ತಾಂತ್ರಿಕತೆಯು ಇಂದು ಶಿಕ್ಷಣ ಪ್ರಕ್ರಿಯೆಯನ್ನು ಬಲಗೊಳಿಸಿದೆ. ಅಂತರ್ಜಾಲದಿಂದ ನೇರವಾಗಿ ಪಾಠಗಳನ್ನು ತರಗತಿಗಳಲ್ಲಿ ತೋರಿಸಲು ಸಾಧ್ಯ. ಅಂತಹ ಒಂದು ಸೌಲಭ್ಯವೇ ಸ್ಮಾರ್ಟ್ ಬೋರ್ಡ್.
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಸ್ಮಾರ್ಟ್ ಬೋರ್ಡ್ ಅನ್ನು ಕೊಡುಗೆಯಾಗಿ ನೀಡಲಾಗಿದ್ದು, ಅದು ಉಪಯುಕ್ತವಾಗಲಿ ಎಂದು ರೈಟ್ ಟು ಲೀವ್ ಸಂಸ್ಥೆಯ ನಿರ್ದೇಶಕ ಶ್ರೀ ರಮೇಶ್ ರವರು ಹೇಳಿದರು.ಇದರ ಉದ್ಘಾಟನಾ ಕಾರ್ಯಕ್ರಮವು ಮಾ.27ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜರಗಿತು.

ರೈಟ್ ಟು ಲೀವ್ ಸಂಸ್ಥೆಯು ರಾಜ್ಯದಾದ್ಯಂತ ಸುಮಾರು 200 ಶಾಲೆಗಳಿಗೆ ವಿವಿಧ ಕೊಡುಗೆಗಳನ್ನು ನೀಡಿದೆ. ಆದರೆ ಇಂತಹ ಕೊಡುಗೆಗಳನ್ನು ಅತ್ಯಂತ ಸಮರ್ಪಕವಾಗಿ ಉಪಯೋಗಿಸುತ್ತಿರುವುದು ಈ ಸಸ್ಯಸಂಪದ್ಭರಿತ ಸ್ನೇಹ ಶಾಲೆ ಮಾತ್ರ. ವಿದ್ಯೆಯೊಂದಿಗೆ ಸದ್ಗುಣಗಳನ್ನು ಕಲಿಸುವ ಇಂತಹ ಶಾಲೆಯನ್ನು ಬೇರೆಲ್ಲಿಯೂ ಕಂಡಿಲ್ಲ ಎಂಬುದಾಗಿ ರಮೇಶ್ ಹೇಳಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ರೈಟ್ ಟು ಲೀವ್ ಸಂಸ್ಥೆಯು ಸಮಾಜಕ್ಕೆ ಸಹಾಯ ಮಾಡುವುದರ ಜೊತೆಗೆ ಸಂಪನ್ಮೂಲದ ಹಂಚಿಕೆಯ ಕಾರ್ಯ ಮಾಡುತ್ತಿದೆ. ನಮ್ಮ ಶಾಲಾ ಆವರಣದಲ್ಲಿ ಕಂಪ್ಯೂಟರ್ ತರಗತಿ ನಡೆಸುವುದರ ಜೊತೆಗೆ, ಶಾಲಾ ವಿದ್ಯಾರ್ಥಿಗಳಿಗಾಗಿ ಟಿಂಕರಿಂಗ್ ಲ್ಯಾಬ್ ವ್ಯವಸ್ಥೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ, ಶಾಲಾ ಶಿಕ್ಷಕಿ ಶ್ರೀಮತಿ ಪ್ರತಿಮಾಕುಮಾರಿ ಕೆ ಎಸ್ ವಂದಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಸವಿತಾ ಎಂ ನಿರೂಪಿಸಿದರು.