ಸುಬ್ರಹ್ಮಣ್ಯ ಗ್ರಾ.ಪಂ ನೇತೃತ್ವದಲ್ಲಿ, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಹಲವು ಅಂಗಡಿಗಳಿಗೆ ಅಧಿಕಾರಿಗಳು ದಾಳಿ ಮಾಡಿ ಭಾರೀ ಪ್ರಮಾಣದಲ್ಲಿ ತಂಬಾಕು ಉತ್ಪನ್ನ ಸಹಿತ ನಿಷೇಧಿತ ಪಾಸ್ಟಿಕ್ ಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಡಿ.3 ರಂದು ನಡೆದಿದೆ.
ಅಂಗಡಿಗಳಿಂದ ವಿವಿಧ ಕಂಪೆನಿಗಳ ಗುಟ್ಕಾ,ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನ ಹಾಗೂ ಪ್ಲಾಷ್ಟಿಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಅಪರೂಪದ ದಿಢೀರ್ ದಾಳಿಯಿಂದ ವರ್ತಕರು ಆಘಾತಕೊಳಗಾಗಿದ್ದಾರೆ. ಕುಕ್ಕೆ ದೇಗುಲದ ಪರಿಸರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದಂತೆ ಸೂಚನೆ ನೀಡಿದಲ್ಲದೆ ಅಂತಹ ವಿಚಾರ ಗಮನಕ್ಕೆ ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ವರ್ತಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆಯೂ ಎರಡೂಮ್ಮೂರು ಸಲ ದಾಳಿ ಮಾಡಿದ್ದರೂ ವರ್ತಕರು ಕ್ಯಾರೇ ಅನ್ನಲಿಲ್ಲ.
ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ನಂದಕುಮಾರ್, ವೈದ್ಯಾಧಿಕಾರಿ ತ್ರಿಮೂರ್ತಿ, ಗ್ರಾ.ಪಂ ಪಿಡಿಒ ಮಹೇಶ್ , ಕಾರ್ಯದರ್ಶಿ ಮೋನಪ್ಪ, ಗ್ರಾ.ಪಂ ಅಧ್ಯಕ್ಷೆ ಸುಜಾತ ಕಲ್ಲಾಜೆ, ಮಾಜಿ ಅಧ್ಯಕ್ಷೆ ಲಲಿತಾ ಗುಂಡ್ಯಡ್ಕ, ಗ್ರಾ.ಪಂ ಸದಸ್ಯೆ ಭಾರತಿ ದಿನೇಶ್, ದೇವಸ್ಥಾನದ ಸಿಬ್ಬಂದಿ ಯೋಗೀಶ್ ಮತ್ತಿತರರು ಭಾಗವಹಿಸಿದ್ದರು.