ಕಡಬ ತಾಲೂಕು ಬೆಳಂದೂರು ಗ್ರಾಮ ಪಂಚಾಯತ್ ಇದರ ನೂತನ ಅಧ್ಯಕ್ಷರಾಗಿ ತೇಜಾಕ್ಷಿ ಭಾಸ್ಕರ್ ಪೂಜಾರಿ ಕೊಡಂಗೆರವರು ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಮೂಲತ: ಸುಳ್ಯ ತಾಲೂಕಿನ ದುಗ್ಗಲಡ್ಕದ ಬಾಜಿನಡ್ಕ ಮನೆತನದವರು.
ಬಾಜಿನಡ್ಕ ದಿ.ಐತ್ತಪ್ಪ ಪೂಜಾರಿ ಮತ್ತು ರತ್ನಾವತಿ ಇವರ ಪುತ್ರಿಯಾಗಿರುವ ತೇಜಾಕ್ಷಿರವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಕೊಕುಳಿ ಪ್ರಾಥಮಿಕ ಶಾಲೆ ಮತ್ತು ಫ್ರೌಡ ಶಿಕ್ಷಣವನ್ನು ದುಗ್ಗಲಡ್ಕ ಫ್ರೌಢಶಾಲೆಯಲ್ಲಿ ಪೂರೈಸಿದ್ದಾರೆ. ಇವರು ಬೆಳಂದೂರು ಗ್ರಾಮದ ಕೊಡಂಗೆ ಭಾಸ್ಕರ್ ಪೂಜಾರಿಯವರನ್ನು ವಿವಾಹವಾದ ಬಳಿಕ ಸಮಾಜ ಸೇವೆ ಮಾಡುವ ಮನಸು ಮಾಡಿದರು.
ಇದಕ್ಕೆ ಪತಿಯ ಬೆಂಬಲ ದೊರೆಯಿತು. ಬೆಳಂದೂರು ಮಹಿಳಾ ಬಿಲ್ಲವ ಸಂಘದ ಕಾರ್‍ಯದರ್ಶಿಯಾಗಿದ್ದರು. ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ೭ ವರ್ಷ ನಿರ್ದೇಶಕರಾಗಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಸ್ವಸಹಾಯ ಸಂಘ ಮತ್ತು ಶ್ರೀ ಶಕ್ತಿ ಸ್ವಸಹಾಯ ಸಂಘಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ತೇಜಾಕ್ಷಿರವರು ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿದರು. ೨೦೧೬ರಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ವರ್ಧಿಸಿ, ಸದಸ್ಯರಾಗಿ ಆಯ್ಕೆಯಾದರು. ೨೦೨೧ರಲ್ಲಿ ಮತ್ತೇ ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಇವರು ಪ್ರಥಮ ಎರಡುವರೆ ವರ್ಷಗಳ ಅವಧಿಯಲ್ಲಿ ಉಪಾಧ್ಯಕ್ಷರಾದರು, ಇದೀಗ ಮತ್ತೇ ಜನವರಿ ೨೪ ರಿಂದ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.