ಬೊಳುಬೈಲು ಪೀಸ್ ಸ್ಕೂಲಿನಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಫೆ 24 ರಂದು ಶಾಲೆಯ ಆಡಿಟೋರಿಯಂನಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಕೇರಳದ ಒಟ್ಟಪ್ಪಳಂನಿಂದ ಆಗಮಿಸಿದ ಪ್ರಸಿದ್ಧ ಮನೋವಿಜ್ಞಾನದ ಆಪ್ತ ಸಮಾಲೋಚಕರಾದ ಅಶ್ಕರ್ ಇಬ್ರಾಹಿಂ ಭಾಗವಹಿಸಿದ್ದರು. ಪೋಷಕರಿಗೆ ಇಂದಿನ ಕಾಲಘಟ್ಟದಲ್ಲಿ ಮಕ್ಕಳನ್ನು ಪೋಷಿಸುವಲ್ಲಿ ಎದುರಿಸಬೇಕಾದ ಸವಾಲುಗಳು ಮತ್ತು ಪೋಷಕರ ಜವಾಬ್ದಾರಿಗಳ ಕುರಿತು ಮಾಹಿತಿ ಕಾರ್ಯಗಾರವನ್ನು ನೀಡಿದರು.
ಸಮಾರಂಭದಲ್ಲಿ ಎಲ್ ಕೆ ಜಿ ಯಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ 24-25ನೇ ಶೈಕ್ಷಣಿಕ ವರ್ಷದಲ್ಲಿ ಗಳಿಸಿದ ವಿವಿಧ ಬಹುಮಾನಗಳನ್ನು ವಿತರಿಸಲಾಯಿತು. ಮುಖ್ಯವಾಗಿ ‘ಕರ್ನಾಟಕ ಅಕಾಡೆಮಿ ಆಫ್ ಮ್ಯಾಥೆಮಾಟಿಕ್ಸ್’, ಚಳ್ಳಕೆರೆ, ಇದರ ವತಿಯಿಂದ ನಡೆಸಲಾದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರ್‍ಯಾಂಕ್ ಪಡೆದ ಸುಮಾರು 11 ವಿದ್ಯಾರ್ಥಿಗಳನ್ನು ಗೌರವಿಸಿ ಪ್ರಶಸ್ತಿ ಮತ್ತು ಪದಕಗಳನ್ನು ವಿತರಿಸಲಾಯಿತು.
ಹಾಗೆಯೇ ಶೃಂಗೇರಿ ಟೇಕ್ವಾಂಡೋ ಅಕಾಡೆಮಿಯ ವತಿಯಿಂದ ಸಂಘಟಿಸಲಾದ ರಾಜ್ಯಮಟ್ಟದ ಶೃಂಗೇರಿ ಟೇಕ್ವಾಂಡೋ ಕಪ್ ನಲ್ಲಿ ಭಾಗವಹಿಸಿ ಕಂಚಿನ ಪದಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಿ ಪ್ರಶಸ್ತಿ ಮತ್ತು ಪದಕಗಳನ್ನು ವಿತರಿಸಲಾಯಿತು.



ಶಾಲೆಯಲ್ಲಿ ನಡೆದ ವಾರ್ಷಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಮತ್ತು ಅತ್ಯಧಿಕ ಅಂಕಗಳೊಂದಿಗೆ ಚಾಂಪಿಯನ್ ಆದ ಬ್ಲೂ ಹೌಸ್ ಗೆ ಚಾಂಪಿಯನ್ಶಿಪ್ ಕಪ್ ಹಾಗೆಯೇ ವಾರ್ಷಿಕ ಕ್ರೀಡಾಕೂಟದಲ್ಲಿ ಚಾಂಪಿಯನ್ ಮತ್ತು ರನ್ನರ್ಸ್ ಕಪ್; ಎಲ್ಲಾ ತರಗತಿಗಳಲ್ಲಿ ಕಲಿಕೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಜನರಲ್ ಪ್ರೊಫಿಷಿಯೆನ್ಸಿ ಪ್ರಶಸ್ತಿ, ಅತ್ಯುತ್ತಮ ಶಿಸ್ತು ಪ್ರಶಸ್ತಿ, ಅತ್ಯಧಿಕ ಹಾಜರಾತಿ ಪ್ರಶಸ್ತಿ, ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ವತಿಯಿಂದ ನಡೆಸಲಾದ ಸ್ಮಾರ್ಟ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಓವರ್ ಆಲ್ ನಾಲ್ಕನೇ ರ್‍ಯಾಂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಎರಡನೇ ರ್‍ಯಾಂಕ್ ಪಡೆದ ಆರನೇ ತರಗತಿಯ ಸೋಹಫಾತಿಮಾ ರವರಿಗೆ ಸ್ಮರಣಿಕೆ,ವಿಶೇಷ ಸಾಮರ್ಥ್ಯದೊಂದಿಗೆ ಉತ್ತಮ ಸಾಧನೆ ತೋರಿಸಿದ ಆರನೇ ತರಗತಿಯ ಮುಹಮ್ಮದ್ ನಿಗೆ ಸ್ಮರಣಿಕೆ, ಹಾಗೆಯೇ ಎಲ್ಲಾ ಅಧ್ಯಾಪಕರಿಗೆ,ಪಠ್ಯೇತರ ಸಿಬ್ಬಂದಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ತೌಹೀದ್ ಎಜುಕೇಷನ್ ಆ್ಯಂಡ್ ಚಾರಿಟೇಬಲ್ ಫೌಂಡೇಶನ್(ರಿ.), ಬೊಳುಬೈಲು ಇದರ ಅಧ್ಯಕ್ಷರಾದ ಕೆ. ಅಬೂಬಕರ್ ವಹಿಸಿದ್ದರು.
ಶಾಲೆಯ ಪ್ರಾಂಶುಪಾಲರಾದ ಮುಹಮ್ಮದ್ ಸೈಫುಲ್ಲಾ ಪೋಷಕರನ್ನುದ್ದೇಶಿಸಿ ಪ್ರಮುಖ ವಿಚಾರಗಳನ್ನು ಹಂಚಿಕೊಂಡರು. ಸಮಾರಂಭದಲ್ಲಿ ಅತಿಥಿಗಳಾಗಿ ಸಲಫಿ ಮಸೀದಿ ಪೈಚಾರ್, ಬದ್ರಿಯಾ ಜುಮಾ ಮಸೀದಿ ಪೈಚಾರ್,ಮುಹಿಯುದ್ದೀನ್ ಜುಮ್ಮಾ ಮಸೀದಿ ಅಡ್ಕಾರ್ ಹಾಗೂ ಮುಹಿಯುದ್ದೀನ್ ಜುಮಾ ಮಸೀದಿ ಕುಂಬ್ರಚೋಡಿನ ಅಧ್ಯಕ್ಷರುಗಳಾದ ಕ್ರಮವಾಗಿ ಅಬ್ದುಲ್ಲಾ ಪಿ.ಎಂ, ಜಿ.ಪಿ ಇಬ್ರಾಹಿಂ, ಅಬ್ದುಲ್ಲಾ ಕುಂಞ ಮತ್ತು ಮೊಹಮ್ಮದ್ ಅಲಿ ಹಾಗೂ ಬಣಕಲ್ ಹೈಸ್ಕೂಲ್ ಬಣಕಲ್ ಚಿಕ್ಕಮಗಳೂರಿನ ನಿರ್ದೇಶಕರಾದ ಮುಹಮ್ಮದ್ ಜಕಾವುಲ್ಲಾ ಆಗಮಿಸಿದ್ದರು.ಸಮಾರಂಭದಲ್ಲಿ ಪೀಸ್ ಶಾಲೆ ಮತ್ತು ರಿಸೈಟ್ ಅರೇಬಿಕ್ ಮದ್ರಸ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ಶಾಲೆಯ ಶಿಕ್ಷಕಿಯರಾದ ತಾಹಿರ ಮತ್ತು ರಾಹಿಲಾ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿ ನಾಯಕ ಮುಹಮ್ಮದ್ ಜೈಶ್ ಸ್ವಾಗತಿಸಿ ಫವಾಝ್ ವಂದಿಸಿದರು.
ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಇಹ್ಸಾನ್ ಮತ್ತು ಶಮ್ಮಾಝ್ ಖಿರಾತ್ ಪಠಿಸಿದರು.