ಒಂದೂ ಕಾಲು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಕ್ಷೇತ್ರ
ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿಯವರಿಂದ ಮಾಹಿತಿ
ಸುಳ್ಯ ಸೀಮೆ ದೈವಸ್ಥಾನವಾಗಿರುವ ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಇರುವೆರ್ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರವು ಸುಮಾರು ಒಂದೂ ಕಾಲು ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು ಡಿ.೨೧ ಮತ್ತು ೨೨ರಂದು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದೆ ಎಂದು ಶ್ರೀ ಬಜಪ್ಪಿಲ ಕ್ಷೇತ್ರದ ಅನುವಂಶಿಕ ಮೊಕ್ತೇಸರರು, ಆಡಳಿತ ಸಮಿತಿಯ ಅಧ್ಯಕ್ಷರೂ ಆಗಿರುವ ಹೇಮಂತ್ ಕುಮಾರ್ ಗೌಡರಮನೆ ಹೇಳಿದರು.
ಡಿ.೧೪ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ದೈವಸ್ಥಾನ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಕುರಿತು ವಿವರ ನೀಡಿದರು. ಸುಳ್ಯ ಸೀಮೆ ದೇವಸ್ಥಾನವಾಗಿ ತೊಡಿಕಾನ ದೇವಸ್ಥಾನ ಇದ್ದ ರೀತಿಯಲ್ಲಿ ಸೀಮೆಯ ದೈವಸ್ಥಾನವಾಗಿ ಶ್ರೀ ಕ್ಷೇತ್ರ ಬಜಪ್ಪಿಲ ಇದೆ. ಒಂದು ಸಾವಿರಕ್ಕೂ ಹೆಚ್ಚು ಇತಿಹಾಸ ವಿರುವ ಸತ್ಯ, ಧರ್ಮದ ಕಾರಣಿಕ ಕ್ಷೇತ್ರ ಬಜಪ್ಪಿಲ. ದೈವಸ್ಥಾನಕ್ಕೆ ಸಂಬಂಧಪಟ್ಟವರೆಲ್ಲರೂ ಸೇರಿಕೊಂಡು ಜೀರ್ಣೋದ್ಧಾರ ನಡೆಸುವ ಕುರಿತು ಸಭೆ ನಡೆಸಿ, ಬಳಿಕ ಪ್ರಶ್ನಾ ಚಿಂತನೆ ಕೈಗೊಂಡೆವು. ಅದರಲ್ಲಿ ಕಂಡು ಬಂದಂತೆ ಕೆಲಸ ಕಾರ್ಯಗಳು ನಡೆದಿದೆ. ೨೦೨೪ರ ಮೇ.೨೯ರಂದು ಅನುಜ್ಞಾ ಕಲಶ ಮಾಡಿ, ದೈವಸ್ಥಾನವನ್ನು ಪೂರ್ತಿ ತೆಗೆದು ಜೂ.೧೫ರಂದು ಭೂಮಿ ಪೂಜೆ ನೆರವೇರಿಸಿಕೊಂಡು ದೈವಸ್ಥಾನದ ಕಾಮಗಾರಿ ಆರಂಭಿಸಿದೆವು. ಸುಮಾರು ೫ ತಿಂಗಳಲ್ಲಿ ಈ ಕ್ಷೇತ್ರದ ಕೆಲಸ ಕಾರ್ಯಗಳು ಪೂರ್ಣಗೊಂಡಿದೆ.
ಆರಂಭದಲ್ಲಿ ೧ ಕೋಟಿ ರೂ ವೆಚ್ಚ ತಗಲಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಕೆಲಸ ಕಾರ್ಯಗಳು ನಡೆಯುತ್ತಾ ಹೋಗಿ ಇದೀಗ ಸುಮಾರು ರೂ. ಒಂದೂ ಕಾಲು ಕೋಟಿ ವೆಚ್ಚ ಆಗಿದೆ. ದೈವಗಳ ಗುಡಿಗಳು ಸೇರಿದಂತೆ, ಕಾಂಪೌಂಡ್, ಬಾವಿ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ರೂಪಿಸಲಾಗಿದೆ. ಬಜಪ್ಪಿಲ ಕ್ಷೇತ್ರಕ್ಕೊಳಪಟ್ಟ ಹಾಗೂ ಊರ ಹಾಗೂ ಪರವೂರಿನ ಎಲ್ಲರ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದವರು ವಿವರ ನೀಡಿದರು.
ಬ್ರಹ್ಮಕಲಶೋತ್ಸವ
ಇದೀಗ ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡು ಡಿ.೨೧ ಮತ್ತು ೨೨ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಹಾಗೂ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳವರ ನೇತೃತ್ವದಲ್ಲಿ ವೈದಿಕ ಕಾರ್ಯಗಳು ನಡೆಯಲಿದೆ.
ಹಸಿರುವಾಣಿ
ಡಿ.೨೧ರಂದು ಬೆಳಗ್ಗೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ಸುಳ್ಯ ಸೀಮೆಯ ವಿವಿಧ ಭಾಗಗಳಿಂದ ಹಸಿರುವಾಣಿ ಸಮರ್ಪಣೆ ನಡೆಯಲಿದ್ದು, ಬೆಳಗ್ಗೆ ೯ ಗಂಟೆ ಸುಮಾರಿಗೆ ಎಲ್ಲರೂ ಪೇರಾಲು ಶ್ರೀರಾಮ ಭಜನಾ ಮಂದಿರ ಎದುರಿನಲ್ಲಿ ಸೇರಿ ಮೆರವಣಿಗೆಯ ಮೂಲಕ ಹಸಿರುವಾಣಿ ಶ್ರೀ ಕ್ಷೇತ್ರ ಬಜಪ್ಪಿಲಕ್ಕೆ ಬರಲಿದೆ. ಬಳಿಕ ದೇವತಾ ಪ್ರಾರ್ಥನೆ ಮಾಡಿ, ಉಗ್ರಾಣ ತುಂಬಿಸುವ ಕಾರ್ಯ ನಡೆಯುವುದು ಎಂದವರು ಹೇಳಿದರು.
ತಂತ್ರಿಗಳ, ಸ್ವಾಮೀಜಿಗಳ ಆಗಮನ
ಸಂಜೆ ತಂತ್ರಿಗಳು ಹಾಗೂ ಸ್ವಾಮೀಜಿಯವರು ಆಗಮಿಸಲಿದ್ದು ಅವರನ್ನು ಪೂರ್ಣಕುಂಭ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಗುವುದು. ಸಂಜೆ ೬.೩೦ರಿಂದ ವಿವಿಧ ವೈದಿಕ ಕಾರ್ಯಗಳು ನಡೆಯುವುದು ಎಂದು ಹೇಳಿದರು.
ಧಾರ್ಮಿಕ ಸಭೆ
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬಜಪ್ಪಿಲ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಹೇಮಂತ್ ಕುಮಾರ್ ಗೌಡರಮನೆ ಅಧ್ಯಕ್ಷತೆ ವಹಿಸಲಿದ್ದು, ಕುಂಟಾರು ರವೀಶ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡುವರು. ಸುಳ್ಯ ಎ.ಒ.ಎಲ್.ಇ. ಅಧ್ಯಕ್ಷ ಡಾ| ಕೆ.ವಿ. ಚಿದಾನಂದ, ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ತುಡಿಯಡ್ಕ, ತೊಡಿಕಾನ ಶ್ರೀ ಮಕಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಮೇನಾಲ ರ್ಶರೀ ಉಳ್ಳಾಕುಲು ದೈವಸ್ಥಾನದ ಮೊಕೇಸರರಾದ ಗುಡ್ಡಪ್ಪ ರೈ ಮೇನಾಲ, ಸಿವಿಲ್ ಇಂಜಿನಿಯರ್ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ಭಾಗವಹಿಸಲಿದ್ದಾರೆ.
ಬ್ರಹ್ಮಕಲಶೋತ್ಸವ
ಡಿ.೨೨ರಂದು ಪೂರ್ವಾಹ್ನ ೮ ಗಂಟೆಯಿಂದ ಗಣಪತಿಹೋಮ, ಬ್ರಹ್ಮಕಲಶಪೂಜೆ ಬೆಳಗ್ಗೆ ೧೦.೨೩ರ ಕುಂಭ ಲಗ್ನದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯುವುದು.
ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಎ.ಒ.ಎಲ್.ಇ. ಕಮಿಟಿ ಬಿ. ಸುಳ್ಯ ಇದರ ಚಯರ್‌ಮೆನ್ ಡಾ| ಕೆ.ವಿ. ರೇಣುಕಾ ಪ್ರಸಾದ್, ಅಜ್ಜಾವರ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಮೊಕ್ತೇಸರರಾದ ಮುದ್ದಪ್ಪ ಗೌಡ ಕುಡೆಂಬಿ, ಅಜ್ಜಾವರ ಶ್ರೀ ಮಹಿಷಮರ್ಧಿನೀ ದೇವಸ್ಥಾನದ ಧರ್ಮದರ್ಶಿ ಬಯಂಬು ಭಾಸ್ಕರ ರಾವ್, ಕಾನತ್ತಿಲ ಶ್ರೀ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರರಾದ ಹೇಮನಾಥ ಕೆ.ವಿ., ಅಂಬ್ರೋಟಿ ಹದಿನಾರು ಊರ ಗೌಡರಾದ ಲಕ್ಷ್ಮಣ ಗೌಡ ಕುಕ್ಕೇಟಿ, ಅತ್ಯಾಡಿ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೋಕಯ್ಯ ಮಾಸ್ತರ್, ನಾರಾಲು ಶ್ರೀ ಉಳ್ಳಾಕುಲು ಚಾವಡಿಯ ಮೋನಪ್ಪ ಗೌಡ ನಾರಾಲು, ಮುಳ್ಯ ಹತ್ತೊಕ್ಕಲು ಮುಖ್ಯಸ್ಥರಾದ ಹೊನ್ನಪ್ಪ ಗೌಡ ದೊಡ್ಡಮನೆ, ಕುಕ್ಕಂದೂರು ಶ್ರೀ ಕಿನ್ನಿಮಾನಿ ಪೂಮಾನಿ ದೈವಸ್ಥಾನದ ಮೊಕ್ತೇಸರರಾದ ಎನ್.ಎಸ್. ಬಾಲಕೃಷ್ಣ ಗೌಡ ನಡುಬೆಟ್ಟು, ಸುಳ್ಯ ಪನ್ನೆಬೀಡು ಶ್ರೀ ಭಗವತೀ ಕ್ಷೇತ್ರದ ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ, ಸುಳ್ಯ ಶ್ರೀ ಕಲ್ಕುಡ ದೈವಸ್ಥಾನದ ಅಧ್ಯಕ್ಷ ಉಮೇಶ್ ಪಿ.ಕೆ., ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಬ್ರಹ್ಮಕಲಶೋತ್ಸವ ಪ್ರಯುಕ್ತ ಡಿ.೨೧ರಂದು ಸಂಜೆ ೪ ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಸೌರಭ ನಡೆಯುವುದು. ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಡ್ಯಾನ್ಸ್ ಬೀಟ್ಸ್ ಜೀವನ್ ಟಿ.ಎನ್. ಬೆಳ್ಳಾರೆ ಇವರ ನಿರ್ದೇಶನದ ನೃತ್ಯ ಸಂಭ್ರಮ, ಡಿ.೨೨ರಂದು ಸಂಜೆ ೪ ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಸೌರಭ, ರಾತ್ರಿ ಗಂಟೆ ೯ ರಿಂದ ತುಳು ಹಾಸ್ಯಮಯ ನಾಟ ಅಮ್ಮೆರ್ ಮೂರಿಬರಲಿದೆ.
ಭಜನಾ ಕಾರ್ಯಕ್ರಮ ಡಿ.೨೧ ಮತ್ತು ೨೨ರಂದು ವಿವಿಧ ತಂಡಗಳಿಂದ ಭಜನಾ ಕಾರ್ಯವೂ ಕ್ಷೇತ್ರದಲ್ಲಿ ನಡೆಯಲಿದೆ.
ಡಿ.೨೬, ೨೭ರರಂದು ನೇಮೋತ್ಸವ : ಕ್ಷೇತ್ರದಲ್ಲಿ ಡಿ.೨೬ರಂದು ಉಳ್ಳಾಕುಲು ದೈವಗಳ ನೇಮೋತ್ಸವ ಮತ್ತು ಡಿ.೨೭ರಂದು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕಾಲಾವಧಿ ನೇಮೋತ್ಸವ ನಡೆಯಲಿದೆ.
ಪ್ರತೀ ಮನೆಗಳಿಗೂ ಶೃಂಗಾರ, ಎರಡು ದಿನ ನಂದಾದೀಪ
ಬ್ರಹ್ಮಕಲಶೋತ್ಸವ ನಡೆಯುವ ಎರಡೂ ದಿನಗಳ ಕೂಡಾ ಬಜಪ್ಪಿಲ ಕ್ಷೇತ್ರ ನಮ್ಮ ಆ ವ್ಯಾಪ್ತಿಯ ಪ್ರತೀ ಮನೆಯಲ್ಲಿಯೂ ನಂದಾ ದೀಪ ಉರಿಸಲಾಗುತ್ತದೆ. ಹಾಗೂ ಮನೆಯನ್ನು ಅವರವರೇ ಸ್ವಚ್ಛವಾಗಿ ಮಾಡಿ, ಶೃಂಗಾರಗೊಳಿಸಲಿzವೆ ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಮಾಹಿತಿ ನೀಡಿದರು.
ಎರಡು ದಿನದ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸುವುದರಿಂದ ಬಜಪ್ಪಿಲ ಕ್ಷೇತ್ರದ ಪಕ್ಕದಲ್ಲೇ ಸಾಖಷ್ಟು ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಆದ್ದರಿಂದ ಬರುವವರೆಲ್ಲರಿಗೂ ಪೇರಾಲು ಶಾಲೆಯ ವಠಾರ ಹಾಗೂ ದೈವಸ್ಥಾನದ ಇನ್ನೊಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತು ಈ ಎರಡೂ ಕಡೆಗಳಲ್ಲಿಯೂ ಬಜಪ್ಪಿಲ ಕ್ಷೇತ್ರದ ವಾಹನಗಳಿದ್ದು ಆ ವಾಹನಗಳ ಮೂಲಕ ಭಕ್ತರನ್ನು ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ವಾಪಸು ಕರೆತಂದು ಅವರ ವಾಃನದ ಪಕ್ಕದಲ್ಲಿ ಬಿಡುವ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ ಎಂದವರು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಸ್ವಾಗತ ಸಮಿತಿ ಸಂಚಾಲಕ ಜಯರಾಮ ಗೌಡರಮನೆ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ತೀರ್ಥೇಶ್ ಬಲಂದೋಟಿ, ಆಡಳಿತ ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್ ಬಾಳೆಕೋಡಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ಮಂಜುನಾಥ ಪಿ. ಪೇರಾಲು, ದಾಮೋದರ ಮಿತ್ತಪೇರಾಲು, ರಾಜಣ್ಣ ಪೇರಾಲುಮೂಲೆ ಇದ್ದರು.