ಶಿಕ್ಷಣದ ಆಶಯ ಜೀವನ ಪ್ರಜ್ಞೆಯನ್ನು ಅರಳಿಸುವುದು, ವ್ಯಕ್ತಿತ್ವ ನಿರ್ಮಾಣ ಮಾಡುವಂತದ್ದು. ಬಾಲ್ಯದಲ್ಲಿ ಮೌಲ್ಯಯುತ ಶಿಕ್ಷಣ ದೊರೆತಾಗ ಸುಸಂಸ್ಕೃತ ಯುವಜನಾಂಗ ರೂಪುಗೊಳ್ಳುತ್ತದೆ. ಪಾರಂಪರಿಕ ಶಿಕ್ಷಣ ಪದ್ಧತಿ ನಮ್ಮ ದೇಶದ ಅಭಿವೃದ್ಧಿಯ ತಳಹದಿಯಾಗಿದ್ದ ಕಾಲವೊಂದಿತ್ತು. ವಿದೇಶದಿಂದಲೂ ವಿದ್ಯಾರ್ಜನೆಯನ್ನು ಉದ್ದೇಶವಿಟ್ಟುಕೊಂಡ ವಿದ್ಯಾ ಕಾಂಕ್ಷಿಗಳು ನಮ್ಮ ದೇಶಕ್ಕೆ ಬರುತ್ತಿದ್ದರು. ನಳಂದ , ತಕ್ಷಶಿಲಾದಂತಹ ವಿದ್ಯಾಲಯಗಳು ಅವರಿಗೆ ವಿದ್ಯಾದಾನ ಮಾಡುತ್ತಿದ್ದವು ಎಂಬುದು ಚರಿತ್ರೆಯಿಂದ ತಿಳಿಯುವ ಸತ್ಯ. ಇದರಿಂದ ಮಾನವೀಯ ಮೌಲ್ಯಗಳು ಉದ್ದಿಪನಗೊಳ್ಳುತ್ತವೆ ಎಂಬುದನ್ನು ಅರ್ಥವಿಸಲು ಸಾಧ್ಯ.
ನಂತರದ ಬೆಳವಣಿಗೆಯಲ್ಲಿ ತಾಂತ್ರಿಕ ಶಿಕ್ಷಣ ತನ್ನ ಪ್ರಭಾವವನ್ನು ಬೀರಲು ತೊಡಗಿತು. ಇದು ಕೌಶಲ್ಯ ಆಧಾರಿತ ಶಿಕ್ಷಣ ಪದ್ಧತಿ. ಇವತ್ತು ನಮ್ಮ ದೇಶದಲ್ಲಿ ಅಸಂಖ್ಯಾತ ವಿ.ವಿಗಳು, ಕಾಲೇಜುಗಳು ತಾಂತ್ರಿಕ ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಅಂಕಿ ಅಂಶಗಳನ್ನು ಗಮನಿಸಿದರೆ ಈಗ ಪ್ರತಿಯೊಂದು ಮನೆಯಲ್ಲಿ ಒಬ್ಬ/ಒಬ್ಬಳು ತಾಂತ್ರಿಕ ಪದವೀಧರರು ಕಾಣಸಿಗುತ್ತಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಫಲವಾಗಿ ತಾಂತ್ರಿಕ ಕಲಿಕೆಗೆ ಮಹತ್ವ ಬಂದಿದೆ.
ಇಂತಹ ತಾಂತ್ರಿಕ ಶಿಕ್ಷಣದ ಬೋಧನೆಯ ಹಿನ್ನೆಲೆಯಲ್ಲಿ ನಮ್ಮ ಕೆವಿಜಿ ಪಾಲಿಟೆಕ್ನಿಕ್ ಸದಾ ಮುಂದಿನ ಸಾಲಿನಲ್ಲಿ ಬರುತ್ತದೆ. ಇಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ತೋರುತ್ತಿದ್ದಾರೆ. ಇಂತಹ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮತ್ತು ಅಧ್ಯಾಪನದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಹಲವು ಉಪನ್ಯಾಸಕರು ನಮ್ಮ ಗಮನಕ್ಕೆ ಬರುತ್ತಾರೆ. ಅವರಲ್ಲಿ ನಾನು ಗಮನಿಸುವುದು ನಮ್ಮ ಪ್ರಾಂಶುಪಾಲರಾದ ಶ್ರೀಧರ್ ಎಂ. ಕೆ. ರವರು. ಇವರು ೧೬- ೧೨ -೧೯೬೪ ರಂದು ಜನಿಸಿದರು.
ಶ್ರೀಯುತರ ತಂದೆ ಕೃಷ್ಣಪ್ಪರವರು .ತಾಯಿ ಲಿಂಗಮ್ಮ. ಶ್ರೀಯುತರಿಗೆ ಇಬ್ಬರು ಮಕ್ಕಳು. ಮಗಳು ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ (Tutor) ಬೋಧಕರು.ಮಗ ೭ನೇ ತರಗತಿ ವಿದ್ಯಾರ್ಥಿ.ಶ್ರೀಯುತರು ಪಿ ಇ ಎಸ್ ಕಾಲೇಜು ಮಂಡ್ಯದಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ನಲ್ಲಿ ೧೯೯೨ ರಲ್ಲಿ ಪದವಿ ಪಡೆದರು.೧೯೯೩ರಿಂದ೯೮ ರವರೆಗೆ ಜನರಲ್ ಇನ್ಸೂರೆನ್ಸ್ ಕಂಪನಿಯಲ್ಲಿ ಸರ್ವೇಯರ್ ಆಗಿ ಕರ್ತವ್ಯ ನಿರ್ವಹಣೆ .
೧೯೯೮ರಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗಕ್ಕೆ ಉಪನ್ಯಾಸಕರಾಗಿ ಸೇರ್ಪಡೆ. ೨೦೦೪ರಲ್ಲಿಕೆವಿಜಿ ಕ್ಯಾಂಪಸ್ ನಲ್ಲಿ ಸರ್ವಿಸ್ ಸ್ಟೇಷನ್ ಆಗಲು ಶ್ರೀಧರ್ ಸರ್ ರವರ ಶ್ರಮ ಬಹಳವಿದೆ. ವಾಹನ ನಿರ್ವಹಣೆ(Maintenance )ಕೆಲಸದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಣೆ. ತಮ್ಮ ಉಪನ್ಯಾಸಕ ಹುದ್ದೆಯ ಸುದೀರ್ಘ ಅವಧಿಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ಕೆಲಸದಲ್ಲಿ ಮಾರ್ಗದರ್ಶನ ನೀಡಿದ್ದಾರೆ .ಬೇರೆ ಬೇರೆ ಸೆಮಿನಾರ್ ಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ನೀಡುವ ಉಪನ್ಯಾಸ ನೀಡಿದ್ದಾರೆ.ಶ್ರೀಯುತರು ISTEಯ ಆಜೀವ ಸದಸ್ಯರು.
ಶ್ರೀಯುತರು ಫೆಬ್ರವರಿ ೦೧, ೨೦೨೪ ರಂದು ನಮ್ಮ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾಗಿ ನೇಮಕಗೊಂಡರು. ತಮ್ಮ ಹುದ್ದೆಯನ್ನು ಬದ್ಧತೆ ಮತ್ತು ಕರ್ತವ್ಯ ನಿಷ್ಟೆಯಿಂದ ನೆರವೇರಿಸಿದ್ದಾರೆ ಎಂಬುದು ಗಮನಿಸತಕ್ಕ ಅಂಶ. ನಿಯಮಿತವಾಗಿ ಬೇರೆ ಬೇರೆ ವಿಭಾಗದ ಉಪನ್ಯಾಸಕ/ಬೋಧಕರನ್ನು ಕರೆಸಿ ಬೋಧನಾ ವಿಧಾನ ಹಾಗೂ ಪ್ರಗತಿ ಇವನ್ನು ಪರಿಶೀಲಿಸಿದ್ದು ಗಮನಾರ್ಹ ಅಂಶ.
ಅವರೊಬ್ಬ ಒಳ್ಳೆಯ ಸಂಘಟಕ ಮತ್ತು ದೂರದರ್ಶಿತ್ವವುಳ್ಳವರು. ಇದಕ್ಕೆ ನಿದರ್ಶನ ಸ್ವಲ್ಪ ಸಮಯದ ಮೊದಲು ನಮ್ಮ ಸಂಸ್ಥೆಯ ಬಹುತೇಕ ಎಲ್ಲಾ ಸಿಬ್ಬಂದಿಗಳನ್ನು ಒಟ್ಟು ಸೇರಿಸಿ ಮೈಸೂರು ಕಡೆಗೆ ಅವರು ಆಯೋಜಿಸಿದ ಒಂದು ದಿನದ ಪ್ರವಾಸ. ಇದೊಂದುgood to ಸದಾ ನೆನಪಿನಲ್ಲಿ ಇಡಬೇಕಾದ ಪ್ರವಾಸ ಎಂದರೆ ತಪ್ಪಲ್ಲ. ನಂಜುಂಡೇಶ್ವರ ದೇವಾಲಯ, ಪಯಣ ಎಂಬ ಅದ್ಭುತ ದೃಶ್ಯ ಕಾವ್ಯ ದಿಂದ ತೊಡಗಿ ವೇಣುಗೋಪಾಲಸ್ವಾಮಿ ದೇವಾಲಯದ ವರೆಗಿನ ಪ್ರವಾಸ ಅವಿಸ್ಮರಣೀಯವಾದುದು.
ಸದಾ ಕ್ರಿಯಾಶೀಲರಾಗಿರುವ ಅವರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮನೋಭಾವ ಹೊಂದಿದವರು. ಯಾವುದೇ ಒಂದು ಸಂಸ್ಥೆಯ ಸಮರ್ಪಕ ಕಾರ್ಯ ನಿರ್ವಹಣೆಗೆ ಸಮರ್ಥ ಮುಂದಾಳತ್ವ ಅಗತ್ಯವಿರುತ್ತದೆ. ವಿಭಿನ್ನ ಮನೋಧರ್ಮದ ಸಿಬ್ಬಂದಿಯವರ ಧೋರಣೆಗೆ ಅವರು ಸ್ಪಂದಿಸಿದ್ದಾರೆ. ಹಾಗಾಗಿ ಒಂದು ಸಂತುಲಿತ ವ್ಯವಸ್ಥೆ ಉಂಟಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.ಅವರ ಮುಂದಾಲೋಚನೆಗೆ ಸಾಕ್ಷಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಕಂಡು ಬರುತ್ತದೆ. ಆಡಳಿತಾಧಿಕಾರಿ ಗಳ ಮಾರ್ಗದರ್ಶನ ಹಾಗೂ ಪ್ರಾಂಶುಪಾಲರ ನೇತೃತ್ವದಲ್ಲಿ ನಮ್ಮ ವಿದ್ಯಾಲಯದ ಆಡಿಟೋರಿಯಂ ಹಾಗೂ ಉಳಿದ ಭಾಗಗಳಿಗೆ ಭಾಗಶಃ ನೆಲಹಾಸು( Tiles) ಅಳವಡಿಸಲಾಗಿದೆ.

ಕೆವಿಜಿ ಪಾಲಿಟೆಕ್ನಿಕ್ ನ ಅಭ್ಯುದಯವನ್ನು ಬಯಸುತ್ತಿರುವ ಶ್ರೀಧರ್ ಸರ್ ರವರು ನಿವೃತ್ತಿಯ ಅಂಚಿಗೆ ಬಂದಿದ್ದಾರೆ. ಇದೊಂದು ಅನಿವಾರ್ಯ ಘಟ್ಟ. ತಮ್ಮೆಲ್ಲ ಅಧಿಕಾರದ ಜವಾಬ್ದಾರಿಯನ್ನು ಮತ್ತೊಬ್ಬರ ಹೆಗಲಿಗೆ ಏರಿಸಿ ಮುಂದಡಿ ಇಡುವ ಕಾರ್ಯಕ್ಕೆ ಸಜ್ಜಾಗುತ್ತಿದ್ದಾರೆ. ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಒಡನಾಟ, ಸ್ನೇಹ ಪರ ನಡವಳಿಕೆ ಹೊಂದಿದ ಶ್ರೀಯುತರು ನಮಗೊಂದು ಮಾದರಿಯಾದ ವ್ಯಕ್ತಿ ಎಂಬುದು ಗಮನಾರ್ಹ ಸಂಗತಿ. ನಿವೃತ್ತಿ ಎನ್ನುವುದು ಎಲ್ಲಾ ಜವಾಬ್ದಾರಿಗಳನ್ನು ಕಳಚಿ ಮುಕ್ತರಾಗುವ ಒಂದು ಪ್ರಕ್ರಿಯೆ. ಹಾಗಾಗಿ ಶ್ರೀಯುತರ ಮುಂದಿನ ಜೀವನವು ನೆಮ್ಮದಿ ಹಾಗೂ ಸಮೃದ್ಧಿಯಿಂದ ಇರಲೆಂದು ಹಾರೈಸುತ್ತೇನೆ.
- ನಾರಾಯಣ ತೋರಣಗಂಡಿ ಸಪ್ತಸ್ವರ ಪೈಲೂರು.