ಡಿ.25 ರಂದು ಸುಳ್ಯಕ್ಕೆ ಬ್ರಹ್ಮರಥ ಆಗಮನ : ಡಿ.31ರಂದು ರಥ ಸಮರ್ಪಣೆ : ಜ.2ರಂದು ಭೂ ಸ್ಪರ್ಶ
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾಗಿರುವ ಡಾ. ಕೆ.ವಿ. ಚಿದಾನಂದ ಹಾಗೂ ಮನೆಯವರು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥವನ್ನು ಕೊಡುಗೆಯಾಗಿ ನೀಡಲಿದ್ದು, ಬ್ರಹ್ಮರಥ ಸುಳ್ಯಕ್ಕೆ ಆಗಮಿಸುವ ಹಾಗೂ ಸಮರ್ಪಣೆ ಸಿದ್ಧತೆಯ ಕುರಿತು ಭಕ್ತಾಧಿಗಳ ಸಭೆಯು ಸುಳ್ಯದ ಚೆನ್ನಕೇಶವ ದೇವಸ್ಥಾನ ಸಭಾಂಗಣದಲ್ಲಿ ಡಿ.6ರಂದು ನಡೆಯಿತು.
ಕೋಟೇಶ್ವರದ ಕುಂಭಾಶಿಯಲ್ಲಿ ರಥಶಿಲ್ಪಿ ರಾಜಗೋಪಾಲಾಚಾರ್ಯರ ಉಸ್ತುವಾರಿಯಲ್ಲಿ ಬ್ರಹ್ಮರಥ ನಿರ್ಮಾಣವಾಗುತ್ತಿದ್ದು, ಡಿ.23ರಂದು ಬ್ರಹ್ಮರಥ ಸುಳ್ಯಕ್ಕೆ ತರುವ ನಿಟ್ಟಿನಲ್ಲಿ ಸುಳ್ಯದಿಂದ ಕುರುಂಜಿ ಕುಟುಂಬದವರು ಹಾಗೂ ದೇವಸ್ಥಾನದ ಭಕ್ತರು ತೆರಳಿ ಅಲ್ಲಿ ಪೂಜೆ ನಡೆಯುವುದು. ಡಿ.24ರಂದು ಬೆಳಗ್ಗೆ ಕುಂಭಾಶಿಯಿಂದ ಬ್ರಹ್ಮರಥ ಹೊರಡಲಿದ್ದು ರಾತ್ರಿ ವೇಳೆಗೆ ಪುತ್ತೂರು ತಲುಪುತ್ತದೆ. ಅಂದು ಪುತ್ತೂರಿನಲ್ಲಿ ಬ್ರಹ್ಮರಥ ಇರುತ್ತದೆ. ಮರುದಿನ ಡಿ.25ರಂದು ಸುಳ್ಯದತ್ತ ಬ್ರಹ್ಮರಥ ಆಗಮಿಸುತ್ತದೆ. ಮಧ್ಯಾಹ್ನ ವೇಳೆಗೆ ಜಾಲ್ಸೂರಿಗೆ ತಲುಪುತ್ತದೆ. ಅಲ್ಲಿ ರಥದ ಸ್ವಾಗತ ಆದ ಬಳಿಕ ವಾಹನ ಮೆರವಣಿಗೆಯೊಂದಿಗೆ ಬ್ರಹ್ಮರಥ ಸುಳ್ಯ ದತ್ತ ಬರಲಿದೆ. ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣಿಗೆಯಲ್ಲಿ ಚೆನ್ನಕೇಶವ ದೇವಸ್ಥಾನದ ಮುಂಭಾಗಕ್ಕೆ ರಥ ಬರಲಿದೆ.
ಡಿ.31ರಂದು ಕುರುಂಜಿಯವರು ಕುಟುಂಬದವರು ರಥವನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡುವರು. 2025ರ ಜನವರಿ 1 ರಂದು ರಥದ ಆಲಯದಲ್ಲಿ ವಾಸ್ತುಪೂಜೆ ನಡೆಯಲಿದ್ದು, ಜ.2ರಂದು ಸುಳ್ಯದಲ್ಲಿ ರಥದ ಭೂಸ್ಪರ್ಶ ನಡೆಯಲಿದೆ ಎಂದು ಕೆ.ವಿ.ಜಿ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ. ಯವರು ಮಾಹಿತಿ ನೀಡಿದರು.
ಸಮಿತಿ ರಚನೆ :
ಬ್ರಹ್ಮರಥ ಸಮರ್ಪಣೆಯ ಸಿದ್ಧತೆಗಾಗಿ ಸಮಿತಿಯನ್ನು ಮಾಡಲಾಗಿದ್ದು ಸಮಿತಿಯ ಗೌರವಾಧ್ಯಕ್ಷರಾಗಿ ಸುಳ್ಯದ ಹಿರಿಯ ಉದ್ಯಮಿ ಕೃಷ್ಣ ಕಾಮತ್ ಹಾಗೂ ಅಧ್ಯಕ್ಷರಾಗಿ ನಾರಾಯಣ ಕೇಕಡ್ಕರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಡಾ.ಲೀಲಾಧರ್ ಡಿ.ವಿ, ಉಪಾಧ್ಯಕ್ಷರಾಗಿ ಕೆ.ವಿ.ಹೇಮನಾಥ ಕುರುಂಜಿಯವರನ್ನು ಆಯ್ಕೆ ಮಾಡಲಾಯಿತು. ಬಳಿಕ ಈ ಸಮಿತಿಯವರು ಸೇರಿ ಎಲ್ಲರನ್ನು ಸೇರಿಸಿ ವಿಸ್ತೃತ ಸಮಿತಿ ಮಾಡುವಂತೆ ಸಭೆ ಒಪ್ಪಿಗೆ ನೀಡಿತು.
ಸಭೆಯಲ್ಲಿದ್ದ ಪ್ರಮುಖರು ಸಲಹೆ ನೀಡಿದರು.
ಸಭೆಯ ನೇತೃತ್ವ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ಮಾತನಾಡಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥದ ಆಗಮನವಾಗಲಿದೆ.ಡಿ.23ರಂದು ರಥಕ್ಕೆ ಪೂಜೆ ನಡೆದು 24 ರಂದು ಪುತ್ತೂರಿಗೆ ತಲುಪುತ್ತದೆ.
ಡಿ.31 ರಂದು ದೇವರಿಗೆ ಸಮರ್ಪಣೆ ನಡೆಯಲಿದೆ.
ಜ.2ರಂದು ಭೂಸ್ಪರ್ಶವಾಗಲಿದೆ ಈ ಕಾರ್ಯಕ್ರಮಕ್ಕೆ ಊರಿಗೆ ಊರೇ ಸೇರಬೇಕು ಎಲ್ಲ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.
ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕರವರು ಮಾತನಾಡಿ ಜನವರಿ ತಿಂಗಳಲ್ಲಿ ನಡೆಯುವ ಬ್ರಹ್ಮರಥ ಸಮರ್ಪಣೆ ಹಾಗೂ ದೈವ ದೇವರುಗಳ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು ಬ್ರಹ್ಮರಥೋತ್ಸವವನ್ನು ಎಲ್ಲರೂ ಕಣ್ತುಂಬಿಕೊಳ್ಳಬೇಕು ಎಂದು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯರವರು ಮಾತನಾಡಿ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆಯಾಗಲಿದ್ದು ಎಲ್ಲರೂ ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ,ಎನ್.ಜಯಪ್ರಕಾಶ್ ರೈ, ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಸದಸ್ಯೆ ಶ್ರೀಮತಿ ಕಿಶೋರಿ ಶೇಟ್, ಎಸ್.ಐ.ಸಂತೋಷ್, ಮಧೂರು ದೇವಸ್ಥಾನದ ಮುರಳೀಧರ್ ಉಪಸ್ಥಿತರಿದ್ದರು.
ಕೃಪಾಶಂಕರ ತುದಿಯಡ್ಕ ಸ್ವಾಗತಿಸಿ, ಹರ್ಷ ಕರುಣಾಕರ ಪ್ರಾರ್ಥಿಸಿ, ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.
ಕಾಸರಗೋಡು ಜಿಲ್ಲೆಯ ಮಧೂರು ದೇವಸ್ಥಾನದ ಬ್ರಹ್ಮಕಲಶೋತ್ಸವ 2025ರ ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು ಈ ಕುರಿತು ಅಲ್ಲಿಯ ಸಮಿತಿಯವರು ಸುಳ್ಯಕ್ಕೆ ಆಗಮಿಸಿ, ಬ್ರಹ್ಮರಥ ಸಮರ್ಪಣೆಗಾಗಿ ಕರೆದ ಸಭೆಯಲ್ಲಿ ಕಾರ್ಯಕ್ರಮ ದ ಮಾಹಿತಿ ನೀಡಿದರು.
ಕಾರ್ಯಕ್ರಮ ಯಶಸ್ಸಿಗಾಗಿ ಸುಳ್ಯದಲ್ಲಿ ಸಮಿತಿ ರಚನೆ ನಡೆಯಿತು.
ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ
ಕೆ.ವಿ.ಚಿದಾನಂದ, ಶಾಸಕಿ ಭಾಗೀರಥಿ ಮುರುಳ್ಯ, ಅಧ್ಯಕ್ಷರಾಗಿ ಹರೀಶ್ ಕಂಜಿಪಿಲಿ,ಕಾರ್ಯದರ್ಶಿಯಾಗಿ ಡಾ.ಡಿ.ವಿ.ಲೀಲಾಧರ್ ಆಯ್ಕೆಯಾದರು .
ಉಪಾಧ್ಯಕ್ಷರಾಗಿ ಎಂ.ಬಿ.ಸದಾಶಿವ,ಸುಧಾಕರ ಕಾಮತ್,ನಿತ್ಯಾನಂದ ಮುಂಡೋಡಿ, ಆಯ್ಕೆಯಾದರು.