
ನಿಂತಿಕಲ್ ನಿಂದ ಬೆಳ್ಳಾರೆಗೆ ಹಾದು ಹೋಗುವ ರಾಜ್ಯ ಹೆದ್ದಾರಿ(SH 273)ಯು ದುರಸ್ಥಿಯಾಗದೆ ಅನೇಕ ವರ್ಷಗಳು ಸಂದಿದೆ. ಪ್ರಸ್ತುತ ನಿಂತಿಕಲ್ ನಿಂದ ಬಾಳಿಲದವರೆಗೆ ರಸ್ತೆಯು ಕಳೆದ ಮಳೆಗಾಲದಲ್ಲಿಯೇ ತೀರಾ ಹದಗೆಟ್ಟಿದ್ದು ವಾಹನ ಸವಾರರು ವಾಹನ ಚಲಾಯಿಸಲು ಪರದಾಡುತ್ತಿದ್ದಾರೆ.ಅದೇ ರೀತಿ ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಸಾಗಿ ರಸ್ತೆಯು ಹಳ್ಳದಂತಾಗಿತ್ತು.ಇದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿತ್ತು ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಆದರೆ ಇತ್ತೀಚೆಗೆ 6.2 ಕಿ. ಮೀ ಉದ್ದದ ಈ ರಸ್ತೆಯ ಮರು ಡಾಮರೀಕರಣಕ್ಕಾಗಿ ಕೇಂದ್ರದ CIRF ಫಂಡ್ ಮೂಲಕ ರೂಪಾಯಿ 3.72 ಕೋಟಿ ಅನುದಾನ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆಗಳು ಕೂಡಾ ಮುಗಿದಿರುತ್ತದೆ.ಈ ಪ್ರಕ್ರಿಯೆಯ ಒಪ್ಪಂದದ ಪ್ರಕಾರ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು 6 ತಿಂಗಳ ಒಳಗೆ ಕಾಮಗಾರಿಯನ್ನು ಪೂರ್ತಿಗೊಳಿಸಬೇಕಿದೆ.ಆದರೆ ಕಾಮಗಾರಿಯು ಇನ್ನೂ ಕೂಡಾ ಆರಂಭಗೊಳ್ಳದೇ ಇರುವುದರಿಂದ ಮುಂದಿನ ಒಂದೆರಡು ತಿಂಗಳಲ್ಲಿ ಮಳೆಯೂ ಆರಂಭವಾಗುವ ಸಾಧ್ಯತೆ ಇರುವುದರಿಂದ ತಡ ಮಾಡಿದರೆ ನಿಗದಿತ ಸಮಯದಲ್ಲಿ ಕಾಮಗಾರಿಯು ಪೂರ್ಣಗೊಳಿಸುವುದು ಕಷ್ಟಸಾಧ್ಯ.ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ವಿಳಂಬ ಮಾಡದೆ ಕಾಮಗಾರಿಯು ಕೂಡಲೇ ಆರಂಭಗೊಳಿಸಲು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.ಒಂದು ವೇಳೆ ವಿನಾ ಕಾರಣ ಕಾಮಗಾರಿಯನ್ನು ಆರಂಭಿಸಲು ವಿಳಂಬ ಧೋರಣೆ ಅನುಸರಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಹೋರಾಟ ಕೈಗೊಳ್ಳಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಹಾಗೂ RTI ಕಾರ್ಯಕರ್ತರಾದ ಶರೀಫ್ ಭಾರತ್ ಬಾಳಿಲರವರು ತಿಳಿಸಿರುತ್ತಾರೆ.