ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಸುರತ್ಕಲ್ ಇದರ ನಲವತ್ತರ ನಲಿವು ಸಂಭ್ರಮದ ಅಂಗವಾಗಿ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಸುಳ್ಯ ರಂಗಮನೆಯ ರೂವಾರಿ, ರಂಗನಿರ್ದೇಶಕ ಡಾ| ಜೀವನ್ ರಾಂ ಸುಳ್ಯ ಇವರನ್ನು ನಾಟ್ಯಾಂಜಲಿ ಸನ್ಮಾನ ನೀಡಿ ಗೌರವಿಸಲಾಯಿತು.
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸುವ, ನಾಡೋಜ ಹಂಪನಾ ವಿರಚಿತ, ಡಾ.ನಾ.ದಾಮೋದರ ಶೆಟ್ಟಿ ರಂಗರೂಪಕ್ಕಿಳಿಸಿದ 'ಚಾರುವಸಂತ' ನಾಟಕದ 26 ನೇ ಪ್ರದರ್ಶನವನ್ನು ನಾಟ್ಯಾಂಜಲಿ ಸಂಘಟಿಸಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಜೀವನ್ ರಾಂ ರನ್ನು ಸನ್ಮಾನಿಸಿದ ನಿವೃತ್ತ ಕುಲಪತಿಗಳಾದ
ಪ್ರೊ| ಬಿ.ಎ.ವಿವೇಕ ರೈ ಮಾತನಾಡಿ ” ತನ್ನ ರಂಗನಿಷ್ಠೆಯ ಮೂಲಕವೇ ಇಂದು ಕನ್ನಡ ರಂಗಭೂಮಿಯ ಶ್ರೇಷ್ಠ ನಿರ್ದೇಶಕನಾಗಿ ಗುರುತಿಸಿಕೊಂಡ ಜೀವನ್ ರಾಂ ನಿಜಕ್ಕೂ ರಂಗಮಾಂತ್ರಿಕರೇ ಆಗಿದ್ದಾರೆ. ಅವರು ನಿರ್ದೇಶಿಸಿದ ಚಾರುವಸಂತವನ್ನು ಈಗಾಗಲೇ ನಾನು ಒಮ್ಮೆ ನೋಡಿದ್ದೇನೆ. ಪ್ರೇಕ್ಷಕರ ಒಂದು ನಿಮಿಷವೂ ವ್ಯರ್ಥವೆನಿಸದಂತೆ ನಾಟಕವನ್ನು ಕಟ್ಟುವ ಅವರ ಕಲಾ ಪ್ರತಿಭೆ ಅಸಾಧಾರಣವಾದುದು” ಎಂದರು.



ವೇದಿಕೆಯಲ್ಲಿ ಹಿರಿಯ ನೃತ್ಯಗುರು ವಿದ್ವಾನ್ ಉಳ್ಳಾಲ ಮೋಹನ ಕುಮಾರ್, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಆಳ್ವಾಸ್ ಶಿಕ್ಷ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ, ಸಂಘಟಕ ಹರೀಶ್ ಪೇಜಾವರ, ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ಚಂದ್ರಶೇಖರ ನಾವುಡ ಹಾಗೂ ಟ್ರಸ್ಟಿ ಶ್ರೀಮತಿ ಸುಮಾ ನಾವುಡ, ಕಲಾವಿದೆ ಶ್ರೀಮತಿ ಸುಮಂಗಲಾ ರತ್ನಾಕರ ಉಪಸ್ಥಿತರಿದ್ದರು.
ಬಳಿಕ ತುಂಬಿದ ಸಭಾಗೃಹದಲ್ಲಿ ಚಾರುವಸಂತ ನಾಟಕ ಪ್ರದರ್ಶನಗೊಂಡಿತು.