ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿಯವರನ್ನು ಹತ್ಯೆ ಗೈದ ಹರಿಪ್ರಸಾದ್ ಮತ್ತು ಜಯನ್‌ರವರಿಗೆ ಜೀವಾವಧಿ ಸಜೆಯನ್ನು ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇಂದು ಘೋಷಿಸಿದೆ.
ಸಂಪಾಜೆ ಪರಿಸರದ ಜನಾನುರಾಗಿ ಬಿಜೆಪಿ ನಾಯಕರಾಗಿದ್ದ ಬಾಲಚಂದ್ರ ಕಳಗಿಯವರನ್ನು 2019 ಮಾ.19 ರಂದು ಓಮ್ನಿ ಕಾರಿಗೆ ಲಾರಿಯಲ್ಲಿ ಗುದ್ದಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಸಂಪತ್, ಹರಿಪ್ರಸಾದ್ ಮತ್ತು ಜಯನ್ ಎಂಬವರನ್ನು ಮಡಿಕೇರಿ ಪೋಲೀಸರು ಬಂಧಿಸಿದ್ದರು. ಜಾಮೀನಿನಲ್ಲಿ ಹೊರಗೆ ಬಂದಿದ್ದ ಆರೋಪಿಗಳಲ್ಲಿ ಸಂಪತ್ ಎಂಬಾತನನ್ನು ಸುಳ್ಯದ ಶಾಂತಿನಗರದಲ್ಲಿ ಹತ್ಯೆಗೈಯಲಾಗಿತ್ತು.
ಇದೀಗ ವಿಚಾರಣೆ ಮುಗಿದು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ. ಇಬ್ಬರು ಆರೋಪಿಗಳಾದ ಹರಿಪ್ರಸಾದ್ ಮತ್ತು ಜಯನ್‌ರವರಿಗೆ ಜೀವಾವಧಿ ಕಠಿಣ ಕಾರಾಗೃಹ ವಾಸ ಹಾಗೂ ತಲಾ 10 ಸಾವಿರ ದಂಡವನ್ನು ವಿಧಿಸಲಾಗಿದೆ.
ಆರೋಪ ಸಾಬೀತಾಗಿದೆ ಎಂದು ಅ.16 ರಂದು ಕೊಡಗು ಜಿಲ್ಲಾ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಶಾಂತಿ ಜಿ. ಘೋಷಿಸಿದ್ದರು. ತೀರ್ಪಿನ ಪ್ರಮಾಣವನ್ನು ಅ.19 ರಂದು ಘೋಷಿಸುವುದಾಗಿ ಹೇಳಿದ್ದರು. ಅದರಂತೆ ಇಂದು ನ್ಯಾಯಾಲಯದಲ್ಲಿ ತೀರ್ಪು ಘೋಷಿಸಿದ್ದಾರೆ.