಧೂರಿ ಶೋಭಾಯಾತ್ರೆಯ ಕುರಿತು ವಿವರಿಸಿ, ಸುಳ್ಯ ನಗರದ ಆಯಾ ವಾರ್ಡ್ ಸಮಿತಿಗೆ ಒಂಭತ್ತು ದಿನದ ಕಾರ್ಯಕ್ರಮಗಳ ಜವಾಬ್ದಾರಿ ಹಂಚಿಕೆ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ಶಾರದಾಂಬ ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಅಧ್ಯಕ್ಷ ಡಾ. ಡಿ.ವಿ. ಲೀಲಾಧರ್, ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಕುಲ್ ದಾಸ್, ಅಧ್ಯಕ್ಷ ನಾರಾಯಣ ಕೇಕಡ್ಕ, ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಂದರ್ ನಾಯ್ಕ್, ದಸರಾ ಸಮೂಹ ಸಮಿತಿಯ ಪದಾಧಿಕಾರಿಗಳು, ನಗರದ ವಾರ್ಡ್ ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.