ಸುಳ್ಯ ಶ್ರೀ ಶಾರದಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ
“ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲೇ ನಿಷ್ಠೆಯಿಂದ ತೊಡಗಿಸಿಕೊಳ್ಳಿ. ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತೀರಿ” ಎಂದು ಮಡಿಕೇರಿ ಆಕಾಶವಾಣಿ ಹಿರಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಹೇಳಿದರು.
ಡಿ.9ರಂದು ಸುಳ್ಯ ಶ್ರೀ ಶಾರದಾ ಪ್ರೌಢಶಾಲೆ ಹಾಗೂ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಅವರು ಮುಖ್ಯ ಭಾಷಣಗೈದರು.
“ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ಹೇಳಿದ ಜೀವನ ಪಾಠವನ್ನು ಕೇಳಿ ಅಳವಡಿಸಿಕೊಳ್ಳಿ. ಅದು ನಿಮ್ಮ ಭವಿಷ್ಯದ ದಾರಿಯಾಗುತ್ತದೆ ಎಂದ ಅವರು ನಾವು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಹುಟ್ಟಿದ ಊರು, ಶಿಕ್ಷಣ ನೀಡಿದ ಸಂಸ್ಥೆ ಹಾಗೂ ಶಿಕ್ಷಕರನ್ನು ಎಂದೆಂದೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ದ.ಕ. ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯರು ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ. ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾದ ಶ್ರೀಮತಿ ಕಮಲ ಬಾಲಚಂದ್ರ, ದ.ಕ. ಗೌಡ ವಿದ್ಯಾಸಂಘದ ಪ್ರಧಾನ ಕಾರ್ಯದರ್ಶಿ ಡಾ. ರೇವತಿ ನಂದನ್, ನಿರ್ದೇಶಕರುಗಳಾದ ಶ್ರೀಮತಿ ತಂಗಮ್ಮ, ಜಯರಾಮ ಚಿಲ್ತಡ್ಕ, ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷರುಗಳಾದ ಗದಾಧರ, ಮಹೇಶ್, ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿ ಕೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾರತಿ ಕೆ ಹಾಗೂ ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿ ಇದ್ದರು.
ಉಪನ್ಯಾಸಕಿ ಶ್ರೀಮತಿ ಸ್ವರ್ಣಕಲಾ ಎ.ಎಸ್. ಸ್ವಾಗತಿಸಿದರು. ಉಪನ್ಯಾಸಕಿ ಅರ್ಪಣ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರೀವಲ್ಲಿ ಹಾಗೂ ವಿಷ್ಣುಪ್ರಿಯ ಕಾರ್ಯಕ್ರಮ ನಿರೂಪಿಸಿದರು.