ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿಗೆ ಸುವರ್ಣ ಸಂಭ್ರಮ

0

ಕೊಡಿಯಾಲ ಗ್ರಾಮದ ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿಗೆ ಈ ವರ್ಷ 50ರ ಸಂಭ್ರಮ. ಪ್ರತೀ ವರ್ಷ ಮಂಡಳಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಮನೆಗಳಿಗೆ ತೆರಳಿ ಭಜನಾ ಸಂಕೀರ್ಣತೆ ನಡೆಸಿ ಮನೆಯವರಿಂದಲೇ ತುಳಸೀ ಕಟ್ಟೆಯ ಬಳಿ ಆರತಿ ಬೆಳಗಿಸಿ ಅವರಿಗೆ ಪ್ರಸಾದ, ಪಂಚಕಜ್ಜಾಯ ನೀಡಿ ಇನ್ನೊಂದು ಮನೆಗೆ ತೆರಳುವುದು ಇವರ ವಾಡಿಕೆ.


ಭಜನಾ ಮಂಡಳಿಯನ್ನು ಕಟ್ಟಿ, ಕಳೆದ 50 ವರ್ಷಗಳಿಂದ ಮಂಡಳಿಯ ಅಧ್ಯಕ್ಷರಾಗಿ ಮಂಡಳಿಯನ್ನು ಬೆಳೆಸಿದವರು ಬಾಚೋಡಿ ವೆಂಕಟೇಶ ಪೈ ಕೊಡಿಯಾಲ. ಭಜನಾ ಸಂಕೀರ್ಣತೆಗೆ ಹೋಗುವ ಸಂದರ್ಭದಲ್ಲಿ ಆ ಮನೆಯಲ್ಲಿ ವಿಶೇಷ ಸಾಧಕರಿದ್ದರೆ ಅವರನ್ನು ಸನ್ಮಾನಿಸುವುದು, ಹಿರಿಯರಿದ್ದರೆ ಅವರನ್ನು ಗೌರವಿಸಿ ಅವರ ಆಶೀರ್ವಾದ ಮಾರ್ಗದರ್ಶನವನ್ನು ಪಡೆಯುವುದು ಇವರ ಭಜನಾ ಕಾಯಕದಲ್ಲಿ ಸೇರಿಕೊಂಡಿದೆ. ಪ್ರತಿ ವರ್ಷ ಜನವರಿ ತಿಂಗಳಲ್ಲಿ ಜ್ಯೋತಿ ಬೆಳಗುವುದರ ಮೂಲಕ ನಗರ ಭಜನೆಗೆ ಚಾಲನೆ ನೀಡಿ ಸುಮಾರು 1.5 ತಿಂಗಳ ಕಾಲ ಶನಿವಾರ, ಆದಿತ್ಯವಾರ ಸಂಜೆ ಒಂದು ಮನೆಯಲ್ಲಿ ಭಜನೆ ಆರಂಭಿಸಿ‌ ಕೊನೆಯ ಮನೆಯಲ್ಲಿ ಮಂಗಳ ಹಾಡಿ ತೆರಳುತ್ತಾರೆ.

ಧಾರ್ಮಿಕತೆಯ ಬಗ್ಗೆ, ಹಿಂದೂ ಧರ್ಮದ ಆಚರಣೆಯ ಬಗ್ಗೆ ವೇದಿಕೆಗಳಲ್ಲಿ ಮಾತ್ರ ಭಾಷಣ ಮಾಡದೆ ನಿಷ್ಠೆಯಿಂದ ಕಾರ್ಯಗತಗೊಳಿಸಿದವರು ವೆಂಕಟೇಶ ಪೈಯವರ ಭಜನಾ ತಂಡ. ಬಾಚೋಡಿ ವೆಂಕಟೇಶ ಪೈ ಕೊಡಿಯಾಲ ಭಜನಾ ಮಂಡಳಿಯ ಅಧ್ಯಕ್ಷರಾದರೆ, ಡಿ. ವಿಠಲ ಸಾಮಾನಿ ಗೌರವಾಧ್ಯಕ್ಷರಾಗಿ, ಕೆ.ಎಸ್. ಗೌಡ ಗುತ್ತಿನಮನೆ ಕಾರ್ಯಾಧ್ಯಕ್ಷರಾಗಿದ್ದಾರೆ. ದಾಮೋದರ ಪೊಟ್ರೆ ಕಾರ್ಯದರ್ಶಿ, ಭಾಸ್ಕರ ಗೌಡ ಹಡೀಲು ಕೋಶಾಧಿಕಾರಿಯಾಗಿ ಕೆ. ಪ್ರಕಾಶ್ ರೈ ಕಲ್ಲಗದ್ದೆ ಜತೆ ಕಾರ್ಯದರ್ಶಿಯಾದರೆ, ಪದ್ಮನಾಭ ಗೌಡ ಮತ್ತು ಶೇಷಪ್ಪ ಆಚಾರ್ಯ ಉಪಾಧ್ಯಕ್ಷರಾಗಿದ್ದಾರೆ. ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಮತಿ ವಿಜಯಲಕ್ಷ್ಮೀ ಜೆ. ರೈ ಮತ್ತು ದೇವಳದ ಅರ್ಚಕರಾದ ಶಂಕರನಾರಾಯಣ ಮಯ್ಯ ಭಜನಾ ಮಂಡಳಿಗೆ ಪೂರ್ಣ ಬೆಂಬಲ‌ ನೀಡುತ್ತಿದ್ದಾರೆ.

ಬರುವ ಮಾರ್ಚ್ 8ನೇ ತಾರೀಖಿನಂದು ನಗರ ಭಜನೆ ಮುಕ್ತಾಯಗೊಂಡು ಅಂದು ಬೆಳಗ್ಗೆ 6 ಗಂಟೆಯಿಂದ ಅಹೋರಾತ್ರಿ ಅಖಂಡ ಭಜನೋತ್ಸವ, ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮ ನಡೆದು, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಮರುದಿನ ಬೆಳಿಗ್ಗೆ ಭಜನಾ ಮಂಗಳೋತ್ಸವದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ವೆಂಕಟೇಶ ಪೈಯವರು ತಮ್ಮ ಮನೆಯಲ್ಲಿ ತಮ್ಮ ಅಜ್ಜನ ಕಾಲದಿಂದಲೂ ಚೌತಿ ಸಂದರ್ಭದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡಿ ತಮ್ಮ ತೋಟದ ಕೆರೆಯಲ್ಲಿ ವಿಸರ್ಜಿಸುತ್ತಾ ಬರುತ್ತಿದ್ದು, ಈ ಪರಂಪರೆ 103 ವರ್ಷಗಳಿಂದ ನಡೆದುಕೊಂಡು ಬರುತ್ತಿರುವುದಾಗಿ ಪತ್ರಿಕೆಗೆ ತಿಳಿಸಿರುತ್ತಾರೆ.