ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವರದಿಗಾರ ಗುರುವಪ್ಪ ಬಾಳೆಪುಣಿಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು ಅವರಿಗೆ 62 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಕರುಳಿನ ಕ್ಯಾನ್ಸರ್ ಗೆ ಒಳಗಾಗಿ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅವರು ಚೇತರಿಸಿಕೊಂಡಿದ್ದರೂ , ಬದುಕುವುದು ಕಷ್ಟವೆಂದು ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ” ಗುರುವಪ್ಪರು ತೀರಿಕೊಂಡರಂತೆ ” ಎಂಬ ಸುದ್ದಿಯನ್ನು ನಂಬಿ ಮಂಗಳೂರಿನ ಮತ್ತು ಜಿಲ್ಲೆಯ ಎಲ್ಲ ಮಾಧ್ಯಮಗಳೂ, ಸಾಮಾಜಿಕ ಜಾಲತಾಣಗಳೂ ಅವರ ನಿಧನದ ಸುದ್ದಿಯನ್ನು ಪ್ರಕಟಿಸಿದ್ದವು. ಆದರೆ ಅವರು ಕೊನೆಯುಸಿರೆಳೆದಿಲ್ಲ..ಜೀವನ್ಮರಣ ಸ್ಥಿತಿಯಲ್ಲಿ ಪ್ರಾಣ ಹಿಡಿದಿಟ್ಟುಕೊಂಡಿದ್ದಾರೆಂಬ ವಿಷಯ ಸುದ್ದಿ ಗೆ ತಿಳಿದು ಅವರು ಬದುಕಿರುವ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಇದು ಸಾಕಷ್ಟು ವೈರಲ್ ಆದುದರಿಂದ ಅನೇಕರು ಗುರುವಪ್ಪರ ಅಂತಿಮ ದರ್ಶನಕ್ಕೆ ಹೊರಟವರು ಹೋಗದೆ ನಿಂತಿದ್ದರು.
ಇಂದು ಗುರುವಪ್ಪ ಬಾಳೆಪುಣಿಯವರು ಕೊನೆಯುಸಿರೆಳೆದಿದ್ದಾರೆ.
ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ನಿಷ್ಠುರ ಪತ್ರಕರ್ತರಾಗಿದ್ ಎನ್.ಟಿ.ಗುರುವಪ್ಪರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ೨೬ ವರ್ಷಕಾಲ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ನಾಡಿಗೆ ಪರಿಚಯಿಸಿದ ಕೀರ್ತಿ ಇವರದ್ದು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.