ಸುಳ್ಯ ಮೆಸ್ಕಾಂ, ಇಂಜಿನಿಯರಿಂಗ್ ಪೋಲೀಸ್, ಲೋಕೋಪಯೋಗಿ, ಸಾಮಾಜಿಕ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಗೈರು ಹಿನ್ನೆಲೆ

0

ಜಾಲ್ಸೂರು ಗ್ರಾ‌.ಪಂ. ದ್ವಿತೀಯ ಹಂತದ ಗ್ರಾಮಸಭೆ ಮುಂದೂಡಿಕೆ

ಗ್ರಾಮಸಭೆಗೆ ಸುಳ್ಯ ಮೆಸ್ಕಾಂ ಇಂಜಿನಿಯರಿಂಗ್, ಪೊಲೀಸ್, ಲೋಕೋಪಯೋಗಿ, ಸಾಮಾಜಿಕ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಗೈರು ಹಿನ್ನೆಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಜಾಲ್ಸೂರು ಗ್ರಾಮ ಪಂಚಾಯತಿಯ
2024- 25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಮುಂದೂಡಿಕೆಯಾದ ಘಟನೆ ವರದಿಯಾಗಿದೆ.

ಗ್ರಾಮಸಭೆ ಆರಂಭಗೊಂಡು, ವರದಿ ಮಂಜೂರುಗೊಂಡ ಬಳಿಕ ಇಲಾಖೆಯ ಅಧಿಕಾರಿಗಳು ಯಾರೆಲ್ಲ ಬಂದಿದ್ದಾರೆ ಎಂದು ಗಪೂರ್ ಕುಂಬರ್ಚೋಡು, ಹಮೀದ್ ಅಡ್ಕಾರು, ದಿನೇಶ್ ಅಡ್ಕಾರು, ರವಿರಾಜ್ ಗಬ್ಬಲಡ್ಕ, ಸತ್ಯಶಾಂತಿ ತ್ಯಾಗಮೂರ್ತಿ, ಅಬ್ದುಲ್ ಲತೀಫ್ ಅಡ್ಕಾರು ಮತ್ತಿತರ ಗ್ರಾಮಸ್ಥರು ಪ್ರಶ್ನಿಸಿದರು. ಆಗ ಸಭೆಯಲ್ಲಿದ್ದ ಗ್ರಾ.ಪಂ.ಪ್ರಭಾರ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ ಅವರು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಗ್ರಾಮಸಭೆಯ ಮಾಹಿತಿ ನೀಡಿ ನೋಟೀಸ್ ಮಾಡಲಾಗಿದೆ ಎಂದರು.
ಆಗ ನೋಡೆಲ್ ಅಧಿಕಾರಿಯವರು ಅಧಿಕಾರಿಗಳು ಬರುವುದಾಗಿ ಭರವಸೆ ನೀಡಿದ್ದಾರೆ‌ . ಈಗಾಗಲೇ ಗ್ರಾಮಸಭೆಗೆ ಕೆಲವು ಇಲಾಖೆಯ ಅಧಿಕಾರಿಗಳು ಬಂದಿದ್ದಾರೆ ಎಂದು ಹೇಳಿದರು.
ಬಳಿಕ ಗ್ರಾಮಸಭೆಗೆ ಬಂದ ಇಲಾಖೆ ಅಧಿಕಾರಿಗಳ ಬಗ್ಗೆ ತಿಳಿಸಿ ಎಂದು ಗ್ರಾಮಸ್ಥರು ಹೇಳಿದಾಗ ಸಮಸಜ ಕಲ್ಯಾಣ, ಅರಣ್ಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮೆಸ್ಕಾಂ ಜಾಲ್ಸೂರು ಉಪವಿಭಾಗ, ತಾ.ಪಂ., ಯುವಜನ ಕ್ರೀಡಾಧಿಕಾರಿ,ಆರೋಗ್ಯ ಇಲಾಖೆ, ತೋಟಗಾರಿಕಾ ಇಲಾಖೆಯವರು ಉಪಸ್ಥಿತರಿದ್ದರು.

ಆದರೆ ಗ್ರಾಮಸಭೆಗೆ ಮುಖ್ಯವಾಗಿ ಬರಬೇಕಾಗಿದ್ದ ಮೆಸ್ಕಾಂ ಸುಳ್ಯ, ಲೋಕೋಪಯೋಗಿ, ಜಿ.ಪಂ. ಇಂಜಿನಿಯರಿಂಗ್ , ಪೊಲೀಸ್, ಸಾಮಾಜಿಕ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರದ ಕಾರಣ ಅವರು ಬಂದ ಬಳಿಕ ಗ್ರಾಮಸಭೆ ಮುಂದೂಡಿ ಎಂದು ಗ್ರಾಮಸ್ಥರು ಮತ್ತೆ ಪಟ್ಟು ಹಿಡಿದರೆನ್ನಲಾಗಿದೆ. ಮತ್ತೆ ಕೆಲವು ಮಂದಿ ಗ್ರಾಮಸ್ಥರು
ಬರದ ಅಧಿಕಾರಿಗಳಿಗೆ ಫೋನ್ ಮಾಡಿ ಕರೆಯಿಸಿ ಎಂದು ಸಲಹೆ ನೀಡಿದರು. ಆಗ ಮತ್ತೆ ಗ್ರಾಮಸ್ಥರಾದ ಗಪೂರ್, ಹಮೀದ್, ಸತ್ಯಶಾಂತಿ, ದಿನೇಶ್ ಅಡ್ಕಾರು, ರವಿರಾಜ್ ಗಬ್ಬಲಡ್ಕ, ಗೋಪಾಲ ಅಡ್ಕಾರುಬೈಲು, ಲತೀಫ್ ಅಡ್ಕಾರು ಸೇರಿ ಅಧಿಕಾರಿಗಳು ಬರದಿದ್ದರೆ ಗ್ರಾಮಸಭೆ ನಡೆಸುವುದು ಬೇಡ ಅವರಿಗೆ ಸಮಯ ಕೊಡಿ ಅವರು ಬಂದ ಬಳಿಕ ನಾವು ಹೊಸದೊಂದು ದಿನ ನಿರ್ಧರಿಸಿ ಗ್ರಾಮಸಭೆ ನಡೆಸುವ ಎಂದು ಹೇಳಿದರು.
ಕೊನಯದಾಗಿ ಗ್ರಾ.ಪಂ. ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ನೋಡೆಲ್ ಅಧಿಕಾರಿಗಳು ಚರ್ಚೆ ನಡೆಸಿದರು. ಕೊನೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು ಅವರು ಮಾತನಾಡಿ ಗ್ರಾಮಸಭೆಗೆ ಅಗತವಾಗಿ ಬರಬೇಕಾಗಿದ್ದ ಇಲಾಖೆ ಅಧಿಕಾರಿಗಳು ಗೈರಾಗಿರುವ ಕಾರಣ ಗ್ರಾಮಸಭೆ ಮುಂದೂಡುವುದಾಗಿ ಘೋಷಿಸಿದರು.
ಗ್ರಾಮ ಪಂಚಾಯತಿ ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.