ಸುಬ್ರಹ್ಮಣ್ಯದಲ್ಲಿ ಮೂರು ದಿನದ ವಿಶ್ವ ಹೃದಯ ಸಮ್ಮೇಳನ

0

ಸಮಾಜಕ್ಕೆ ಹಿತವನ್ನು ಬಯಸುವ ಹೃದಯವಂತರ ಸಮ್ಮಿಲನ ಈ ಸಮ್ಮೇಳನವಾಗಿದೆ: ಡಾ. ವಿದ್ಯಾಪ್ರಸನ್ನ

ಸರ್ವ ಸಮಾಮನತೆಗೆ ಶ್ರಮಿಸುವ ಸಮಾಜಮುಖಿ ಉತ್ತಮ ಮನಸುಗಳು ಒಂದಾಗುವ ಕಾರ್ಯವೇ ಹೃದಯ ಸಮ್ಮೇಳನ. ಸಮಾಜಕ್ಕೆ ಹಿತವನ್ನು ಬಯಸುವ ಹೃದಯವಂತರ ಸಮ್ಮಿಲನ ಈ ಸಮ್ಮೇಳನವಾಗಿದೆ ಎಂದು ಸಂಪುಟ ಶ್ರೀ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ ಬೆಂಗಳೂರು ಇದರ ಆಶ್ರಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯುವ ಮೂರು ದಿನಗಳ ವಿಶ್ವ ಹೃದಯ ಸಮ್ಮೇಳನವನ್ನು ಡಿ.೨೭ ರಂದು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಹೃದಯಾಂತರಾಳದ ಭಕ್ತಿಯಿಂದ ಭಗವಂತನ ಆರಾಧನೆ ಮಾಡುವುದರಿಂದ ಶ್ರೇಯಸ್ಸು ಖಂಡಿತಾ ಇರಿತ್ತದೆ.ಹೃದಯವು ನಿರ್ಮಲವಾಗಿದ್ದರೆ ಬದುಕು ಪಾವನವಾಗುತ್ತದೆ. ಮನುಷ್ಯನ ಬದುಕು ಉತ್ತಮ ಗುಣಗಳನ್ನು ಕ್ರೋಡೀಕರಣಗೊಂಡ ಹೃದಯ ಸಮ್ಮೇಳನವಾಗಬೇಕು.ನಮ್ಮ ಆತ್ಮ ಹೃದಯದಲ್ಲಿದೆ.ಹೃದಯವು ಸತ್ಯದ ಕಡೆಗೆ ಇರಬೇಕು.ದೇವರ ಮೇಲೆ ಅಚಲವಾದ ನಂಬಿಕೆ, ಸ್ವಾರ್ಥಿಯಾಗದೆ ಸಮಾಜದ ಸರ್ವರನ್ನು ಒಂದಾಗಿ ಕಾಣುವ ವ್ಯಕ್ತಿತ್ವ ಹೊಂದಿದವರು ಹೃದಯವಂತರು ಎಂದು ಹೇಳಿದರು.

ನಮ್ಮ ಬದುಕು ಅಸಾಧಾರಣವಾಗಲು ಕಾರಣ ಭಗವಂತ. ಭಗವಂತನ ಬಗ್ಗೆ ಹೃದಯದಿಂದ ಭಕ್ತಿ ಹೊಂದುವುದು ನಮ್ಮ ಆಧ್ಯ ಕರ್ತವ್ಯ. ನಮ್ಮನ್ನು ಸೃಷ್ಠಿ ಮಾಡಿ ಸುಂದರ ಬದುಕನ್ನು ಕೊಟ್ಟ ದೇವರಿಗೆ ಕೃತಜ್ಞತೆಯನ್ನು ಭಕ್ತಿಯ ಮೂಲಕ ಸಲ್ಲಿಸುವ ಹೃದಯ ನಮ್ಮದಾಗಬೇಕು. ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಸೇವೆ ಸಲ್ಲಿಸುವುದು ಸಾರ್ಥಕ ಬದುಕು.ಈ ಮೂರು ಗುಣಗಳುಳ್ಳ ವ್ಯಕ್ತಿತ್ವಗಳು ಒಂದಾಗಿ ಶ್ರಮಿಸುವ ಕಾರ್ಯ ಈ ಸಮ್ಮೇಳನದಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಹೊಸದುರ್ಗದ ಸದ್ಗುರು ಸೇವಾಶ್ರಮದ ಶ್ರೀ ಶ್ರೀಕಂಠಾನಂದ ಸರಸ್ವತಿ ಮಹರಾಜ್, ಹಿರಿಯೂರು ಶ್ರೀ ದತ್ತಾಶ್ರಮದ ಶ್ರೀ ಸುಬೊಧಾನಂದ ಸ್ವಾಮೀಜಿಯವರು, ಬೆಂಗಳೂರಿನ ಲಲಿತ ಮಂದಿರದ ಶ್ರೀಕಂಠ ಗುರೂಜಿ ಆಶೀರ್ವಚನ ನೀಡಿದರು. ಸುಬ್ರಹ್ಮಣ್ಯ ಮಠದ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ಪ್ರಮುಖರಾದ ಹೊಸದುರ್ಗದ ಡಾ.ರವೀಂದ್ರ ಮುಖ್ಯ ಅತಿಥಿಗಳಾಗಿದ್ದರು.ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಕೋಶಾಧಿಕಾರಿ ರಮೇಶ್ಚಂದ್ರ ಸ್ವಾಗತಿಸಿದರು.ಟ್ರಸ್ಟಿ ಕಾರ್ಯದರ್ಶಿ ಸತೀಶ್‌ಜಿ ಪ್ರಸ್ತಾಪಿಸಿ

ವಂದಿಸಿದರು.
ಸಮಾರಂಭದ ಬಳಿಕ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಸಿದ್ಧಿ ಯೋಗ ಚಟುವಟಿಕೆಯ ಬಗ್ಗೆ ವಿಮರ್ಶೆ ನಡೆಯಿತು. ಮೊದಲಾಗಿ ಅನ್ನಪೂರ್ಣೇಶ್ವರಿ ಆರತಿ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ನೆರವೇರಿತು.ಸಂಜೆ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶಿತವಾಯಿತು. ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದಿಂದ ಸಿದ್ಧಿ ಯೋಗ ಮಾಡಿದ ಸ್ವಯಂಸೇವಕರು ಮಂಗಳೂರಿನ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಪಾದಯಾತ್ರೆಯಲ್ಲಿ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸಿದರು.