ಇಂದು ಸಂಜೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ
ಗುರುಕಿರಣ್ – ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಡಾ. ಆರ್.ಕೆ. ನಾಯರ್ ಉಪಸ್ಥಿತಿ
ಗುರುಕಿರಣ್ ಉಪಸ್ಥಿತಿಯಲ್ಲಿ ರಾತ್ರಿ ಅದ್ಧೂರಿ ಸಂಗೀತ ಸೌರಭ
ಇಂದು ಸಂಜೆಯಿಂದ ರಥಬೀದಿಯಲ್ಲಿ ವಾಹನ ಸಂಚಾರ ನಿಷೇಧ
ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ -2024 ಇಂದು ಸಂಜೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಗೀತ ನಿರ್ದೇಶಕ ಗುರುಕಿರಣ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ. ಆರ್.ಕೆ. ನಾಯರ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಸಾಂಕೇತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ಬಳಿಕ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಉಪಸ್ಥಿತಿಯಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕ ಸರಿಗಮಪ ಸೀಸನ್ 20 ವಿಜೇತ ದರ್ಶನ್ ನಾರಾಯಣ್ ನೇತೃತ್ವದಲ್ಲಿ ಸ್ಟಾರ್ ಸಿಂಗರ್ ಜಸ್ಮರಣ್ ಸಿಂಗ್, ಅಮಿಶ್ ಕುಮಾರ್, ಶಿವಾನಿ ನವೀನ್, ಐಶ್ವರ್ಯ ರಂಗರಾಜನ್ ಮತ್ತು ಅರ್ಫಾಜ್ ಉಲ್ಲಾಳ್ ಮೊದಲಾದ ಜನಪ್ರಿಯ ಗಾಯಕರೊಂದಿಗೆ ಅದ್ಧೂರಿ ಸಂಗೀತ ರಸಮಂಜರಿ ‘ಸಂಗೀತ ಸೌರಭ’ ಪ್ರದರ್ಶನಗೊಳ್ಳಲಿದೆ.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಹಾಗೂ ಅದ್ಧೂರಿ ಸಂಗೀತ ರಸಮಂಜರಿ ಕಾರ್ಯಕ್ರಮದ ಪ್ರಯುಕ್ತ ಜನಸಾಗರ ಹೆಚ್ಚಾಗಲಿರುವ ಕಾರಣ ಇಂದು ಸಂಜೆ 5 ಗಂಟೆಯ ಬಳಿಕ ರಾತ್ರಿ ಕಾರ್ಯಕ್ರಮ ಮುಗಿಯುವ ತನಕ ರಥಬೀದಿಯಲ್ಲಿ ವಾಹನ ಸಂಚಾರ ಮತ್ತು ಪಾರ್ಕಿಂಗ್ ನಿಷೇಧಿಸಲಾಗಿದೆ.
ಕಾರ್ಯಕ್ರಮ ವೀಕ್ಷಿಸಲು ಬರುವವರು ಸುಳ್ಯದ ಎ.ಪಿ.ಎಂ.ಸಿ. ಯಾರ್ಡ್, ಪ್ರಭು ಮೈದಾನ, ಜ್ಯೂನಿಯರ್ ಕಾಲೇಜು ಮೈದಾನ, ಗಾಂಧಿನಗರ ಶಾಲಾ ಮೈದಾನ ಹಾಗೂ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಬರಬೇಕೆಂದು ದಸರಾ ಸಮಿತಿಯ ಸಂಘಟಕರು ತಿಳಿಸಿದ್ದಾರೆ.