ಸರಳ ಬದುಕು-ಸಮನ್ವಯ ದೃಷ್ಟಿಯ ಮೋನಪ್ಪ ಗೌಡ ಕಾಟೂರು

0

ಮೇಲ್ನೋಟಕ್ಕೆ ಸರಳವಾಗಿ, ಆಳದಲ್ಲಿ ಅಸಾಧಾರಣ ಸಾಧಕರ ಮೇಲ್ಪಂಕ್ತಿ ಹೊಂದಿದವರು. ಇನ್ನೊಬ್ಬರಿಗೆ ಒಳಿತಲ್ಲದೆ ಕೆಡುಕನ್ನು ಸರ್ವದಾ ಬಯಸದ, ನಮ್ಮೆಲ್ಲರೊಂದಿಗಿದ್ದೂ ತನ್ನ ವಿಶಿಷ್ಟತೆಯ ಬಲುಮೆಯಿಂದ ಪ್ರತ್ಯೇಕವಾಗಿ ಕಾಣುವ ಒಂದು ಸರಳ ಸಜ್ಜನಿಕೆಯ ವ್ಯಕ್ತಿತ್ವ. ನಮ್ಮ ವಿದ್ಯಾ ಸಂಸ್ಥೆಯ ದ್ವಿ. ದರ್ಜೆ ಸಹಾಯಕರಾಗಿರುವ ಮೋನಪ್ಪ ಗೌಡ ಕಾಟೂರು ನಮ್ಮೆಲ್ಲರ ಪ್ರೀತಿಯ ಮೋನಪ್ಪಣ್ಣ.

ಮೋನಪ್ಪಣ್ಣನ ವ್ಯಕ್ತಿತ್ವ ನನಗೆ ಆಪ್ತವಾಗುವುದು ಯಾಕೆಂದರೆ ಅಲ್ಲಿ ಕಪಟವಿಲ್ಲ. ಒಂದು ನಿಷ್ಕಲ್ಮಷ ಹೃದಯದ, ಭಾವದ ಒರತೆಯುಳ್ಳ, ಎಲ್ಲರೊಳಗೊಂದಾಗುವ ಹಿರಿದಾದ ಗುಣ ಮೋನಪ್ಪಣ್ಣನನ್ನು ಬೇರೆಯವರಿಂದ ಪ್ರತ್ಯೇಕಿಸುತ್ತದೆ.

೧೯೬೪ ದಶಂಬರ ತಿಂಗಳ ೨೪ರಂದು ಮೋನಪ್ಪಣ್ಣನ ಜನನ. ಜಾಲ್ಸೂರು ಗ್ರಾಮದ ಕಾಟೂರು ಎಂಬಲ್ಲಿ. ತಂದೆ ಲಿಂಗಪ್ಪ ಗೌಡರು, ತಾಯಿ ಮಾತೃಶ್ರೀ ಕಮಲ ಎಂಬವರು. ಇವರಿಗೆ ಓರ್ವಳೇ ಸಹೋದರಿ ಲೀಲಾವತಿ. ಸುಶ್ರೂಷಾಧಿಕಾರಿ(Staff Nurse) ಯಾಗಿ ಕರ್ತವ್ಯ ನಿರತರು. ಇವರ ಧರ್ಮಪತ್ನಿ ಹರಿಣಾಕ್ಷಿ ಕೆ. ಇಬ್ಬರು ಮಕ್ಕಳು.ಹಿರಿಯ ಮಗ ಮನ್ವಿತ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರನಾಗಿಬೆಂಗಳೂರಿನಲ್ಲಿ ಉದ್ಯೋಗಿ. ಕಿರಿಯ ಮಗ ಸುಮಿತ್ ಪಿಯುಸಿ ವ್ಯಾಸಂಗದಲ್ಲಿ ನಿರತ.

ಮೋನಪ್ಪರು ತನ್ನೂರಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ಸುಳ್ಯ ಸ ಪ.ಪೂ. ಕಾಲೇಜಿನಲ್ಲಿ ಪಿಯುಸಿ ವರೆಗೆ ಶಿಕ್ಷಣವನ್ನು ಪಡೆಯುತ್ತಾರೆ. ಪಿಯುಸಿಯಲ್ಲಿರುವಾಗ ಅಂತರರಾಷ್ಟ್ರೀಯ NSS ಶಿಬಿರ ಬೆಂಗಳೂರಿನ ಯಲಹಂಕದಲ್ಲಿ ನಡೆದಾಗ ಇವರು ಮತ್ತು ಇನ್ನೊಬ್ಬ ವಿದ್ಯಾರ್ಥಿಯನ್ನು ಶಿಬಿರಾರ್ಥಿಗಳಾಗಿ ಕಳುಹಿಸಲಾಗಿತ್ತು ಎಂಬ ವಿಚಾರವನ್ನು ವಿಶದಪಡಿಸುತ್ತಾರೆ. ಸಮಾಜಸೇವೆ ಎನ್ನುವುದು ನಮ್ಮ ಹೃದಯದಿಂದ ಬರಬೇಕು. ಆಡಂಬರಕ್ಕೂ ತೋರಿಕೆಗೂ ಸಮಾಜಸೇವೆಯ ಮುಖವಾಡ ಸರಿಯಲ್ಲ ಎಂಬುದು ಬಲ್ಲವರ ಅಂಬೋಣ. ಈ ಮಾತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಶ್ರೀಯುತರು ಈ ಶಿಬಿರದಲ್ಲಿ ಸಕ್ರಿಯವಾಗಿ, ಪ್ರತಿಯೊಂದು ಕ್ಷಣವೂ ಅಮೂಲ್ಯ ಎಂಬ ರೀತಿ ತೊಡಗಿಸಿಕೊಳ್ಳುತ್ತಾರೆ.

ಶ್ರೀಯುತರು ಬಿ ಎ ಪದವಿಯನ್ನು ನೆಹರೂ ಸ್ಮಾರಕಮಹಾವಿದ್ಯಾಲಯದಲ್ಲಿ ಪಡೆಯುತ್ತಾರೆ. ನಂತರದ ದಿನಗಳಲ್ಲಿ ಉದ್ಯೋಗವನ್ನು ಅರಸಿ ಹೊರಟ ಮೋನಪ್ಪಣ್ಣನಿಗೆ ಕಂಡದ್ದು ಆಧುನಿಕ ಸುಳ್ಯದ ಶಿಲ್ಪಿ, ಶಿಕ್ಷಣ ಗಂಗೆಯ ಹರಿಕಾರ ಪೂಜ್ಯ ಡಾ! ಕುರುಂಜಿ ವೆಂಕಟ್ರಮಣಗೌಡರು ಸ್ಥಾಪಿಸಿದ ಕೆ.ವಿ.ಜಿ ಪಾಲಿಟೆಕ್ನಿಕ್. ೧೯೮೯ನೇ ನವೆಂಬರ್ ತಿಂಗಳಲ್ಲಿ ಈ ವಿದ್ಯಾಸಂಸ್ಥೆಯಲ್ಲಿ ಪರಿಚಾರಕರಾಗಿ (Attender)) ಸೇರಿಕೊಳ್ಳುತ್ತಾರೆ. ಒಂದಷ್ಟು ಕಾಲ ಈ ಹುದ್ದೆಯಲ್ಲಿ ದುಡಿದ ನಂತರ ೨೦೦೯ ನೇ ಇಸವಿಯಲ್ಲಿ ನಮ್ಮ ವಿದ್ಯಾಸಂಸ್ಥೆ ಸರಕಾರದ ಅನುದಾನಕ್ಕೆ ಒಳಪಟ್ಟಾಗ ಮೋನಪ್ಪಣ್ಣ ದ್ವಿತೀಯ ದರ್ಜೆಯ(SDA) ಸಹಾಯಕರಾಗಿ ನಿಯುಕ್ತಿಗೊಳ್ಳುತ್ತಾರೆ. ಈ ಸುಧೀರ್ಘ ಅವಧಿಯ ಅವರ ಪಯಣ ಒಂದು ಚೇತೋಹಾರಿಯಾದ, ಜೀವನ್ಮುಖೀ ಅಂಶವಾಗಿದೆ. ಮೋನಪ್ಪಣ್ಣನ ಜೀವನ ದೃಷ್ಟಿ ಮತ್ತು ಕರ್ತವ್ಯ ನಿಷ್ಠೆ ಒಂದು ಮಾದರಿ. ತನ್ನಂತೆ ಪರರ ಬಗೆದೊಡೆ ಕೈಲಾಸ ಎಂಬ ಮಾತಿಗೆ ಶ್ರೀಯುತರು ನಿದರ್ಶನವಾಗಿದ್ದಾರೆ.

ನಮ್ಮ ವಿದ್ಯಾಸಂಸ್ಥೆಯಲ್ಲಿ ಕಳೆದ ಕೆಲವು ವರುಷಗಳಿಂದ ರಾಷ್ಟ್ರೀಯ ಸೇವಾ ಯೋಜನೆ(NSS) ಸಕ್ರಿಯವಾಗಿ ಕಾರ್ಯವೆಸಗುತ್ತಿರುವುದು ನಮಗೆಲ್ಲಾ ಗೊತ್ತಿದೆ. ಈ ಯೋಜನೆ ತಾಲೂಕಿನ ಹಲವೆಡೆ ಈಗಾಗಲೇ ವಿಭಿನ್ನ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ಶಿಬಿರಗಳನ್ನು ಆಯೋಜಿಸಿದೆ.ಈ ಮಾತು ಇಲ್ಲಿ ಯಾಕೆ ಪ್ರಸ್ತುತ ಎಂದರೆ ಈ ಯೋಜನೆಯಲ್ಲಿ ಈಗಾಗಲೇ ಶಿಬಿರಾರ್ಥಿಯಾಗಿ ವಿಫುಲವಾದ ಅನುಭವವನ್ನು ಪಡೆದಿರುವ ಅಂತರಂಗದಲ್ಲಿ ಇರಬಹುದಾದ ಶಿಬಿರಾರ್ಥಿ ಎಂಬ ಪರಿಕಲ್ಪನೆ ಜಾಗ್ರೃತವಾಗುತ್ತದೆ. ಹಾಗಾಗಿ ಎಲ್ಲಿ ಸೇವಾ ಯೋಜನೆಯ ಶಿಬಿರಗಳು ನಡೆದರೂ ಅಲ್ಲಿ ಮೋನಪ್ಪಣ್ಣ ಸ್ವಯಂ ಪ್ರೇರಿತರಾಗಿ ಶಿಬಿರ ಆಯೋಜಿಸಲ್ಪಟ್ಟ ಸ್ಥಳದಲ್ಲಿ ಒಂದು ತೆಂಗಿನ ಗಿಡ ಅಥವಾ ಫಲ ನೀಡುವ ಚಿಕ್ಕು ಮುಂತಾದ ಗಿಡವನ್ನು ನೆಡುವ ಸತ್ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಇದರ ಕುರಿತಾದ ಅವರ ಶ್ರದ್ಧೆ ಅಥವಾ ಬದ್ಧತೆ ಎಷ್ಟರ ಮಟ್ಟಿಗೆ ಎಂದರೆ ತಾನೇ ಗುಂಡಿ ತೆಗೆದು ಗಿಡ ನೆಡುವಲ್ಲಿಯವರೆಗೆ.

ಕರ್ತವ್ಯ ಮುಗಿಸಿ ಮನೆ ಸೇರಿದಾಗಲೂ ಶ್ರೀಯುತರಿಗೆ ಬಿಡುವಿಲ್ಲ. ತನ್ನ ಪರಿಶ್ರಮದ ಮೂಲಕ ಕೃಷಿಯಲ್ಲಿ ಸಾರ್ಥಕತೆ ಕಂಡಿದ್ದಾರೆ. ವಿವಿಧ ಬಗೆ ಯ ಸಮೃದ್ಧ ಬೆಳೆಗಳನ್ನು ಬೆಳೆದಿದ್ದಾರೆ.ಜೇನು ಕೃಷಿ,ಕೈ ತೋಟದಲ್ಲಿ ವಿವಿಧ ಬಗೆಯ ತರಕಾರಿ ಬೆಳೆಯುವುದು ಮತ್ತೊಂದು ಕಾಯಕ.

ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜ ಸೇವೆಯ ಪರಿಕಲ್ಪನೆ ಬದಲಾಗುತ್ತಾ ಇದೆ. ಕೆಲವರಿಗೆ ವ್ಯಾವಹಾರಿಕವಾದರೆ, ಆದ್ಯಂತಿಕವಾಗಿ ಈ ಮ್ಮ ಪರಿಕಲ್ಪನೆಯನ್ನು ಬಹಳ ಅಕ್ಕರಾಸ್ತೆಯಿಂದ ಸ್ವೀಕರಿಸಿದವರಿಗೆ ಇದೊಂದು ಅಭಿಮಾನ ಮತ್ತು ಶ್ರದ್ಧೆಯ ಸಂಕೇತ. ಮೋನಪ್ಪಣ್ಣ . ಎರಡನೆಯ ವರ್ಗಕ್ಕೆ ಸೇರುತ್ತಾರೆ. ಮಹಾತ್ಮಾ ಗಾಂಧೀಜಿಯವರ ಸ್ವಚ್ಛತೆ ಎನ್ನುವ ಪರಿಕಲ್ಪನೆಯನ್ನು ಆದರ್ಶವಾಗಿ ಸ್ವೀಕರಿಸಿದ ಶ್ರೀಯುತರು ೨೦೧೮ನೇ ಇಸವಿಯಿಂದೀಚೆಗೆ ನಮ್ಮ ವಿದ್ಯಾ ಸಂಸ್ಥೆಯ ಆವರಣ ಮತ್ತು ಸುತ್ತಲಿನ ಪ್ರದೇಶವನ್ನು ತಿಂಗಳಿಗೊಂದು ಸಲ ಸ್ವಚ್ಛಗೊಳಿಸುವ ಒಂದು ಮಹತ್ತರ ನಿರ್ಧಾರ ಮಾಡುತ್ತಾರೆ. ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ಈ ಸ್ವಚ್ಛತಾ ಆಂದೋಲನದಲ್ಲಿ ಕೈಜೋಡಿಸುತ್ತಿದ್ದಾರೆ. ಇದು ಮೋನಪ್ಪರನ್ನು ಸ್ವಚ್ಛತಾ ರಾಯಭಾರಿ ಎಂದು ಪರಿಗಣಿಸಲು ಆಸ್ಪದ ನೀಡಿದೆ.

ಇಂತಹ ಸಹೃದಯಿ, ಸ್ನೇಹಜೀವಿ ಮೋನಪ್ಪ ಗೌಡರು ವೃತ್ತಿಯಿಂದ ನಿವೃತ್ತರಾಗುವ ಸಮಯ ಸನ್ನಿಹಿತವಾಗುತ್ತಿದೆ. ಹೌದು, ಪ್ರತಿಯೊಬ್ಬ ನೌಕರನ ವೃತ್ತಿ ಜೀವನದಲ್ಲಿ ಘಟಿಸಬಹುದಾದ ಘಟ್ಟ ಇದು. ಇದೇ ತಿಂಗಳ ಅಂದರೆ ಡಿಸೆಂಬರ್೩೧ ೨೦೨೪ರಂದು ಅವರನ್ನು ಬೀಳ್ಕೊಡುವ ಹೊಣೆಗಾರಿಕೆ ನಮ್ಮೆಲ್ಲರದು. ಸ್ನೇಹಜೀವಿ ನಿಡುಗಾಲ ಬಾಂಧವ್ಯಕ್ಕೆ ನಿದರ್ಶನವಾಗಿರುವ ಮೋನಪ್ಪರ ನಿವೃತ್ತಿ ಜೀವನವು ಸಮೃದ್ಧವಾಗಿರಲಿ ಎಂಬ ಅಪೇಕ್ಷೆಯೊಂದಿಗೆ.

  • ನಾರಾಯಣ ತೋರಣಗಂಡಿ.