ಹಸಿರುವಾಣಿ ಸಮರ್ಪಣೆ
ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜನವರಿ 1 ರಿಂದ 7 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಎಣ್ಮೂರು, ಎಡಮಂಗಲ, ಮುರುಳ್ಯ ಇನ್ನಿತರ ಕಡೆಗಳಿಂದ ಭಕ್ತಾದಿಗಳಿಂದ ಹಸಿರು ವಾಣಿ ಸಮರ್ಪಣೆ ಇಂದು ನಡೆಯಿತು.
ದೇವಳದ ವ್ಯವಸ್ಥಾಪನ ಸಮಿತಿಯವರ ಮಾರ್ಗದರ್ಶನದಲ್ಲಿ ಅಲೆಕ್ಕಾಡಿ ಕೋಟಿ ಚೆನ್ನಯ ಮುಖ್ಯದ್ವಾರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲುರವರು ಭಕ್ತಾದಿಗಳ ಏಳಿಗೆಯ ಬಗ್ಗೆ ಪ್ರಾರ್ಥನೆ ಮಾಡಿ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ದೇವಳದಲ್ಲಿ ಪ್ರಾರ್ಥನೆಯ ಬಳಿಕ ಉಗ್ರಾಣ ತುಂಬಿಸಲಾಯಿತು.
ಪೂರ್ವ ಪದ್ಧತಿಯಂತೆ ಅಡಿಕೆ ಗೊನೆ, ಬಾಳೆಗೊನೆ, ತೆಂಗಿನಕಾಯಿ, ಹಿಂಗಾರ, ಸಿ, ದವಸಧಾನ್ಯ, ಅಕ್ಕಿ, ಜೇನುತುಪ್ಪ, ಎಣ್ಣೆ, ತರಕಾರಿಗಳು ,ಬಾಳೆಎಲೆ ಸೇರಿಸಿ ಇಡಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ, ಸೇವಾ ಸಮಿತಿ, ಮಹಿಳಾ ಸೇವಾ ಸಮಿತಿ, ಕೂಡುಕಟ್ಟಿನ ಭಕ್ತಾದಿಗಳು, ಮಹಿಷ ಮರ್ದಿನಿ ಕಲಾಸಂಘ, ಶ್ರೀ ಮಹಿಷ ಮರ್ದಿನಿ ಕಲಾ ಕೇಂದ್ರ, ಒಡಿಯೂರು ಸೇವಾ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವಾ ತಂಡಗಳು, ಪದಾಧಿಕಾರಿಗಳು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಸಿರು ವಾಣಿ ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಶ್ರೀ ಕಪಿಲೇಶ್ವರ ಕಲಾ ಸಮಿತಿ ಚಾರ್ವಕದವರ ಚಂಡೆ ವಾದನ ಮೆರವಣಿಗೆಗೆ ಮೆರುಗು ನೀಡಿತ್ತು.
(ಎ ಎಸ್ ಎಸ್ ಅಲೆಕ್ಕಾಡಿ)