ಪೆರಾಜೆ ಜ್ಯೋತಿ ಪ್ರೌಢಶಾಲಾ ಆಡಳಿತ ವಹಿಸಿಕೊಂಡ ಪ್ರಣವ ಫೌಂಡೇಶನ್

0

ವಿದ್ಯಾರ್ಥಿಗಳಿಗೆ ಸರಕಾರಿ ಫೀಸ್ ಮಾತ್ರ ಪಡೆದು ಉಚಿತ ಪ್ರವೇಶ

ಉಚಿತ ಸಮವಸ್ತ್ರ, ಪುಸ್ತಕ ವಗೈರೆ ನೀಡಲು ನಿರ್ಧಾರ

ಪೆರಾಜೆಯ ಜ್ಯೋತಿ ಪ್ರೌಢಶಾಲೆಯನ್ನು ಇನ್ನು ಮುಂದಕ್ಕೆ ಬೆಂಗಳೂರಿನ ಪ್ರಣವ ಫೌಂಡೇಶನ್ ನೋಡಿಕೊಳ್ಳಲಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಜ್ಯೋತಿ ವಿದ್ಯಾ ಸಂಘವು ಪ್ರಣವ ಫಂಡೇಶನ್ ಗೆ ಆಡಳಿತವನ್ನು ಬಿಟ್ಟುಕೊಟ್ಟಿದೆ” ಎಂದು ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷರಾಗಿದ್ದ ಡಾ.ಎನ್.ಎ.ಜ್ಞಾನೇಶ್ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.

ಜ್ಯೋತಿ ಪ್ರೌಢಶಾಲೆ ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆ. ಅಲ್ಲಿ ಸರಕಾರಿ ಸಂಬಳ ಪಡೆಯುತ್ತಿದ್ದ ಶಿಕ್ಷಕರು ನಿವೃತ್ತಿಯಾದ ಬಳಿಕ ಹೊಸ ಶಿಕ್ಷಕರಿಗೆ ಸರಕಾರ ನೇಮಕಾತಿ ಮಾಡಿಕೊಳ್ಳದಿರುವುದರಿಂದ ಮತ್ತು ಹೊಸದಾಗಿ ಆಡಳಿತ ಮಂಡಳಿಯು ನೇಮಕ ಮಾಡಿಕೊಳ್ಳುವ ಶಿಕ್ಷಕರಿಗೆ ಸರಕಾರ ವೇತನ ನೀಡದಿರುವುದರಿಂದ ಈಗ ಇರುವ ಒಬ್ಬ ಶಿಕ್ಷಕರನ್ನು ಹೊರತುಪಡಿಸಿ , ಇತರ ಎಲ್ಲ ಶಿಕ್ಷಕರಿಗೂ ಆಡಳಿತ ಮಂಡಳಿಯೇ ಸಂಬಳ ನೀಡಬೇಕಾಗಿರುತ್ತದೆ.‌ ಪ್ರತಿ ತಿಂಗಳೂ ಸಂಬಳ ಸರಿಯಾಗಿ ನೀಡಲು ನಮಗೆ ಕಷ್ಟವಾಗುತ್ತಿತ್ತು. ಆದ್ದರಿಂದ ನಾವು ಶಾಲೆಯನ್ನು ಯಾರಾದರೂ ವಹಿಕೊಳ್ಳುವರೇ ಎಂದು ಕಾಯುತ್ತಿದ್ದೆವು. ಈಗ ರಾಕೇಶ್ ರೈಯವರ ಅಧ್ಯಕ್ಷತೆಯ ಪ್ರಣವ ಫೌಂಡೇಶನ್ ಶಾಲೆ ನಡೆಸಲು ಮುಂದೆ ಬಂದುದರಿಂದ ನಾವು ಊರವರು ಅವರಿಗೆ ಶಾಲೆ ಬಿಟ್ಟುಕೊಡಲು ಒಪ್ಪಿದ್ದೇವೆ. ಅದರಂತೆ ಆಡಳಿತ ಹಸ್ತಾಂತರವಾಗಿದೆ. ನಾನು, ಎನ್.ಎ.ರಾಮಚಂದ್ರರು, ಹರಿಶ್ಚಂದ್ರ ಮುಡುಕಜೆ, ಕೆ.ಕೆ.ಪದ್ಮಯ್ಯ, ಡಿ.ಪಿ.ಪೂವಪ್ಪ ಮೊದಲಾದವರೆಲ್ಲ ಕಮಿಟಿಯಲ್ಲಿರುತ್ತೇವೆ ” ಅವರು ಹೇಳಿದರು.

ಪ್ರಣವ ಫೌಂಡೇಶನ್ ಅಧ್ಯಕ್ಷ ಹಾಗೂ ಜ್ಯೋತಿ ಪ್ರೌಢಶಾಲಾ ನೂತನ ಅಧ್ಯಕ್ಷ ರಾಕೇಶ್ ರೈ ಯವರು ಮಾತನಾಡಿ ” ಜ್ಯೋತಿ ಪ್ರೌಢಶಾಲೆಯ ಆಡಳಿತವನ್ನು ಡಿಸೆಂಬರ್ 24 ರಂದು 2024 ರಂದು ನಮ್ಮ ಪ್ರಣವ ಫೌಂಡೇಶನ್ ವಹಿಸಿಕೊಂಡಿದೆ. ನಾನು ಅಧ್ಯಕ್ಷನಾಗಿ, ನಾಗರಾಜ್ ಬಿ. ಹೆಬ್ಬಾಳ್ ಕಾರ್ಯದರ್ಶಿಯಾಗಿ, ರಕ್ಷಿತ್ ಕೆ.ಬಿ. ಉಪಾಧ್ಯಕ್ಷರಾಗಿ ಮಂಜುನಾಥ್ ಯು.ಎಚ್. ಖಜಾಂಚಿಯಾಗಿ ಹಾಗೂ ಮಹೇಶ್ ಕುಮಾರ್ ರೈ ಮೇನಾಲರವರು ಸಂಚಾಲಕರಾಗಿ ಅಧಿಕಾರ ವಹಿಸಿಕೊಂಡಿದ್ದೇವೆ. ಆಧುನಿಕ ಜಗತ್ತಿನ ಸವಾಲುಗಳಿಗೆ ತಕ್ಕಂತೆ ಗ್ರಾಮೀಣ ಮಕ್ಕಳನ್ನು ಅಣಿಗೊಳಿಸುವುದು ಹಾಗೂ ಸೂಕ್ತ ಅವಕಾಶಗಳನ್ನು ನೀಡಿ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಬೆಳೆಸುವುದು ಪ್ರಣವ್ ಫಂಡೇಶನ್ ಗುರಿ. ಮುಂದಿನ ವರ್ಷದಿಂದ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತದೆ. ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಮತ್ತು ಇತರ ವಿದ್ಯಾರ್ಥಿ ವೇತನ ನೀಡಲಾಗುವುದು. ಪ್ರತೀ ವರ್ಷ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗುವುದು. ಶಾಲಾ ವಾಹನ ವ್ಯವಸ್ಥೆ, ಕಂಪ್ಯೂಟರ್ ಡಿಜಿಟಲ್ ಶಿಕ್ಷಣ, ಬಿಸಿ ಊಟ, ಉಚಿತ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಬಾಲಕರಿಗೆ ವಸತಿನಿಲಯದ ವ್ಯವಸ್ಥೆ, ಜೀವನ ಕೌಶಲ್ಯ ವಿಶೇಷ ತರಬೇತಿ ವ್ಯವಸ್ಥೆ ಮಾಡಲಾಗುವುದು ” ಎಂದು ರಾಕೇಶ್ ರೈ ಕೆ. ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಕ್ಷಿತ್ ಕೆ.ಪಿ., ಮಂಜುನಾಥ್ ಯು.ಎಚ್., ಗುರುರಂಜನ್ ಪುಣ್ಚಿತ್ತಾಯ, ಶಾಲಾ ಮುಖ್ಯೋಪಾಧ್ಯಾಯ ಜಿ.ಆರ್.ನಾಗರಾಜ್ ಉಪಸ್ಥಿತರಿದ್ದರು